ಶಿವಮೊಗ್ಗ: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಪಕ್ಷದ ಚೌಕಟ್ಟನ್ನು ಮೀರಿ ಸಾಮಾಜಿಕ ಹೊಣೆಗಾರಿಕೆಯ ಯಾತ್ರೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಮುರಳಿ ತಿಳಿಸಿದರು.

ಅವರು ನಗರದ ಶಿವಪ್ಪನಾಯಕ ವೃತ್ತದಲ್ಲಿ ಶಿವಮೊಗ್ಗ ನಗರ ಎನ್.ಎಸ್.ಯು.ಐ. ವತಿಯಿಂದ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ಹಾಗೂ ರಾಷ್ಟçಪತಿ ಮಹಾತ್ಮಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಜೆಪಿ 8 ರ್ಷಗಳ ಹಿಂದೆ ‘ಬಿಜೆಪಿಯೇ ಭರವಸೆ’ ಎಂಬ ಘೋಷವಾಕ್ಯದಡಿ ಅಧಿಕಾರಕ್ಕೆ ಬಂತು. ಅಲ್ಲಿಂದ ಇಲ್ಲಿಯವರೆಗೂ ಎಲ್ಲವನ್ನೂ ಭರವಸೆಗಳಲ್ಲೆ ಉಳಿಸಿದೆ. 2014 ರಲ್ಲಿ 5ರೂ.ಗೆ ಒಂದು ಕೆಜಿ ಉಪ್ಪು ಸಿಗುತ್ತಿತ್ತು. ಇಂದು 15 ರೂ.ಗೆ ಏರಿಕೆಯಾಗಿದೆ. 60 ರೂ.ಗೆ ಸಿಗುತ್ತಿದ್ದ ಪೆಟ್ರೋಲ್ 100 ರೂ.ನ ಗಡಿ ದಾಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಸರ್ಕಾರ ಅದಾನಿ – ಅಂಬಾನಿಯವರ ರಕ್ಷಣೆಗಿರುವ ಸರ್ಕಾರ. ಅವರ ಅನುಕೂಲಕ್ಕಾಗಿ ಸರ್ಕಾರ ನಡೆಯುತ್ತಿದೆ. ಅವರ ಕಂಪನಿಗಳಿಗಾಗಿರುವ 18 ಸಾವಿರ ಕೋಟಿ ನಷ್ಟವನ್ನು ಭರಿಸಲು ಸಾರ್ವಜನಿಕ ಉದ್ದಿಮೆಗಳಿಗೆ ಬೀಗ ಹಾಕಲಾಗುತ್ತಿದೆ.
ಗಾಂಧಿಯವರನ್ನು ಕೊಂದಿದ್ದು ಗೋಡ್ಸೆ ಎಂಬ ಒಬ್ಬ ವ್ಯಕ್ತಿಯಲ್ಲ. ಅಂದು ದೇಶವಿಭಜನಗೆ ಕಾರಣವಾಗಿದ್ದ ಹಿಂದೂ ಮಹಾಸಭಾ 1937ರ ಸಭೆಯಲ್ಲಿ ದೇಶವಿಭಜನೆಯ ನಿರ್ಧಾರ ಕೈಗೊಂಡಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸಿತ್ತು. ಅವರನ್ನು ಸಂವಿಧಾನ ರಚನಾ ಸಮಿತಿ ಸಭೆಯ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ಗೋಡ್ಸೆಯ ರೂಪದಲ್ಲಿ ಒಂದು ಸಿದ್ಧಾಂತವೇ ಗಾಂಧಿಯವರನ್ನು ಕೊಂದಿತ್ತು ಎಂದರು.

ಕಾಂಗ್ರೆಸ್ ಈ ಹಿಂದೆ ಎರಡು ಬಾರಿ ಶಿಕ್ಷಣ ನೀತಿಗಳನ್ನು ರೂಪಿಸಿದೆ. ಮೊದಲು ರೂಪಿಸಿದ ಶಿಕ್ಷಣ ನೀತಿಯಲ್ಲಿ ಸರ್ವರಿಗೂ ಶಿಕ್ಷಣದ ಗುರಿ ಹೊಂದಲಾಗಿತ್ತು. 1983ರಲ್ಲಿ ರೂಪಿಸಿದ ಎರಡನೇ ಶಿಕ್ಷಣ ನೀತಿ ಜಾಗತಿಕ ಮಾರುಕಟ್ಟೆಗೆ ಅನುಕೂಲವಾಗುವಂತಹ ಶಿಕ್ಷಣ ಒದಗಿಸಿದರೆ, ಕೊರೋನಾ ಸಂದರ್ಭದಲ್ಲಿ ಯಾವುದೇ ಚರ್ಚೆ ಇಲ್ಲದೇ ಜಾರಿಗೆ ತಂದ ಎನ್‌ಇಪಿ, ಬಡವರ, ದಲಿತರ, ಅಲ್ಪಸಂಖ್ಯಾತರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದ ನೆಲದಲ್ಲಿ ಸ್ವಾತಂತ್ರö್ಯವೀರರು ಹುಟ್ಟಿದ್ದಾರೆ. ಜಾತ್ಯತೀತ ನಿಲುವುಗಳ ನೆಲ. ಸಮಾಜವಾದಿಗಳ ತವರು. ಇಂತಹ ನೆಲದ ಕಾಲೇಜು ಕ್ಯಾಂಪಸ್‌ಗಳಲ್ಲಿ ಇಂದು ಗೋಡ್ಸೆ ವೈರಸ್ ಹರಡಲಾಗುತ್ತಿದೆ. ಇದನ್ನು ತಡೆಯಬೇಕು. ಗಾಂಧಿ ಚಿಂತನೆಗಳು ಮೊಳಗಬೇಕು. ಆ ನಿಟ್ಟಿನಲ್ಲೇ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮೂಲಕ ಸಂದೇಶ ನೀಡಿದ್ದಾರೆ. ಯುವಕರು ಅದನ್ನು ಅನುಸರಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ರಾಹುಲ್ ಗಾಂಧಿಯವರು 138 ದಿನಗಳ ಕಾಲ ದೇಶದ ಉದ್ದಗಲಕ್ಕೂ 4084 ಕಿ.ಮೀ. ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಲ್ಲ, ದೇಶದ ಮನಸ್ಸುಗಳನ್ನು ಒಂದುಗೂಡಿಸುವ ಯಾತ್ರೆ. ಅದನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಬಣ್ಣಿಸಿದರು.
ರಾಜ್ಯ ಕಾಂಗ್ರೆಸ್ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಪಿ. ದಿನೇಶ್, ಅಡ್ಡು ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಲೀಮ್ ಪಾಷಾ ಹಾಗೂ ದೀಪಕ್ ಸಿಂಗ್, ಅಲ್ಪಸಂಖ್ಯಾತರ ನಾಯಕರಾದ ಮೊಹಮ್ಮದ್ ನಿಹಾಲ್ , ಆರಿಫ್ ,ಜಿಲ್ಲಾ ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ವಿಜಯಕುಮಾರ್, ರವಿ ಕಾಟಿಕೆರೆ, ಚರಣ್, ಹರ್ಷಿತ್, ಕೆ. ಚೇತನ್, ಸಿ.ಜಿ. ಮಧುಸೂದನ್, ಶಿವು ಮಲಗುಪ್ಪ, ಗಿರೀಶ್ , ವಿಕ್ರಂ, ರವಿ, ಸೇರಿದಂತೆ ಹಲವರಿದ್ದರು.

ವರದಿ ಪ್ರಜಾ ಶಕ್ತಿ…