ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಹಾಗೂ ಗುಣಗಳನ್ನು ಕಲಿಸಿಕೊಡುವ ಕೆಲಸ ಆಗಬೇಕು. ಸಂಸ್ಕೃತಿ ಪರಂಪರೆಯ ಅರಿವು ಮೂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಲಿಟಲ್ ಎಲಿ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಮನಯೇ ಮೊದಲ ಪಾಠಶಾಲೆ ಆಗಿರುವುದರಿಂದ ಪೋಷಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಶಿಕ್ಷಣದ ಜತೆಯಲ್ಲಿ ಮನೆಗಳಲ್ಲಿ ಮಕ್ಕಳಿಗೆ ಮೌಲ್ಯಯುತ ಜೀವನ ನಡೆಸುವ ಬಗ್ಗೆ ತಿಳವಳಿಕೆ ಮೂಡಿಸಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಮೌಲ್ಯಗಳನ್ನು ಕಲಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಆಗುತ್ತಿದೆ. ಮಕ್ಕಳಿಗೆ ಯುವಪೀಳಿಗೆಗೆ ಅವಶ್ಯವಿರುವ ಕೆಲಸಗಳು ಆಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಶಿವಮೊಗ್ಗ ಪ್ರಮುಖವಾಗಿ ಗುರುತಿಸಿಕೊಳ್ಳಲಿದೆ. ಎಲ್ಲರೂ ಉತ್ತಮ ಸಾಧನೆ ಮಾಡಬೇಕು ಎಂದರು.
ವಿದೇಶಿ ಸಂಸ್ಕೃತಿ, ಪಾಶ್ಚಾತ್ಯ ಶೈಲಿಯ ಅನುಕರಣೆ ಮಾಡುವುದು ಬೇಡ, ಶಾಲಾ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಂಪರೆಯ ಅರಿವು ಮೂಡಿಸುವ ರೀತಿಯಲ್ಲಿ ಚಟುವಟಿಕೆಗಳನ್ನು ಆಯೋಜಿಸಬೇಕು. ಇದರಿಂದ ಮಕ್ಕಳಿಗೆ ಸಂಸ್ಕೃತಿ ಪರಂಪರೆಯ ಪರಿಚಯವಾಗುತ್ತದೆ ಎಂದು ತಿಳಿಸಿದರು.
ವಿಠ್ಠಲ್ ಭಂಡಾರಿ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು. ಎಲ್ಲ ಮಕ್ಕಳಿಗೂ ಒಳ್ಳೆಯದಾಗಲಿ ಎಂದು ಆಶಿಸಿದರು.
ಪ್ರತಿಭಾ ಅರುಣ್ ಮಾತನಾಡಿ, ಮಕ್ಕಳ ಕಲಿಕಾ ಸಾಮಾರ್ಥ್ಯ ಹೆಚ್ಚಿಸುವ ರೀತಿ ಶಿಕ್ಷಕರು ಉತ್ತಮವಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಕೌಶಲ್ಯಗಳು ಬೆಳೆದರೆ ಜೀವನದಲ್ಲಿ ಉನ್ನತ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಪ್ರಮುಖರಾದ ಅನಿಲ್ ಶೆಟ್ಟಿ, ಬಿಂದು ಅನಿಲ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.