ಸರ್ವಜ್ಞರನ್ನು ಸಾಂಪ್ರದಾಯಿಕ ಜ್ಞಾನ ಸಂಗ್ರಹದ ಪಿತಾಮಹ ಎನ್ನಬಹುದು. ಇವರು ಇಡೀ ದೇಶ ಸುತ್ತಿ ಸಾಂಪ್ರದಾಯಿಕ ಜ್ಞಾನವನ್ನು ಸಂಗ್ರಹಿಸಿ, ತ್ರಿಪದಿಗಳ ಮೂಲಕ ಅದರ ಸಾರವನ್ನು ಸಾರಿದ್ದಾರೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಶಶಿಧರ್ ಕೆ ಸಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕುಂಬಾರರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಲೋಕ ಸಂಚಾರ ಮಾಡಿ ಅಗಾಧ ಪ್ರಮಾಣದ ಮಾಹಿತಿಯನ್ನು, ಜ್ಞಾನವನ್ನು ಸಂಗ್ರಹಿಸಿ, ಅದನ್ನು ಅರ್ಥ ಮಾಡಿಕೊಂಡು ತಮ್ಮ ತ್ರಿಪದಿಗಳಲ್ಲಿ ನೀಡಿರುವ ಸರ್ವಜ್ಞರ ವಚನಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಹಾಗೂ ಸಂಶೋಧನೆಗೆ ಒಳಪಡಿಸುವ ಅಗತ್ಯವಿದೆ. ಇವರನ್ನು ಜಾತಿಗೆ ಅಂಟಿಸದೇ ಇವರ ಕೆಲಸ ಗುರುತಿಸುವ ಮತ್ತು ವಿಶಾಲವಾಗಿ ಅರ್ಥೈಸುವುದಾಗಬೇಕು.
ಚುರುಕು ಬುದ್ದಿಯುಳ್ಳ, ಸರಳತೆಯಿಂದ ಕೂಡಿದ, ಅಹಂ ಹಾಗೂ ಹಂಗಿಲ್ಲದ ಅವರು ಸ್ವತಂತ್ರ ವಿಚಾರಗಳಿಗೆ ಮಾರು ಹೋಗಿ ವಿಶ್ವ ಮಾನವ ತತ್ವವನ್ನು ಪ್ರತಿಪಾದಿಸಿದ್ದರು.
ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಸರ್ವಜ್ಞರು ಬರೆಯದ ಚೇತನವಿಲ್ಲ. 7,70,770 ತ್ರಿಪದಿ ರಚಿಸಿದ್ದಾರೆಂದು ಅವರ ತ್ರಿಪದಿಯೇ ಹೇಳುತ್ತದೆ. ಆದರೆ ನಮಗೆ ಶೇ.2 ರಷ್ಟೂ ಲಭಿಸಿಲ್ಲ. ಅವರ ತ್ರಿಪದಿಗಳು ಮಾಹಿತಿಗಳ ಆಗರ. ಒಂದೊಂದು ತ್ರಿಪದಿಯನ್ನು ಒಂದೊಂದು ದಿನ ವಿಶ್ಲೇಷಿಸಬಹುದು.
ಇಂತಹ ಇವರ ವಚನಗಳು ಸಂಶೋದನೆಗೆ ಒಳಗಾಗಬೇಕು. ಅವರ ತ್ರಿಪದಿಗಳಲ್ಲಿ ಅತ್ಯಂತ ವೈಜ್ಞಾನಿಕ ಅಂಶಗಳನ್ನು ಗುರುತಿಸಬಹುದು. ಅವರ ವಚನ ಸೇರಿದಂತೆ ವಚನಗಳನ್ನು ವೈಜ್ಞಾನಿಕವಾಗಿ ಸಂಶೋಧನೆಗೊಳಪಡಿಸುವ, ಅಧ್ಯಯನ ನಡೆಸುವ ಅವಶ್ಯಕತೆ ಇದೆ.
ಆರೋಗ್ಯ, ಆಹಾರ, ಮಳೆ, ಬೆಳೆ, ಅರ್ಥವ್ಯವಸ್ಥೆ ಸೇರಿದಂತೆ ಸಮಗ್ರ ಕ್ಷೇತ್ರಗಳ ಕುರಿತು ಇವರು ವಚನಗಳನ್ನು ರಚಿಸಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಮುಂದಿನ ಪೀಳಿಗೆಗೆ ಇವರ ವಚನಗಳ ಜ್ಞಾನವನ್ನು ಹಂಚುವ ಅಗತ್ಯವಿದೆ ಎಂದರು.
ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷರಾದ ಬಿ.ಸಿ.ಲೋಕಪ್ಪ ಬೊಂಬಳಗಿ ಹಾಗೂ ತಾಲ್ಲೂಕು ಅಧ್ಯಕ್ಷ ಎಸ್ ಮಣಿ ಮಾತನಾಡಿ ಶ್ರೀ ಸರ್ವಜ್ಞ ಜಯಂತಿಯ ಶುಭ ಕೋರಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಸಮಾಜ ಬಾಂಧವರು ಉಪಸ್ಥಿತರಿದ್ದರು.