ಶಿವಮೊಗ್ಗ : ಜೀವನವೆಂಬುದು ನಮಗೆ ಸಿಕ್ಕ ಅಮೂಲ್ಯವಾದ ಕೊಡುಗೆಯಾಗಿದ್ದು, ಅಂತಹ ಬದುಕನ್ನು ಸಮರ್ಪಕವಾಗಿ ಸಾರ್ಥಕಗೊಳಿಸಿಕೊಳ್ಳಿ ಎಂದು ಪ್ರಖ್ಯಾತ ನರಶಸ್ತ್ರರೋಗ ತಜ್ಞರಾದ ಡಾ. ತಿಮ್ಮಪ್ಪ ಹೆಗಡೆ ಅಭಿಪ್ರಾಯಪಟ್ಟರು.
ನಗರದ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಉಪನ್ಯಾಸ ಸರಣಿಗಳ 11 ನೇ ಮಾಲಿಕೆಯಲ್ಲಿ ‘ಜೀವನ – ಒಂದು ಉಡುಗೊರೆ’ ವಿಷಯ ಉದ್ದೇಶಿಸಿ ಮಾತನಾಡಿದರು.
ಬದುಕನ್ನು ಉಡುಗೊರೆಯಾಗಿ ಸ್ವೀಕರಿಸಬೇಕಿದೆ. ಇಡೀ ಜಗತ್ತನ್ನು ಬದಲಾಯಿಸುತ್ತೇನೆ ಎಂಬ ಭ್ರಮೆ ಬೇಡ. ನನ್ನನ್ನು ನಾನು ಸದಾ ಬದಲಾಯಿಸಿಕೊಳ್ಳುತ್ತೇನೆ ಎಂಬ ಮುಕ್ತತೆ ಇರಲಿ. ಜಗತ್ತಿನಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಅವರವರ ಜೀವನ ತನ್ನದೇ ಪ್ರಾಮುಖ್ಯತೆ ಪಡೆದಿದೆ.
ಜೀವನದಲ್ಲಿ ಎಲ್ಲರಿಗೂ ಪಿತೃ ಋಣ, ಲೋಕ ಋಣ, ಆಚಾರ್ಯ ಋಣಗಳಿವೆ. ಮಕ್ಕಳಾಗಿ ಹೆಮ್ಮೆಪಡುವ ಕೆಲಸದಿಂದ ಪೋಷಕರ ಋಣ ತೀರಿಸಬಹುದು. ಪಡೆಯುವ ಮನೋಭಾವದಿಂದ ಹೊರಬಂದು ಇತರರಿಗೆ ಕೊಡುಗೆದಾರರಾಗಿ ಬದಲಾಗುವುದರ ಮೂಲಕ ಲೋಕದ ಋಣ ತೀರಿಸಬಹುದಾಗಿದೆ.
ಧನಾತ್ಮಕ ಮಾನಸಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿ ದೈಹಿಕವಾಗಿ ಬಲವಾಗಿರದಿದ್ದರೂ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾನೆ. ಮಾನವನ ಮೆದುಳು ಮಾತಿಗಿಂತ ಅನುಭವಾಧಾರಿತ ವಿಚಾರಗಳನ್ನು ಹೆಚ್ಚು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಎಂತಹ ಅದ್ಭುತತೆಯನ್ನು ನಿರ್ಮಿಸುವ ಶಕ್ತಿ ಮಾನವನ ಮೆದುಳಿಗಿದೆ.
ಬದುಕಿನ ಪ್ರತಿ ಸನ್ನಿವೇಶಗಳನ್ನು ಅನುಭವಿಸಬೇಕಿದೆ. ಅದು ಸೋಲೆಂಬ ಹೊಸತನದ ಕಲಿಕೆಗೆ ಅವಕಾಶ ಮಾಡಬಹುದು, ಅಥವಾ ಯಶಸ್ಸಿನ ಸಂಭ್ರಮನ್ನು ಆಚರಿಸಲು ಅವಕಾಶ ಮಾಡಿಕೊಡುತ್ತದೆ.
ಇತರರ ಮೌಡ್ಯತೆಗಳನ್ನು ಎಂದಿಗೂ ಬದಲಾಯಿಸಲಾಗದು. ಮೌಡ್ಯತೆಯಾಗಲಿ, ಬದುಕಾಗಲಿ ವಿಶ್ವಾಸದಿಂದ ಕೂಡಿರುತ್ತದೆ. ಬದುಕನ್ನ ಕೇವಲ ನಂಬಿಕೆಗಳಿಂದ ಮುನ್ನಡೆಸಬೇಡಿ ವಿಶ್ವಾಸದಿಂದ ಮುನ್ನಡೆಸಿ.
ಜೀವನದಲ್ಲಿ ಸಮರ್ಪಕ ಬಳಕೆಯಾಗದೇ ಆತ್ಮಹತ್ಯೆಯಿಂದ ವ್ಯರ್ಥವಾಗಬಾರದು. ಯಾರಲ್ಲಿ ನಿರ್ದಿಷ್ಟ ಗುರಿ ಇರುವುದಿಲ್ಲವೊ ಅವರೇ ಆತ್ಮಹತ್ಯೆಯ ಆಲೋಚನೆ ಮಾಡುವುದು. ಪ್ರತಿ ಸಂದರ್ಭಗಳನ್ನು ಸ್ವೀಕರಿಸಿ. ಸವಾಲಿನ ಸಂದರ್ಭವಾದರೆ ಪರಿಹಾರ ಹುಡುಕಿ ಸಾವಿನ ಮಾರ್ಗವನ್ನಲ್ಲ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಮಧುರಾವ್, ಎನ್.ಟಿ.ನಾರಾಯಣರಾವ್, ನ್ಯಾಷನಲ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳಿ ಎಂ.ಫಾರ್ಮ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.