ಶಿವಮೊಗ್ಗ: ಈಶ್ವರಪ್ಪನವರ ರಾಜೀನಾಮೆಯನ್ನು ಸ್ವೀಕರಿಸದೆ ಅವರಿಗೇ ಟಿಕೆಟ್ ನೀಡಬೇಕೆಂದು ಜಿಲ್ಲ ಬೇಡ ಜಂಗಮ ಸಮಾಜ ಆಗ್ರಹಿಸಿದೆ.

ಮೀಡಿಯಾ ಹೌಸ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬೇಡ ಜಂಗಮ ಸಮಾಜದ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ಹಲವಾರು ಹಿರಿಯರು ಹಾಗೂ ಭ್ರಷ್ಟಾಚಾರ ಆರೋಪಿಗಳಿಗೆ ಟಿಕೆಟ್ ನೀಡಲಾಗಿದೆ. ಹಲವು ನಾಯಕರ ಪುತ್ರರಿಗೂ ಹೈಕಮಾಂಡ್ ಟಿಕೆಟ್ ನೀಡಿದೆ. ಭ್ರಷ್ಟಾಚಾರದ ಆರೋಪ ಹೊತ್ತ ಐಎಂಎ ಹಗರಣದ ಐಎಎಸ್ ಅಧಿಕಾರಿ ಸಿ.ನಾಗರಾಜ್, ಮೊಟ್ಟೆ ಹಗರಣದ ಶಶಿಕಲಾ ಜೊಲ್ಲೆ, ರಮೇಶ್ ಜಾರಕಿಹೊಳಿ, ಕುಟುಂಬ ರಾಜಕಾರಣದ ಹಿನ್ನೆಲೆ ನೋಡುವುದಾದರೆ ಬಿ.ವೈ. ವಿಜಯೇಂದ್ರ, ರಮೇಶ್‌ಕತ್ತಿ, ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್‌ರವರಿಗೆ ಟಿಕೆಟ್ ನೀಡಲಾಗಿದೆ. ಈಶ್ವರಪ್ಪನವರಿಗೆ ಟಿಕೆಟ್ ಯಾಕೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ಲೋಕೇಶ್ ದೊಟ್ಟಮಠ ಮಾತನಾಡಿ, ಈಶ್ವರಪ್ಪನವರು ಬಿಜೆಪಿ ಕಟ್ಟಿ ಬೆಳೆಸಿದ್ದಲ್ಲದೆ ಎಲ್ಲಾ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರನ್ನು ಪಕ್ಷ ಕೈಬಿಟ್ಟದ್ದು ನಮಗೆಲ್ಲರಿಗೂ ಆಶ್ವರ್ಯ ತಂದಿದೆ. ಅವರಿಗೆ ಆರೋಗ್ಯ ಸಮಸ್ಯೆ ಇಲ್ಲ. ಚಟುವಟಿಕೆಯಿಂದ ಇದ್ದಾರೆ. ಅವರಿಗೆ ಹೈಕಮಾಂಡ್ ಟಿಕೆಟ್ ನೀಡಲೇಬೇಕು. ಜಂಗಮ ಮೀಸಲಾತಿ ಹೋರಾಟಕ್ಕೂ ಅವರು ಬೆಂಬಲ ವ್ಯಕ್ತಪಡಿಸಿದ್ದರು. ಸರಳ ವ್ಯಕ್ತಿಯಾದ ಅವರು ಸಮಾಜಕ್ಕೆ ಅನೇಕ ನೆರವು ನೀಡಿದ್ದಾರೆ ಎಂದರು
ಈಶ್ವರಪ್ಪನವರು ಕೂಡ ಸ್ವಯಂ ನಿವೃತ್ತಿ ಪತ್ರವನ್ನು ಹಿಂಪಡೆಯಬೇಕು ಎಂದು ನಾವು ಸಮಾಜದ ಪರವಾಗಿ ಮನವಿ ಮಾಡುತ್ತೇವೆ. ಒಂದುವೇಳೆ ಅವರಿಗೆ ಟಿಕೆಟ್ ನೀಡದಿದ್ದಲ್ಲಿ ಪುತ್ರ ಕಾಂತೇಶ್‌ಗೆ ನೀಡಬೇಕು. ಹಿಂದುತ್ವವನ್ನು ಪ್ರತಿಪಾದಿಸಿದ ನಾಯಕರು. ಆದ್ದರಿಂದ ಅವರಿಗೆ ಹೈಕಮಾಂಡ್ ಮನ್ನಣೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸುಜಯಪ್ರಸಾದ್, ಉಮೇಶ್ ಹಿರೇಮಠ್, ಸುನಂದಾ ವಿಜಯಕುಮಾರ್, ಜ್ಯೋತಿ ನಾಗರಾಜ್, ಪ್ರೇಮಾ, ಸೋಮಶೇಖರ್, ವಿನಯಾ ಶಾಸ್ತಿç, ಬಸಯ್ಯ ಸೇರಿದಂತೆ ಹಲವರಿದ್ದರು.

ವರದಿ ಪ್ರಜಾ ಶಕ್ತಿ…