ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತರಾಗಿರುವ ಈಶ್ವರಪ್ಪನವರ ಇತ್ತೀಚಿನ ಹೇಳಿಕೆಗಳು ಬಿಜೆಪಿ ವಿರುದ್ಧದ ತಮ್ಮ ಅಸಹನೆಯನ್ನು ಎತ್ತಿ ತೋರಿಸುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಅಧಿಕಾರಕ್ಕೂ ಬರುವ ಮೊದಲೇ ಸಿಎಂ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದೆ, ಇತ್ತ ಟಿಕೆಟ್ ವಂಚಿತರಾಗಿರುವ ಕೆ.ಎಸ್.ಈಶ್ವರಪ್ಪನವರು ಬಿಜೆಪಿಯನ್ನು ಮೇಲ್ನೋಟಕ್ಕೆ ಬೆಂಬಲಿಸುವಂತೆ ಕಂಡು ಬಂದರೂ, ತನಗೆ ಟಿಕೆಟ್ ತಪ್ಪಿಸಿದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂಬುದಕ್ಕೆ, ಇತ್ತೀಚೆಗೆ ಮುಂದಿನ ಸಿಎಂ ಸಿ.ಟಿ.ರವಿ ಅಗಲಿ ಎಂಬ ಹೇಳಿಕೆಯನ್ನು ಬಹಿರಂಗ ಸಭೆಯಲ್ಲೇ ನೀಡಿ, ಇದೀಗ ಆ ಹೇಳಿಕೆ ಪಕ್ಷದಲ್ಲಿ ನಾನಾ ಚರ್ಚೆಗಳಿಗೆ ಕಾರಣವಾಗಿದೆ.
ಕೆ.ಎಸ್. ಈಶ್ವರಪ್ಪನವರು ಬಿಜೆಪಿಯಲ್ಲೇ ಇದ್ದುಕೊಂಡು ತಮ್ಮ ವಿರೋಧಿ ಬಣದ ಷಡ್ಯಂತ್ರದ ವಿರುದ್ಧ ನಿಲ್ಲಲ್ಲು ಮುಂದಾಗಿದ್ದು, ಇದರಿಂದ ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಬೇಕು ಎಂದು ಪಣತೊಟ್ಟಿರುವವರಿಗೆ ತಿರುಗೇಟು ನೀಡಲು ಇವರೊಡನೆ ಹಿರಿಯ ಬಿಜೆಪಿಗರು ಮುಂದಾಗಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರ ತೋರಿಕೆಯ ಪ್ರಚಾರದಲ್ಲಿ ತೊಡಗಿದ್ದು, ಇದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕಾರಿ ಆಗಲಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಕಾರ್ಯಕರ್ತರುಗಳೇ ಇಲ್ಲ ಎನ್ನುವ ಈಶ್ವರಪ್ಪನವರ ಹೇಳಿಕೆಯನ್ನು ನಿರಾಕರಿಸಿರುವ ರಮೇಶ್ ಇವರು, ಶಿವಮೊಗ್ಗ ನಗರದ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಗೆಲುವಿಗೆ ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಇವರ ನೇತೃತ್ವದಲ್ಲಿ ಇಡೀ ಜಿಲ್ಲಾ ಘಟಕ, ಬಹುದೊಡ್ಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರ ಪಡೆ ಪಣತೊಟ್ಟು ಕೆಲಸ ನಿರ್ವಹಿಸುತ್ತಿದೆ ಎಂದಿದ್ದಾರೆ.