ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರ ವಿಮಾನಗಳ ಸಂಚಾರ ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆ ಇದೆ ಎಂದು ಇಂಡಿಗೋ ಏರ್‌ಲೈನ್ಸ್ ಕರ್ನಾಟಕ ಸೇಲ್ಸ್ ಸೀನಿಯರ್ ಮ್ಯಾನೇಜರ್ ಸೌರಭ್ ಸಚದೇವ್ ಹೇಳಿದರು.


ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಜ್ರ ಮಹೋತ್ಸವದ ಭಾಗವಾಗಿ ಆಯೋಜಿಸಿದ್ದ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಮೊಗ್ಗದಿಂದ ಹೆಚ್ಚು ಅವಶ್ಯಕತೆ ಇರುವ ಹಾಗೂ ಪ್ರಮುಖ ಸ್ಥಳಗಳಿಗೆ ಸಂಚಾರ ಮಾರ್ಗ ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸೇವೆ ಆರಂಭ ಆಗುವುದರಿಂಧ ಕೈಗಾರಿಕಾ ಹಾಗೂ ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕೈಗಾರಿಕೆ, ಉದ್ಯಮಗಳ ಸ್ಥಾಪನೆ ಹೆಚ್ಚಿಸುವ ಜತೆಯಲ್ಲಿ, ಶಿವಮೊಗ್ಗ-ದಾವಣಗೆರೆ, ಶಿವಮೊಗ್ಗ-ಚಿತ್ರದುರ್ಗ ಒಳಗೊಂಡಂತೆ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾದಲ್ಲಿ ಉದ್ಯಮ ಕ್ಷೇತ್ರಕ್ಕೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಿದರು.


ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮದ ಕೇಂದ್ರ ಸ್ಥಾನ ಆಗಿದ್ದು, ಶಿವಮೊಗ್ಗ ಕೇಂದ್ರ ಸ್ಥಾನದಿಂದ ಪ್ರಮುಖ ಪ್ರವಾಸಿ ತಾಣಗಳಿಗೆ ಸಮೀಪ ಆಗಲಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದಲೂ ವಿಮಾನಯಾನ ಸೌಲಭ್ಯ ಪರಿಣಾಮಕಾರಿಯಾಗಿ ಬಳಕೆ ಮಾಡಲು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮೂಲಸೌಕರ್ಯ ಸಮಿತಿ ಚರ‍್ಮನ್ ಸುಕುಮಾರ್ ಅವರು ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ, ಮಾರ್ಗಗಳ ಹಾಗೂ ಅಗತ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ವಾಣಿಜ್ಯ, ಕೈಗಾರಿಕೆ ಹಾಗೂ ಉದ್ಯಮಿಗಳ ಅವಶ್ಯಕತೆಗಳನ್ನು ತಿಳಿದುಕೊಳ್ಳುವ ಪ್ರಯುಕ್ತ ಹಾಗೂ ವಿಮಾನ ಸಂಚಾರ ಮಾರ್ಗಗಳ ಕುರಿತು ಸಂವಾದ ನಡೆಸಿದರು.


ಟ್ರೇಡ್ಸ್ ಅಸಿಸ್ಟೆಂಟ್ ಮ್ಯಾನೇಜರ್ ಮನೋಜ್ ಪ್ರಭು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಮರಿಸ್ವಾಮಿ, ಹಾಲಸ್ವಾಮಿ, ಎಂ.ರಾಜು, ಗಣೇಶ್ ಅಂಗಡಿ, ರಮೇಶ್ ಹೆಗಡೆ, ಪರಮೇಶ್ವರ್ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…