ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸಲಿದ್ದು, ಗ್ರಾಮಾಂತರ ಕ್ಷೇತ್ರಕ್ಕೆ ವಿಶೇಷ ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾದ ನಂತರ ನಾಲ್ಕನೇ ಅವಧಿಯಲ್ಲಿ ಆಗಬೇಕಾದ ಅತಿ ಮುಖ್ಯ ಕೆಲಸಗಳನ್ನು ಪಟ್ಟಿ ಮಾಡಲಾಗಿದೆ. ಆರೂವರೆ ಲಕ್ಷ ಜನಸಂಖ್ಯೆ ಇರುವ ಈ ಕ್ಷೇತ್ರಕ್ಕೆ ಪ್ರತ್ಯೇಕ ತಾಲೂಕು ಕಚೇರಿ ನಿರ್ಮಾಣ, ಸೆಂಟ್ರಲ್ ವಿಸ್ತಾ ಮಾದರಿಯಲ್ಲಿ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ಸ್ಥಾಪನೆ, ರೈತ ಸಂಪರ್ಕ ಕೇಂದ್ರಗಳ ಆಧುನೀಕರಣ ಮಾಡಲಾಗುವುದು ಎಂದರು.

ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಕಂಫ್ಯೂಟರೀಕರಣ ಮಾಡಿ ನೂತನ ಕೇಂದ್ರಗಳ ಸ್ಥಾಪನೆ ಸರ್ಕಾರಿ ಕಚೇರಿ ಜನಸ್ನೇಹಿ ಕೇಂದ್ರಗಳಾಗಿ ಪರಿವರ್ತನೆ, ಏಕ ಕಿಂಡಿ ವ್ಯವಸ್ಥೆ ಮೂಲಕ ಶೀಘ್ರ ಪರಿಹಾರ, ನಾಡ ಕಚೇರಿ ಮತ್ತು ಕಂದಾಯ ಇಲಾಖೆ ಉನ್ನತೀಕರಣ, ಶಾಲಾ ಮಕ್ಕಳಿಗೆ ಕನಿಷ್ಠ ದರದಲ್ಲಿ ಬಸ್ ಸೌಲಭ್ಯ, ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ವ್ಯವಸ್ಥೆ ಸೇರಿದಂತೆ ವಿಶೇಷ ಸೌಲತ್ತು, ಶಿಕ್ಷಕರ ನೇಮಕ, ಖೆಲೋ ಇಂಡಿಯಾಕ್ಕೆ ಸಹಕಾರ, ರೈತರ ಹೊಲಗಳಿಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.

ಅಡಿಕೆ ಬೆಲೆ ಸ್ಥಿರತೆಗೆ ಕ್ರಮ,  ಚೆಕ್ ಡ್ಯಾಂಗಳ ನಿರ್ಮಾಣ, ಅಂತರ್ಜಲ ಅಭಿವೃದ್ಧಿಗೆ ಯೋಜನೆ, ಹನಿ ನೀರಾವತಿ, ಸ್ಪಿಂಕ್ಲರ್ ಮತ್ತು ಕೊಳವೆ ಬಾವಿಗಳ ನಿರ್ಮಾಣಕ್ಕೆ ಒತ್ತು, ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಆದ್ಯತೆ, ಮೀನು ಸಾಕಾಣಿಕೆಗೆ ಪ್ರೋತ್ಸಾಹ, ಕೆರೆಗಳ ದುರಸ್ತೀಕರಣ, ಪ್ರಮುಖ ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಮಾಡಿ, ಬೋಟಿಂಗ್ ವ್ಯವಸ್ಥೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿ ಅರಣ್ಯ ಸಂರಕ್ಷಣೆಗೆ ಟಾಸ್ಕ್ ಫೋರ್ಸ್ ರಚನೆ, ಹಕ್ಕು ಪತ್ರ ವಿತರಣೆಗೆ ಕ್ರಮ, ಸ್ಮಾರ್ಟ್ ವಿಲೇಜ್ ಅನುಷ್ಠಾನ ಮಾಡಲಾಗುವುದು ಎಂದರು.

ಮಲ್ಟಿ ವಿಲೇಜ್ ವಾಟರ್ ಯೂನಿಟ್ಟ್, ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು, ಆನವೇರಿ, ಹೊಳೆಹೊನ್ನೂರು, ಕುಂಸಿ, ಹಸೂಡಿ ವ್ಯಾಪ್ತಿಯಲ್ಲಿ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ ಹಾಗೂ ಗಾರ್ಮೆಂಟ್ಸ್ ಸ್ಥಾಪನೆಗೆ ಪ್ರೋತ್ಸಾಹ, ಗ್ರಾಮಗಳಿಂದ ಕೇಂದ್ರ ರಸ್ತೆಗಳಿಗೆ ಸಂಪರ್ಕ, ರಂಗಮಂದಿರ, ಒಳ ಮತ್ತು ಹೊರ ಕ್ರೀಡಾಂಗಣ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನನು ಗ್ರಾಮಾಂತರ ಕ್ಷೇತ್ರದ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.

ಈಗಾಗಲೇ 1448 ಕುಟುಂಬಗಳಿಗೆ ಹಕ್ಕು ಪತ್ರ ಕೊಟ್ಟಿದ್ದೇವೆ. ನನ್ನ ಕ್ಷೇತ್ರದಲ್ಲಿ ಶೇ. 50 ರಷ್ಟು ಜನ ಶರಾವತಿ ಸಂತ್ರಸ್ಥರಿದ್ದು, ಅವರ ಸಮಸ್ಯೆ ಬಗೆಹರಿಸಲು ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ. ಇನ್ನೂ ಹಕ್ಕು ಪತ್ರ ನೀಡಲು 7500 ಅರ್ಜಿಗಳು ಬಾಕಿ ಇದ್ದು, ಚುನಾವಣೆ ಮುಗಿದ ಮೇಲೆ ಗಮನಹರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆ ಸಮಿತಿ ಸಂಚಾಲಕ ಡಾ. ಧನಂಜಯ ಸರ್ಜಿ, ಎಸ್. ದತ್ತಾತ್ರಿ, ಕುಮಾರ್ ನಾಯ್ಡು, ಪಿಂಗಳೆ ಸುರೇಶ್, ಗೋಪಾಲ್, ವಿರೂಪಾಕ್ಷಪ್ಪ, ಮತ್ತಿತರರು ಇದ್ದರು

ವರದಿ ಪ್ರಜಾ ಶಕ್ತಿ…