ಶಿವಮೊಗ್ಗ: ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪಕ್ಕದ ಸುಮಾರು ೧೦೦ ಎಕರೆ ಜಾಗದಲ್ಲ್ಲಿ ಮೇ ೭ರಂದು ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದು, ಸಿದ್ದತೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.


ಅವರು ಇಂದು ಆಯನೂರಿನಲ್ಲಿ ಏರ್ಪಡಿಸಿರುವ ಪ್ರಚಾರ ಸಭೆಯ ಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ ೧೧-೩೦ಕ್ಕೆ ಬೆಂಗಳೂರಿನಿAದ ನೇರವಾಗಿ ಹೆಲಿಕಾಪ್ಟರ್‌ನಲ್ಲಿ ಆಯನೂರಿಗೆ ಆಗಮಿಸುತ್ತಿದ್ದು, ವೇದಿಕೆಯ ಪಕ್ಕದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಬೆಳಿಗ್ಗೆ ೧೧-೩೦ರಿಂದ ಮಧ್ಯಾಹ್ನ ೨-೩೦ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿಯವರು ೫೦ ನಿಮಿಷಗಳ ಕಾಲ ಭಾಷಣ ಮಾಡಲಿದ್ದಾರೆ ಎಂದರು.


ಜಿಲ್ಲೆಯ ಏಳು ಕ್ಷೇತ್ರ, ದಾವಣಗೆರೆಯ ೨ ಕ್ಷೇತ್ರ ಹಾಗೂ ಚಿಕ್ಕಮಗಳೂರಿನ ಒಂದು ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಮೋದಿಯವರು ಪ್ರಚಾರ ನಡೆಸಲಿದ್ದಾರೆ. ಹತ್ತು ಕ್ಷೇತ್ರದ ಮತದಾರರು ಸಭೆಯಲ್ಲಿ ಭಾಗವಹಿಸುತ್ತಿದ್ದು, ಪ್ರತಿ ಕ್ಷೇತ್ರದಿಂದ ೩೦ ಸಾವಿರ ಜನರು ಸೇರಿದಂತೆ ಸುಮಾರು ಮೂರು ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಪ್ರಚಾರ ಸಭೆಗೆ ಜನರು ಸ್ವಯಂ ಪ್ರೇರಿತರಾಗಿ ಬರುತ್ತಿದ್ದು, ಯಾವುದೇ ವಾಹನದ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯನ್ನು ಸಹ ಮಾಡಿಲ್ಲ. ಕುಡಿಯುವ ನೀರು, ಮಜ್ಜಿಗೆ ಮಾತ್ರ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚಾಗಿ ದ್ವಿಚಕ್ರ ವಾಹನದಲ್ಲಿ ಬರುವಂತೆ ಮನವಿ ಮಾಡಿಕೊಳ್ಳಲಾಗಿದೆ. ವಾಹನಗಳನ್ನು ನಿಲ್ಲಿಸಲು ಆಯನೂರಿನ ಹೊರ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.


ಪ್ರಚಾರ ಸಭೆಗೆ ಆಯನೂರಿನ ನಾಗರಿಕರು ಸಹಕಾರ ನೀಡುತ್ತಿದ್ದು, ಆಯನೂರಿನಿಂದ ಶಿವಮೊಗ್ಗ ಕಡೆ ಬರುವ ೨ ಕಿಮೀ. ಹಾಗೂ ಆಯನೂರಿನಿಂದ ಕುಂಸಿಗೆ ಹೋಗುವ ೧ಕಿಮೀ. ರಸ್ತೆ ಉದ್ದಕ್ಕೂ ತಳಿರು ತೋರಣ, ಪಕ್ಷದ ಬಾವುಟ, ಬಂಟಿAಗ್ಸ್ನಿAದ ಅಲಂಕರಿಸಲಾಗುತ್ತಿದೆ. ಊಟದ ವ್ಯವಸ್ಥೆ ಇಲ್ಲದಿರುವುದರಿಂದ ಮಜ್ಜಿಗ, ನೀರು, ಸೌತೆಕಾಯಿ, ಪೇರಲೆಕಾಯಿ ಮಾರಾಟ ಮಾಡಲು ಸಣ್ಣ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.


ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಪ್ರಚಾರ ನಡೆಯುತ್ತಿದ್ದು, ಸಣ್ಣ ಸಣ್ಣ ಸಭೆ, ಮನೆಮನೆ ಭೇಟಿ ಬಹಿರಂಗ ಸಭೆ, ರೋಡ್ ಶೋ, ಮೂಲಕ ಮತ ಯಾಚಿಸಲಾಗುತ್ತಿದೆ. ಪ್ರಧಾನ ಮಂತ್ರಿ ಭೇಟಿ ಮಾಡುತ್ತಿರುವುದು ಪ್ರಚಾರಕ್ಕೆ ಇನ್ನಷ್ಟು ಚುರುಕು ಸಿಗಲಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿದೆ ಹಾಗೂ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಲಿದೆ ಎಂದರು.


ಕಳೆದ ಬಾರಿ ಶಿವಮೊಗ್ಗ ನಗರಕ್ಕೆ ಪ್ರಧಾನಿ ಆಗಮಿಸಿದ್ದಾಗ ಕೆಲವೊಂದು ಲೋಪಗಳು ಆಗಿತ್ತು,. ಈಬಾರಿ ಮುಂಜಾಗರೂಕತೆ ವಹಿಸಲಾಗಿದೆ. ಎರಡು ಮೊಬೈಲ್ ಆರೋಗ್ಯ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೂಡ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದರು.


ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ., ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಕ್ಷೇತ್ರದ ಅಭ್ಯರ್ಥಿಗಳು, ವಿಧಾನ ಪರಿಷತ್ ಸದಸ್ಯರು, ಮುಖಂಡರು, ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆರ್.ಕೆ. ಸಿದ್ರಾಮಣ್ಣ, ಗಿರೀಶ್ ಪಟೇಲ್, ಪಿ. ರುದ್ರೇಶ್, ಬಿ.ಕೆ. ಶ್ರೀನಾಥ್, ಬಿ.ಆರ್. ಮಧುಸೂದನ್, ಚಂದ್ರಶೇಖರ್, ಪ್ರಭಾಕರ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…