ಆಧುನಿಕ ಶ್ರವಣಕುಮಾರ್ ಅವರ ಯಶೋಗಾಥೆಯೇ ಅತ್ಯದ್ಭುತವಾಗಿದೆ ಎಂದು ಶಿವಮೊಗ್ಗ ರೋಟರಿ ಸಂಸ್ಥೆ ಅಧ್ಯಕ್ಷ ರೋ. ಸೆಂಥಿಲ್ ವೇಲನ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಮ್ಮ ತಂದೆಯ ನೆನಪಿನ ಹಳೇ ಸ್ಕೂಟರ್‌ನಲ್ಲಿ ತನ್ನ 70 ವರ್ಷದ ತಾಯಿಯೊಂದಿಗೆ ಬಿಸಿಲು, ಗಾಳಿ, ಚಳಿ, ಮಳೆ ಎನ್ನದೇ ಜಿಲ್ಲೆ, ರಾಜ್ಯ, ದೇಶ, ವಿದೇಶಗಳನ್ನು ಸುತ್ತಿ ತಾಯಿಯ ಆಸೆ ಈಡೇರಿಸಿರುವ ಈ ಕಲಿಯುಗದ ಆಧುನಿಕ ಶ್ರವಣಕುಮಾರ ಡಿ.ಕೃಷ್ಣಕುಮಾರ್, ಹಾಗೂ ಅವರ ತಾಯಿ ಚೂಡಾರತ್ನ ಇವರಿಗೆ ಶಿವಮೊಗ್ಗ ರೋಟರಿ ಸಂಸ್ಥೆವತಿಯಿಂದ ಗೌರವಿಸಿ ಸನ್ಮಾನಿಸಿ ಅವರು ಮಾತನಾಡಿದರು. ಸಾಮಾನ್ಯವಾಗಿ ನಾವೆಲ್ಲರೂ ಒಂದು ದಿನ, ಎರಡು ದಿನಗಳ ಕಾಲ ಹೊರಗೆ ಅಡ್ಡಾಡಿ ಬಂದರೆ, ಸುಸ್ತು, ಮೈಕೈ ನೊಇವಿನ ನೆಪವನ್ನಿಡ್ಡಿ ವಿಶ್ರಮಿಸುತ್ತೇವೆ. ಆದರೆ, ತಮ್ಮ ಕೆಲಸವನ್ನು ತ್ಯಜಿಸಿ, ತಾಯಿಯ ಆಶಯವನ್ನು ಈಡೇರಿಸಲು ದೇಶ ಪರ್ಯಟನೆ ಮಾಡಿರುವುದು ಸಾಮಾನ್ಯ ವಿಷಯವಲ್ಲ ಎಂದು ಬಣ್ಣಿಸಿದರು.
ಲೋಕಸಂಚಾರ ಮಾಡಲು ಮಾತೃ ಸೇವಾ ಸಂಕಲ್ಪ ಯಾತ್ರೆ ಕೈಗೊಂಡು ಕೇವಲ ಭಾರತವಲ್ಲದೇ ನೇಪಾಳ, ಭೂತಾನ್, ಮಯನ್ಮಾರ್ ದೇಶಗಳಲ್ಲಿ ಹಳೇ ಸ್ಕೂಟರ್ ನಲ್ಲಿಯೇ ಸುಮಾರು 78,994 ಕಿ.ಮಿ ಸಂಚರಿಸಿರುವುದು ಇದೊಂದು ದಾಖಲೆಯಾಗಿದೆ. ಇದು ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಯಾಗಬೇಕು. ಸಾವಿರಾರು ಕಿ ಮಿ. ಸಂಚರಿಸಿ, ಲಕ್ಷಾಂತರ ಜನರನ್ನು ಸಂದರ್ಶಿಸಿ, ಸಾವಿರಾರು ದೇವಾಲಯಗಳಲ್ಲಿ ದರ್ಶನ ಪಡೆದು ಸಂಚರಿಸಿರುವುದು ಸಾಮಾನ್ಯ ಮಾತಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಮಾಜಿ ಅಸಿಸ್ಟೆಂಟ್ ಗವರ್ನರ್, ಇನ್ನರ್ ವ್ಹೀಲ್ ಅಧ್ಯಕ್ಷೆ ಎನ್.ಜಿ. ಉಷಾ ಉಡುಪ, ರೋ. ವೀರಣ್ಣ ಹುಗ್ಗಿ, ರೋ. ಎನ್.ಎಸ್. ಶ್ರೀಧರ್, ರೋ. ಸೂರ್ಯನಾರಾಯಣ ಉಡುಪ, ರೋ. ಗಾಯಿತ್ರಿ ಸುಮತೀಂದ್ರ ಗೋವಾ ಮೋಹನ್ ಕೃಷ್ಣ ಸೇರಿದಂತೆ ಇತರರಿದ್ದರು.