ಶಿವಮೊಗ್ಗ : ಪ್ರಾಮಾಣಿಕತೆ, ಸ್ವಾವಲಂಬನೆ, ಸಾಮಾಜಿಕ ಬದ್ಧತೆ, ಶ್ರದ್ಧೆಯೊಂದಿಗೆ ನಾಡು ಕಟ್ಟುವಲ್ಲಿ ಸೊಲ್ಲಾಪುರದ ಶರಣ ವಾರದ ಮಲ್ಲಪ್ಪ ಅವರ ಕೊಡುಗೆ ಅಪಾರ ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಕಿರಣ್‌ ದೇಸಾಯಿ ಹೇಳಿದರು.

ನಗರದ ಬಸವ ಕೇಂದ್ರ ಹಾಗೂ ಸರ್ಜಿ ಆಸ್ಪತ್ರೆಗಳ ಸಮೂಹದ ವತಿಯಿಂದ ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಂತನ ಕಾರ್ತಿಕ ಕಾರ್ಯಕ್ರಮದಲ್ಲಿ ವಾರದ ಮಲ್ಲಪ್ಪ ಅವರು ಕುರಿತು ಮುಖ್ಯ ಉಪನ್ಯಾಸ ನೀಡಿದರು.

ಶರಣ ತತ್ವ ಚಿಂತನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ, ಬಡ ಜನರಿಗೆ ಉಚಿತ ಶಿಕ್ಷಣ ನೀಡುವಲ್ಲಿ, ಉದ್ಯಮ ಮೂಲಕ ಉದ್ಯೋಗ ಸೃಷ್ಟಿಸಿ ಸಮಾಜ ಉದ್ಧಾರ ಮಾಡುವಲ್ಲಿ ಹಾಗೂ ವ್ಯಾಪಾರದಲ್ಲಿ ಹೊಸ ನೀತಿ ಹುಟ್ಟು ಹಾಕುವಲ್ಲಿ ವಾರದ ಮಲ್ಲನವರ ಕೊಡುಗೆ ದೊಡ್ಡದು ಎಂದು ಹೇಳಿದರು.

ಸಾಮಾನ್ಯವಾಗಿ ಆಸ್ಪತ್ರೆ ಎಂದ ಕೂಡಲೇ ವೈದ್ಯರು, ರೋಗಿಗಳು ಮತ್ತು ದಾದಿಯರು ನೆನೆಪಾಗುತ್ತಾರೆ, ಆದರೆ ಸರ್ಜಿ ಆಸ್ಪತ್ರೆಯಲ್ಲಿ ಧಾರ್ಮಿಕ ಅಭಿರುಚಿ ಚಿಂತನ ಕಾರ್ತಿಕ ಏರ್ಪಡಿಸಿರುವುದು ಶ್ಲಾಘನೀಯ. ಅಂತರಂಗದ ಕತ್ತಲೆಯು ದೂರವಾಗಿ ಬೆಳಕು ಮೂಡಬೇಕಾದರೆ ಪ್ರತಿಯೊಬ್ಬರೂ ಶರಣ ತತ್ವ, ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಪ್ರಸೂತಿ ಮತ್ತು ಸಿ್ತ್ರೕ ರೋಗ ಮತ್ತು ಬಂಜೆತನ ನಿವಾರಣಾ ತಜ್ಞರಾದ ಡಾ. ಸಂಧ್ಯಾ ಎಸ್‌.ಎಸ್‌. ಮಾತನಾಡಿ, ಧರ್ಮವು ನಿಂತ ನೀರಲ್ಲ, ನಿರಂತರ ನೀರಿನಂತೆ ಹರಿಯುತ್ತಿರುತ್ತದೆ, ಈ ನಿಟ್ಟಿನಲ್ಲಿ 12 ನೇ ಶತಮಾನದಲ್ಲಿ ಸಮ ಸಮಾಜಕ್ಕಾಗಿ ಶ್ರಮಿಸಿದ ಶ್ರೇಷ್ಠ ಮಾನವತಾವಾದಿ, ಶ್ರೇಷ್ಠ ವಚನಕಾರ ಬಸವಣ್ಣನವರ ವಚನ ಸಾಹಿತ್ಯ ಹಾಗೂ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನುಮಾಡಬೇಕು ಎಂದು ಸಲಹೆ ನೀಡಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ, ಶ್ರೀ ಗುರು ಸಿದ್ದರಾಮೇಶ್ವರರ ಬಳಿಕ ಸೊಲ್ಲಾಪುರದ ವಾರದ ಮಲ್ಲಪ್ಪನವರು ಜನ ಜೀವನಕ್ಕಾಗಿ ಶ್ರಮಿಸಿ ಸೊಲ್ಲಾಪುರವನ್ನು ಆಧುನಿಕವಾಗಿ ನಿರ್ಮಾಣ ಮಾಡಿದವರು. ಶ್ರೇಷ್ಠ ದಾರ್ಶನಿಕರಾಗಿ, ಉದ್ಯಮಿಯಾಗಿ, ಆಧುನಿಕ ಕೃಷಿಕರಾಗಿ ಶ್ರದ್ಧೆಯಿಂದ ದುಡಿದ ಮಲ್ಲಪ್ಪನವರು, ಜ್ಞಾನ, ಸಂಸ್ಕೃತಿ, ಪರಂಪರೆ ಉಳಿವಿಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಶ್ರೀಗಳು ಬಣ್ಣಿಸಿದರು.

ಕಾರ್ಯಕ್ರಮದ ಕುರಿತು ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾದ ಡಿ.ಎಂ.ಶಂಕರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಂಜಯ ಸರ್ಜಿ ಹಾಜರಿದ್ದರು. ಅಕ್ಕನ ಬಳಗದ ಸದಸ್ಯೆಯರು ವಚನ ಗಾಯನ ನಡೆಸಿಕೊಟ್ಟರು. ಸರ್ಜಿ ಆಸ್ಪತ್ರೆಗಳ ಸಂಸ್ಥಾಪಕರಾದ ಸರ್ಜಿ ರುದ್ರಪ್ಪ ಅವರು ಕಾರ್ಯಕ್ರಮದ ಸೇವಾರ್ಥಿಗಳಾಗಿದ್ದರು. ಇದಕ್ಕೂ ಮೊದಲು ಜಗಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು.

ವರದಿ ಪ್ರಜಾಶಕ್ತಿ…