ಸಮಾಜದಲ್ಲಿ ನಾವೆಲ್ಲ ದೇಹ ಮಾತ್ರವಲ್ಲ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್.ದೇವದಾಸ್ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ವಕೀಲರ ಸಂಘ ಶಿವಮೊಗ್ಗ ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಇಂದು ಮಾನಸಿಕ ಆರೋಗ್ಯದ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ನಮ್ಮ ಸುಖ, ದುಖ ಎಲ್ಲದಕ್ಕೂ ಮನಸ್ಸೇ ಮುಖ್ಯ ಕಾರಣ. ಪ್ರತಿದಿನ ನಾವು ಎಷ್ಟೋ ಜನರನ್ನು ಭೇಟಿಯಾಗುತ್ತೇವೆ, ವ್ಯವಹರಿಸುತ್ತೇವೆ, ವ್ಯಕ್ತಿಗತ ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ಮಾನಸಿಕವಾಗಿ ನಾವು ಸದೃಢರಾಗಿದ್ದರೆ ನೋವು, ಹತಾಶೆಗೆ ಹೋಗುವುದಿಲ್ಲ.
ಸಮಾಜದಲ್ಲಿ ಕೆಲವರಿಗೆ ಮಾತ್ರ ಮಾನಸಿಕ ರೋಗ ಬರುತ್ತದೆ ಎಂಬ ಭ್ರಮೆಯಲ್ಲಿದ್ದೇವೆ. ನಾವೆಲ್ಲ ಒಂದಿಲ್ಲೊಂದು ಮಾನಸಿಕ ಸಮಸ್ಯೆಯಲ್ಲಿರುತ್ತೇವೆ. ಆದ್ದರಿಂದ ದೇಹಕ್ಕೆ ಕೊಟ್ಟಷ್ಟೇ ಮಹತ್ವನ್ನು ಮನಸ್ಸಿಗೆ ನೀಡಬೇಕು. ಮಾನಸಿಕ ಆರೋಗ್ಯ ಕಾರ್ಯಕ್ರಮಗಳು, ಸೇವೆಗಳ ಸದುಪಯೋಗ ಪಡೆಯಬೇಕು. ಹಾಗೂ ಇಂತಹ ಅಪರೂಪದ ಮಾನಸಿಕ ಅರಿವು ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದು.


ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಮಾರ್ಗದರ್ಶಕರಾದ ಎನ್.ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದುವರೆದ ದೇಶಗಳಲ್ಲಿ ಮಾನಸಿಕ ಖಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮಾನಸಿಕ ಖಾಯಿಲೆಯೇ ನಂ.1 ಆಗುವ ಸಾಧ್ಯತೆ ಇದೆ. ಆದ್ದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ.
ದೈಹಿಕ ಖಾಯಿಲೆಗೆ ವೈದ್ಯರನ್ನು ಹುಡುಕಿ ಚಿಕಿತ್ಸೆ ಪಡೆದು ಅದನ್ನು ಎಲ್ಲರ ಹತ್ತಿರ ಹಂಚಿಕೊಳ್ಳುತ್ತೇವೆ. ಆದರೆ ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡುವ, ಕಳಂಕವೆಂಬಂತೆ ನೋಡುತ್ತೇವೆ. ಕೀಳರಿಮೆಯೂ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕುಟುಂಬದಲ್ಲೇ ಗಂಡ ಹೆಂಡತಿಯೊಂದಿಗೆ, ಮಕ್ಕಳೊಂದಿಗೆ ಹೇಗೆ ಮಾತನಾಡಬೇಕೆಂದು ತಿಳಿಯದೆ ಜಗಳಗಳಾಗುತ್ತವೆ, ಪರಸ್ಪರರ ನಡುವೆ ಸಂಬಂಧ ನಿರ್ವಹಿಸುವಲ್ಲಿ ಸೋಲುತ್ತಿದ್ದೇವೆ.


ಹಿಂದೆಲ್ಲ ಮಾನಸಿಕ ರೋಗಕ್ಕೆ ಮದ್ದಿಲ್ಲ ಎನ್ನುತ್ತಿದ್ದರು, ರೋಗಿಗಳನ್ನು ಜೈಲುವಾಸಿಗಳಂತೆ ಉಪಚರಿಸುತ್ತಿದ್ದರು. ಆದರೆ ಮಾನಸಿಕ ಆರೋಗ್ಯ ಕಾಯ್ದೆ ಜಾರಿಯಾದಾಗಿನಿಂದ ಅವರಿಗೆ ಇತರೆ ರೋಗಿಗಳಂತೆ ಒಂದೇ ವಾರ್ಡಿನಲ್ಲಿ ತಾರತಮ್ಯವಿಲ್ಲದೆ ಉಪಚರಿಸಲಾಗುತ್ತಿದೆ. ಶೇ.90 ರೋಗ ನಿಯಂತ್ರಣದಲ್ಲಿಡಬಹುದು. ಈ ಬಗ್ಗೆ ಎಲ್ಲರಲ್ಲಿ ಅರಿವು ಹೆಚ್ಚಬೇಕು.
ಮೊದಲೆಲ್ಲ ಆತ್ಮಹತ್ಯೆ ಅಪರಾಧವಾಗಿತ್ತು. ಈ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಗೆ ಮಾನಸಿಕ ಆರೋಗ್ಯದ ಅವಶ್ಯಕತೆ ಇದೆ ಎಂದು ಚಿಕಿತ್ಸೆ ನೀಡಲಾಗುತ್ತದೆ. ಯವುದೇ ಮಾನಸಿಕ ರೋಗಿಯನ್ನು ಅವಮಾನಿಸುವಂತಿಲ್ಲ. ಕಾಯ್ದೆ ಅವರಿಗೆ ಹಲವಾರು ಹಕ್ಕುಗಳನ್ನು ನೀಡಿದೆ.
ಪ್ರಸ್ತುತ ಮಾನಸಿಕ ಅಸ್ತವ್ಯಸ್ತತೆಯೇ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಗಂಡ ಹೆಂಡತಿ ಒಟ್ಟಿಗಿದ್ದರೆ ಅದೇ ಕೂಡು ಕುಟುಂಬವೆಂಬಂತೆ ಆಗಿದೆ. ಶೇ.50 ಪ್ರಕರಣಗಳು ವೈವಾಹಿಕ ಜೀವನಕ್ಕೆ ಸಂಬಂಧಿಸಿದ್ದಾಗಿದೆ. ಸಮರ್ಪಕ ಲೈಂಗಿಕ ಶಿಕ್ಷಣ ಇಲ್ಲದಿರುವುದು, ಸಂಬಂಧ ನಿರ್ವಹಣೆ ವೈಫಲ್ಯದ ಕಾರಣಗಳಿಗಾಗಿದೆ. ಆದ್ದರಿಂದ ಯುವಜನತೆಗೆ ಸಮರ್ಪಕವಾದ ಲೈಂಗಿಕ ಶಿಕ್ಷಣ ನೀಡುವುದು ಪ್ರಮುಖವಾಗಿದೆ. ಟಿವಿ ಇತರೆ ಮಾಧ್ಯಮಗಳಲ್ಲಿ ಇರುವಂತೆ ಬದುಕು ಇರುವುದಿಲ್ಲ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೈದ್ಯರು ತಂಬಾಕು, ಕುಡಿತ ಮಾತ್ರವಲ್ಲ ಮೊಬೈಲ್ ಗೀಳಿನ ಬಗ್ಗೆ ಈಗಿನಿಂದಲೇ ಎಚ್ಚರಿಸಬೇಕು.

ಮಾನಸಿಕ ಖಾಯಿಲೆಗಳಿಗೆ ಅತ್ಯುತ್ತಮ ಮದ್ದು ಪ್ರೀತಿ ಮತ್ತು ವಿಶ್ವಾಸ. ಪರಸ್ಪರರನ್ನು ಅರಿತರೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಓದು, ಹಣ, ಪದವಿಗಳು ಎಷ್ಟೇ ಇದ್ದರೂ ಜೀವನನ್ನು ಎದುರಿಸುವ, ನಿರ್ವಹಸುವ, ಪ್ರೀತಿಸುವ ಗುಣಗಳನ್ನು ಮೊದಲು ನಾವು ಮೈಗೂಡಿಸಿಕೊಳ್ಳಬೇಕು.

– ಎನ್.ಕುಮಾರ್, ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಡಿ.ರಣದೀಪ್ ಮಾತನಾಡಿ, ಮಾನಸಿಕ ಆರೋಗ್ಯದ ಶಿಕ್ಷಣ ಮತ್ತು ಚಿಕಿತ್ಸೆ ಹಾಗೂ ಇದಕ್ಕೆ ಸಂಬಂಧಿಸಿದ ಕಾಯ್ದೆ-ಕಾನೂನುಗಳ ಅನುಷ್ಟಾನದಲ್ಲಿ ನಮ್ಮ ರಾಜ್ಯ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ವೈದ್ಯರಲ್ಲಿ ಹಾಗೂ ಸಮಾದಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಹೆಚ್ಚುತ್ತಿದೆ. ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಇಲಾಖೆಗಳ ಸಮನ್ವಯ ಮತ್ತು ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ. ಇನ್ನು ಮುಂದೆ ಪ್ರತಿ ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಸ್ಥಾಪನೆ ಆಗಲಿದೆ.

ದೈಹಿಕ ಮತ್ತು ಮಾನಸಿಕ ರೋಗಿಗಳ ಯಾವುದೇ ರೀತಿಯ ತಾರತಮ್ಯವಿಲ್ಲದಂತೆ ಒಂದೇ ವಾರ್ಡಿನಲ್ಲಿ ಚಿಕಿತ್ಸೆ ನಡೆಯಲಿದೆ. ಸರ್ಕಾರದ ಎಲ್ಲ ಆಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆ, ಔಷಧ ಲಭ್ಯವಿದೆ. ಇತ್ತೀಚೆಗೆ ಹದಿಹರೆಯದ ಮಕ್ಕಳಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾಧನೀಯ. ಇದನ್ನು ಸರಿಪಡಿಸಲು ಸರಿಯಾದ ಸಮಯಕ್ಕೆ ಸೂಕ್ತ ಆಪ್ತಸಮಾಲೋಚನೆ ಮತ್ತು ಪೋಷಕರ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಒಂದು ಬೆಂಬಲ ವ್ಯವಸ್ಥೆಯನ್ನು, ಅರಿವು ಕಾರ್ಯಕ್ರಮಗಳನ್ನು ಸರ್ಕಾರ ರೂಪಿ¸ಸುತ್ತಿದೆ. ಜೈಲುವಾಸಿಗಳಲ್ಲಿ ಸಹ ಹೆಚ್ಚಿನ ಮಾನಸಿಕ ಸಮಸ್ಯೆಗಳು ಕಂಡು ಬರುತ್ತಿದ್ದು, ಆರೋಗ್ಯ ಇಲಾಖೆ ವತಿಯಿಂದ ಅವರಿಗೆ ಸೂಕ್ತ ಚಿಕಿತ್ಸೆ ಲಭ್ಯವಿದೆ ಎಂದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥನಾಯಕ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಆ.ಕು.ಕ ಸೇವೆಗಳ ನಿರ್ದೇಶಕರಾದ ಡಾ.ಪುಷ್ಪಲತಾ, ಹಿರಿಯ ನ್ಯಾಯಾಧೀಶರು, ವಕೀಲರು, ಡಿಹೆಚ್‍ಓ, ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಟಾನಾಧಿಕರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ವಕೀಲರು, ವೈದ್ಯರು ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ವರದಿ ಪ್ರಜಾ ಶಕ್ತಿ