ಸಾರ್ವಜನಿಕರಿಂದ ಸ್ವೀಕರಿಸಲಾದ ಅಹವಾಲು ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಹಾಗೂ ಸಾರ್ವಜನಿಕರು ಸಹ ತಮ್ಮ ಸಮಸ್ಯೆಗಳ ಕುರಿತು ಅರ್ಜಿಗಳನ್ನು ನೀಡಲು ಮುಂದೆ ಬರಬೇಕು ಎಂದು ಕರ್ನಾಟಕ ಲೋಕಾಯುಕ್ತ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಹೆಚ್ ಎಸ್ ತಿಳಿಸಿದರು.


ಇಂದು ತಾಲ್ಲೂಕು ಪಂಚಯ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು.
ಸರ್ಕಾರಿ ಕರ್ತವ್ಯ ನಿರ್ವಹಿಸಲು ಬೇಜವಾಬ್ಧಾರಿತನ, ನಿರ್ಲಕ್ಷ್ಯ, ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತವಾಗಿ ಶಿವಮೊಗ್ಗದ ಕರ್ನಾಟಕ ಲೋಕಾಯುಕ್ತಕ್ಕೆ ಅಹವಾಲು ಸಲ್ಲಿಸಬಹುದು. ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ನೀಡಿ ಕುಂದು ಕೊರತೆ ಸಭೆಗಳ ಉಪಯೋಗ ಪಡೆಯಬೇಕೆಂದರು.


ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಮಾತನಾಡಿ, ಸರ್ಕಾರಿ ಅಧಿಕಾರಿ/ನೌಕರರು ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡು ನಿಗದಿತ ಅವಧಿಯೊಳಗೆ ಕರ್ತವ್ಯ ನಿರ್ವಹಿಸಿದಲ್ಲಿ ಸಮಸ್ಯೆಗಳು ಅಷ್ಟಾಗಿ ಉದ್ಭವಿಸುವುದಿಲ್ಲ. ಯಾರಿಗೂ ಹೆದರಿ ಕೆಲಸ ಮಾಡುವ ಅವಶ್ಯಕತೆ ಇಲ್ಲ. ಯಾವುದೇ ಹಣ, ಆಮಿಷಗಳಿಗೆ ಒಳಗಾಗದೇ ನಮ್ಮ ಕೆಲಸವನ್ನು ನಿಯಮಾನುಸಾರ ಸಕಾಲದಲ್ಲಿ ನಿರ್ವಹಿಸಿದರೆ ಸಾಕು. ಸರ್ಕಾರಿ ಕೆಲಸ ಪುಣ್ಯದ ಕೆಲಸವಾಗಿದ್ದು, ಪ್ರಾಮಾಣಿಕವಾಗಿ ಮಾಡೋಣ ಎಂದರು.


ಸಭೆಯಲ್ಲಿ ಕಳೆದ ಮಾಹೆಯಲ್ಲಿ ಸ್ವೀಕರಿಸಲಾದ 7 ಅರ್ಜಿಗಳ ಪೈಕಿ 6 ನ್ನು ವಿಲೇವಾರಿ ಮಾಡಲಾಯಿತು. ಇಂದಿನ ಸಭೆಯಲ್ಲಿ ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ನೀರಾವರಿ ಇಲಾಖೆಗಳಿಗೆ ಸಂಬಂಧಿಸಿದ 6 ಅಹವಾಲುಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಶಿವಮೊಗ್ಗ ತಾಲ್ಲೂಕು ಇಓ ಅವಿನಾಶ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

ವರದಿ ಪ್ರಜಾ ಶಕ್ತಿ