ಡಿಎಆರ್ ಪೊಲೀಸ್ ಸಭಾಂಗಣ ಶಿವಮೊಗ್ಗದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ,
ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯನ್ನು ನಡೆಸಿ, ಅವರುಗಳ ಕುಂದು ಕೊರತೆಗಳನ್ನು ಆಲಿಸಿ ಈ ಕೆಳಕಂಡ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
1) ಪೊಲೀಸ್ ಇಲಾಖೆಯು ಯಾವಾಗಲೂ ಶೋಷಿತರು ಮತ್ತು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮತ್ತು ಅವರ ಸಹಾಯಕ್ಕಾಗಿ ಸದಾ ಸಿದ್ದವಿರುತ್ತದೆ. ಪೊಲೀಸ್ ಠಾಣಾ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯನ್ನು ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಕುಂದುಕೊರತೆಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
2) ಎಲ್ಲರೂ ತಮ್ಮ ಮನಸಾಕ್ಷಿಗೆ ತಕ್ಕಂತೆ ಕೆಲಸವನ್ನು ಮಾಡಬೇಕು ಮತ್ತು ಸಮಾಜದಲ್ಲಿ ಯಾವುದೇ ತೊಂದರೆಗಳನ್ನು ಉಂಟು ಮಾಡುವ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೆಲಸಗಳನ್ನು ಮಾಡಬೇಡಿ. ಒಂದು ವೇಳೆ ಯಾವುದಾದರೂ ಸಮಸ್ಯೆ ಉಂಟಾದ್ದಲ್ಲಿ ಅದರಿಂದ ಆಗುವ ಪರಿಣಾಮವು ಸರಿ ಹೋಗಲು ದೀರ್ಘ ಕಾಲವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಎಲ್ಲರೂ ಸ್ವಾಸ್ಥ್ಯ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಕೆಲಸವನ್ನು ನಿರ್ವಹಿಸಿ.
3) ಸಾರ್ವಜನಿಕರು ದೂರನ್ನು ನೀಡಿದ ಮೇರೆಗೆ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲಾಗುತ್ತದೆ. ತನಿಖಾಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೊಂಡು ತನಿಖೆಯಲ್ಲಿ ಕಂಡು ಬಂದ ಅಂಶದ ಮೇರೆಗೆ, ಘನ ಸರ್ವೋಚ್ಚ ನ್ಯಾಯಾಲಯದ ಮಾನದಂಡಗಳನ್ನು ಅನುಸರಿಸಿ ಆರೋಪಿಯ ಬಂಧನ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಬಂಧನದ ಪ್ರಕ್ರಿಯೆಯು ತನಿಖಾಧಿಕಾರಿಗಳ ವಿವೇಚನಾಧಿಕಾರವಾಗಿರುತ್ತದೆ. ಆದರೂ ಸಹಾ ಒಂದು ವೇಳೆ ತನಿಖೆಯಲ್ಲಿ ಲೋಪಗಳು ಕಂಡು ಬಂದಲ್ಲಿ ತನಿಖಾಧಿಕಾರಿಗಳ ಮೇಲೆಯೂ ಸಹ ಶಿಸ್ತಿನ ಕ್ರಮ ಜರುಗಿಸುವ ಅವಕಾಶ ಇರುತ್ತದೆ ಎಂದು ತಿಳಿಸಿದರು.
4) ತನಿಖಾಧಿಕಾರಿಯವರು ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದಾಗ ಘನ ನ್ಯಾಯಾಲಯವು ಪ್ರಕರಣದ ಸಂಜ್ಞೇಯತೆಯ ಆಧಾರದ ಮೇಲೆ ದೋಷಾರೋಪಣಾ ಪತ್ರವನ್ನು ಸ್ವೀಕರಿಸಿಕೊಳ್ಳುತ್ತದೆ. ಒಂದು ವೇಳೆ ದೂರುದಾರರಿಗೆ ಕಾಯ್ದೆ ಮತ್ತು ಕಲಂ ಗಳ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಅವಕಾಶವೂ ಸಹಾ ಇರುತ್ತದೆ ಎಂದು ತಿಳಿಸಿದರು.
5) ರಾತ್ರಿ ಗಸ್ತು ನಿರ್ವಹಣೆಗಾಗಿ ಸ್ಮಾರ್ಟ್ ಇ-ಬೀಟ್ ತಂತ್ರಾಂಶವನ್ನು ಬಳಸಲಾಗುತ್ತಿದ್ದು, ಸದರಿ ತಂತ್ರಾಂಶದಲ್ಲಿ ಬೀಟ್ ಸಿಬ್ಬಂದಿಗಳು ಬೀಟ್ ಕರ್ತವ್ಯ ನಿರ್ವಹಿಸಿದ ಬಗ್ಗೆ ಮೇಲಾಧಿಕಾರಿಗಳು ತಮ್ಮ ಮೊಬೈಲ್ ಗಳಲ್ಲಿ ಪರಿಶೀಲಿಸಬಹುದಾಗಿರುತ್ತದೆ. ಇದರಿಂದಾಗಿ ರಾತ್ರಿ ಗಸ್ತನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ ಮತ್ತು ಇದರೊಂದಿಗೆ ಬೀಟ್ ಪಾಯಿಂಟ್ ಬುಕ್ ಗಳನ್ನು ಸಹ ಇರಿಸಲಾಗಿದೆ.
6) ಶಿವಮೊಗ್ಗ ನಗರದ ಮೀನಾಕ್ಷೀಭವನ ರಸ್ತೆಯಲ್ಲಿ ಸಂಚಾರ ನಿಯಮಗಳ ಸೂಚನಾ ಫಲಕಗಳು ಇಲ್ಲದೇ ಇರುವ ಬಗ್ಗೆ ಸಾರ್ವಜನಿಕರು ಹೇಳಿದ್ದು, ಸುಗಮ ಸಂಚಾರ ವ್ಯವಸ್ಥೆಯ ಹಿತದೃಷ್ಠಿಯಿಂದ ಶಿವಮೊಗ್ಗ ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಿ, ಸ್ಮಾರ್ಟ್ ಸಿಟಿ ಇಲಾಖೆಯ ಸಮನ್ವಯದಿಂದ ಈಗಾಗಲೇ ಸಂಚಾರ ನಿಯಮಗಳ ಸೂಚನಾ ಫಲಕಗಳನ್ನು ಹಲವು ಕಡೆಗಳಲ್ಲಿ ಅಳವಡಿಸಲಾಗಿರುತ್ತದೆ. ಹಾಗೆಯೇ ಇನ್ನು ಅಗತ್ಯವಿದ್ದ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ಸ್ಮಾರ್ಟ್ ಸಿಟಿ ಇಲಾಖೆಯ ಸಹಯೋಗದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
7) ಶಿವಮೊಗ್ಗ ನಗರದ ಟಿಪ್ಪು ನಗರ, ಗೋಪಾಳ ಗೌಡ ಬಡಾವಣೆ ಹಾಗೂ ಜೆ.ಎನ್.ಎನ್.ಸಿ ಕಾಲೇಜಿನಿಂದ ಅಬ್ಬಲಿಗೆರೆ ರಸ್ತೆಯಲ್ಲಿ ವಾಹನನಗಳನ್ನು ರಸ್ತೆಗೆ ನಿಲ್ಲಿಸಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮಾಡಿ ತೊಂದರೆಯನ್ನುಂಟು ಮಾಡುತ್ತಿದ್ದಾರೆಂದು ತಿಳಿಸಿದ್ದು, ಮಾನ್ಯ ಪೊಲೀಸ್ ಅಧೀಕ್ಷಕರು ಈ ಕುರಿತು ಮಾತನಾಡಿ ಶಿವಮೊಗ್ಗ ಜಿಲ್ಲಾಯಾದ್ಯಂತ ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಲ್ಲಿ ಏರಿಯಾ ಡಾಮಿನೇಷನ್ ಮತ್ತು ಕಾಲುನಡಿಗೆ ವಿಶೇಷ ಗಸ್ತುನ್ನು ನಡೆಸಿ, ಅನುಮಾನಸ್ಪಾದ ಮತ್ತು ಸಾರ್ವಜನಿಕವಾಗಿ ಉಪಟಳ ನೀಡುವವರ ವಿರುದ್ಧ ಲಘು ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಮೇಲ್ಕಂಡ ಸ್ಥಳಗಳಲ್ಲಿಯೂ ಸಹಾ ಏರಿಯಾ ಡಾಮಿನೇಷನ್ ಮತ್ತು ಕಾಲುನಡಿಗೆ ವಿಶೇಷ ಗಸ್ತು ಕಾರ್ಯಾಚರಣೆಯನ್ನು ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
8) ಹೊಳೆಹೊನ್ನೂರಿನ ಕೈಮರ ವೃತ್ತದಲ್ಲಿ ವಾಹನ ದಟ್ಟಣೆಯಿಂದಾಗಿ ಅಫಘಾತಗಳಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಕೋರಿದ್ದು, ಈ ಬಗ್ಗೆ ಪೊಲೀಸ್ ನಿರೀಕ್ಷಕರು ಹೊಳೆಹೊನ್ನೂರು ಪೊಲೀಸ್ ಠಾಣೆ ರವರಿಗೆ, ಸ್ಥಳ ಪರಿಶೀಲನೆ ಮಾಡಿ, ಸದರಿ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ, ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆಗಳನ್ನು ನೀಡಿದರು.
9) ಶಿವಮೊಗ್ಗ ನಗರದಲ್ಲಿ ಆಟೋ ಚಾಲಕರು ಮೀಟರ್ ಗಳನ್ನು ಬಳಸದೇ ಇರುವುದರ ಬಗ್ಗೆ ಸಾರ್ವಜನಿಕರು ತಿಳಿಸಿದ್ದು, ಈ ಕುರಿತಂತೆ ಆಟೋದಲ್ಲಿ ಪ್ರಯಾಣ ಮಾಡುವಾಗ ಆಟೋ ಚಾಲಕರು ಮೀಟರನ್ನು ಬಳಸದೇ ಇರುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ದೂರನ್ನು ನೀಡಿದ್ದಲ್ಲಿ ಆಟೋ ಚಾಲಕರುಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
10) ಅಕ್ರಮ ಮಧ್ಯ ಮಾರಾಟ, ಇಸ್ಪೀಟು ಜೂಜಾಟ, ಓ.ಸಿ ಮತ್ತು ಮಟ್ಕಾದಂತಹ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಂತಹವರ ವಿರುದ್ಧ ದಾಳಿ ನಡೆಸಿ, ಹಲವು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಮತ್ತು ಸಾರ್ವಜನಿಕರು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಿದ್ದಲ್ಲಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
11) ಶಿವಮೊಗ್ಗ ನಗರದ ಅಂಬೇಡ್ಕರ್ ಭವನದ ಹತ್ತಿರ ವಿಧ್ಯುತ್ ದೀಪ ವ್ಯವಸ್ಥೆ ಮಾಡುವಂತೆ ಮತ್ತು ಪೊಲೀಸ್ ಗಸ್ತನ್ನು ನಿಯೋಜನೆ ಮಾಡುವಂತೆ ಕೋರಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು 112 – ಇಆರ್ ವಿ ವಾಹನವನ್ನು ಸದರಿ ಸ್ಥಳದಲ್ಲಿ ಗಸ್ತು ಮಾಡಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
12) ಹೊಳೆಹೊನ್ನೂರು ವ್ಯಾಪ್ತಿಯ ದೇವಸ್ಥಾನವೊಂದರಲ್ಲಿ ಪ್ರವೇಶಕ್ಕೆ ನಿರ್ಭಂಧವಿದ್ದ ದೂರಿನ ಮೇರೆಗೆ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ಮಧ್ಯ ಪ್ರವೇಶಿಸಿ, ದೇವಸ್ಥಾನದ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು ಸಮಸ್ಯೆಯನ್ನು ಬಗೆಹರಿಸಿ, ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆಂದು ಧನ್ಯವಾದಗಳನ್ನು ತಿಳಿಸಿದರು.
13) ಪುರ್ಲೆ ಗ್ರಾಮದ ಜಾತ್ರೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಮುಂಜಾಗ್ರತೆ ವಹಿಸಿ, ಸೂಕ್ತ ಬಂದೋಬಸ್ತ್ ಮಾಡಿಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಲು ಸಹಕಾರಿಯಾಗಿದ್ದು, ಇದರಿಂದ ಎಲ್ಲಾ ಗ್ರಾಮಸ್ಥರ ಪರವಾಗಿ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಿದರು.
14) ರಾಗಿಗುಡ್ಡದಲ್ಲಿ ಸಾರ್ವಜನಿಕರಲ್ಲಿ ಸೌರ್ಹಾದತೆಯನ್ನು ಮೂಡಿಸುವ ಸಲುವಾಗಿ ಪೊಲೀಸ್ ಇಲಾಖೆಯ ವತಿಯಿಂದ ಕ್ರಿಕೇಟ್ ಪಂದ್ಯಾವಳಿಯನ್ನು ನಡೆಸಿದ್ದು ಶ್ಲಾಘನಿಯವಾಗಿರುತ್ತದೆ. ಆದ್ದರಿಂದ ಇಲಾಖೆಯ ಈ ಉತ್ತಮ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಗೋಪಾಲ ಕೃಷ್ಣ ಟಿ ನಾಯ್ಕ ಪೊಲೀಸ್ ಉಪಾಧೀಕ್ಷಕರು ಸಾಗರ ಉಪ ವಿಭಾಗ, ಶ್ರೀ ನಾಗರಾಜ್, ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪ ವಿಭಾಗ, ಶ್ರೀ ಬಾಬು ಅಂಜನಪ್ಪ, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಎ ಉಪವಿಭಾಗ, ಶ್ರೀ ಸುರೇಶ್, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಬಿ ಉಪವಿಭಾಗ, ಶ್ರೀ ಕೇಶವ್, ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪವಿಭಾಗ ಮತ್ತು ಶ್ರೀ ಗಜಾನನ ವಾಮನ ಸುತಾರ, ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪವಿಭಾಗ, ಜಿಲ್ಲೆಯ ಎಲ್ಲಾ ಸಿಪಿಐ / ಪಿಐ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.