ಶಿವಮೊಗ್ಗ: ಕಾರ್ಮಿಕ ಕಾರ್ಡ್ ಪಡೆದು ಸರ್ಕಾರದ ಸೌಲಭ್ಯ ಪಡೆಯುತ್ತಿರುವ ನಕಲಿ ಕಾರ್ಡ್‌ಗಳನ್ನು ರದ್ದು ಪಡಿಸಬೇಕು ಹಾಗೂ ನಕಲಿ ಕಾರ್ಮಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಐಎನ್‌ಟಿಯುಸಿ ಹಾಗೂ ಕಾರ್ಮಿಕ ಕಾಂಗ್ರೆಸ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಜನರು ನಕಲಿ ಕಾರ್ಮಿಕ ಕಾರ್ಡ್ ಪಡೆದು ಬಡ ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಂತಹ ಅನರ್ಹರು ಪಡೆದಿರುವ ಗುರುತಿನ ಚೀಟಿ ನೋಂದಣಿಯನ್ನು ರದ್ದುಪಡಿಸುವುದು ಮಾತ್ರವಲ್ಲದೇ, ಅಂಥಹವರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಬೇಕು ಎಂದು ಮನವಿದಾರರು ಆಗ್ರಹಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಇಲಾಖೆ ನೀಡುವ ಕಾರ್ಮಿಕರ ಗುರುತಿನ ಚೀಟಿ ಪಡೆದು ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಸೂಕ್ಷ್ಮವಾಗಿ ಗಮನಿಸಬೇಕು. ಅನರ್ಹ ಫಲಾನುಭವಿಗಳ ಕಾರ್ಮಿಕ ಕಾರ್ಡ್ ರದ್ದತಿ ಅಭಿಯಾನ ಪುನರಾರಂಭಿಸಬೇಕು ಎಂದು ಮನವಿ ಮಾಡಿದರು.
ನಗರ ಪ್ರದೇಶದಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು, ವ್ಯಾಪಾರ ವ್ಯವಹಾರ ನಡೆಸುತ್ತಿರುವವರು, ನಿವೃತ್ತ ಸರಕಾರಿ, ಅರೆ ಸರಕಾರಿ ನೌಕರರು, ಎಪಿಎಲ್ ಕಾರ್ಡ್‌ದಾರರು ಸೇರಿದಂತೆ ಒಂದು ದಿನ ಸಹಾ ಕಾರ್ಮಿಕರಾಗಿ ದುಡಿಯದ ಸಾವಿರಾರು ಮಂದಿ ಈಗಾಗಲೇ ಕಾರ್ಮಿಕರೆಂದು ಪ್ರಮಾಣ ಪತ್ರ ಪಡೆದಿದ್ದಾರೆ. ಗುತ್ತಿಗೆದಾರರ ಬಳಿ ತೆರಳಿ ಹಣ ನೀಡಿ ಉದ್ಯೋಗ ಪತ್ರ ಪಡೆದು ಅರ್ಜಿ ಸಲ್ಲಿಸಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಬೇಕು ಹಾಗೂ ಕಾರ್ಮಿಕರಲ್ಲದವರಿಗೆ ಉದ್ಯೋಗ ಪತ್ರ ನೀಡಿದವರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಮೊದಲು ಇಲಾಖೆಯಿಂದ ನೋಂದಾಯಿತ ಕೇಂದ್ರಗಳಲ್ಲಿ ಇಲ್ಲವೆ ಕಾಮನ್ ಸರ್ವಿಸ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈ ವೇಳೆ ನೋಂದಾಯಿತ ಕೇಂದ್ರದ ಲಾಗಿನ್ ಮಾಹಿತಿ ಪಡೆದು ಕೆಲವು ಸೈಬರ್ ಕೇಂದ್ರಗಳಲ್ಲಿ ನೋಂದಣಿ ನಡೆದಿರುವ ಬಗ್ಗೆ ವರದಿಯಾಗಿದೆ.
ಇದರಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಯಿದ್ದು, ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಇದುವರೆಗೆ ಮರಳು, ಕಲ್ಲು, ಸಿಮೆಂಟ್ ಮುಟ್ಟದವರ ಬಳಿಯೂ ಕಾರ್ಮಿಕರ ಕಾರ್ಡ್ ಕಂಡು ಬಂದಿವೆ. ಅದರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ ಎನ್ನಲಾಗಿದೆ. ಅಸಂಘಟಿತರಾಗಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು, ಸರ್ಕಾರ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡುತ್ತಿದೆ. ಆದರೆ ಇದು ದರ್ಬಳಕೆ ಆಗುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದ್ದಾರೆ.
ಒಂದೇ ಮನೆಯಲ್ಲಿ ಒಂದಿಬ್ಬರು ಕಟ್ಟಡ ಕಾರ್ಮಿಕರು ಇರುವುದು ಸಹಜ. ಆದರೆ ಗಂಡ ಗಾರೆ ಕೆಲಸದಲ್ಲಿ ತೊಡಗಿಕೊಂಡಿದ್ದರೆ,ಆತನ ಹೆಂಡತಿ ಹಾಗೂ 18 ವರ್ಷ ತುಂಬಿದ ಮಕ್ಕಳಿಗೂ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು ಕಾರ್ಮಿಕ ಇಲಾಖೆಯ ಯೋಜನೆಗಳನ್ನು ಪಡೆದುಕೊಂಡಿರುವ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ಹಾಗಾಗಿ ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ಸರ್ಕಾರದ ಕಾರ್ಮಿಕ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಶ್ರಮಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರು ಮಧು ಕುಮಾರ್ ಜಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ನ ಅಧ್ಯಕ್ಷರು ಶಿವಕುಮಾರ ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಅಧ್ಯಕ್ಷರು ವಿನಯ್ ಟಿವಿ ಹೇಮಂತ ನವೀನ ಎನ್ ಎಸ್ ಯು ಐ ರಾಜ್ಯ ಕಾರ್ಯದರ್ಶಿ ಬಾಲಾಜಿ ಹೆಚ್ ಎಸ್ ನಿಖಿಲ್ ಮಲ್ಲೇಶ್ ಇನ್ನಿತರರಿದ್ದರು.