ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಶುಕ್ರವಾರ ಜನಸಾಗರದಲ್ಲಿ ಸಾಗಿ ಬಂದು ನಾಮಪತ್ರ ಸಲ್ಲಿಸಿದರು.

ಇದೇ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಈ ಮಟ್ಟಿಗೆ ಜನ ಸಾಗರವೇ ಹರಿದು ಬಂದಿದ್ದು ವಿಶೇಷವಾಗಿತ್ತು. ಈಶ್ವರಪ್ಪ ಅವರನ್ನು ಬೆಂಬಲಿಸಲು ನಗರದ ಪ್ರಮುಖ ಬೀದಿಗಳಲ್ಲಿ ಅಕ್ಷರಸಃ ಜನಸಾಗರವೇ ತುಂಬಿತ್ತು.

ನಾಮಪತ್ರ ಸಲ್ಲಿಕೆ ಹಿನ್ನೆಲೆ ಬೆಳಗ್ಗೆಯೇ ನಗರದ ಶಕ್ತಿ ದೇವತೆಗಳಾದ ಕೋಟೆ ಶ್ರೀ ಆಂಜನೇಯ ದೇವಸ್ಥಾನ ಹಾಗೂ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ತರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ರಾಮಣ್ಣಶ್ರೇಷ್ಠಿ ಪಾರ್ಕ್‌ನಲ್ಲಿ ಜಮಾಯಿಸಿದ ಕೆ.ಎಸ್.ಈಶ್ವರಪ್ಪ ಅಭಿಮಾನಿಗಳು, ಬೆಂಬಲಿಗರು ಕೇಸರಿ ಬಾವುಟ ಹಿಡಿದು ಜೈ ಶ್ರೀರಾಮ್ ಕೇಸರಿ ವಿವಿಧ ಘೋಷಣೆ ಮೊಳಗಿಸಿದರು.

ಬೆಳಗ್ಗೆಯೇ ರಾಮಣ್ಣ ಶ್ರೇಷ್ಠಿ ಗಣಪತಿ ದೇವಸ್ಥಾನದಲ್ಲಿ ನೀನಮ್ಮ ಗೆಲುವಾಗಿ ಬಾ ಭಕ್ತಿ ಗೀತೆ ಹಾಡುವ ಮೂಲಕ ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಬೃಹತ್ ಮೆರವಣಿಗೆ, ನಗರದ ಗಾಂಧಿಬಜರ್, ಅಮೀರ್ ಅಹಮ್ಮದ್ ವೃತ್ತ, ಸೀನಪ್ಪ ಶೆಟ್ಟಿ(ಗೋಪಿವೃತ್ತ) ವೃತ್ತ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಬಿಸಿಲನ್ನೂ ಈಶ್ವರಪ್ಪ ಅಭಿಮಾನಿಗಳು, ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸುಮಾರು ೩೦ ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಗಾಂಧಿಬಜರ್‌ನಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ ಹಿನ್ನಲೆ ಮೆರವಣಿಗೆ ನಿಧಾನಗತಿಯಲ್ಲಿ ಸಾಗಿತು. ನಾಮಪತ್ರ ಸಲ್ಲಿಕೆಗೆ ಸಮಯ ಮೀರುತ್ತಿದ್ದ ಕಾರಣ ಗಾಂಧಿ ಬಜಾರ್ ಮಾರ್ಗ ಮಧ್ಯೆಯೇ ಈಶ್ವರಪ್ಪ ನಾಮಪತ್ರ ಸಲ್ಲಿಸಲು ತೆರಳಿದರು.

ಈಶ್ವರಪ್ಪ ತೆರಳಿದ ಬಳಿಕ ಮೆರವಣಿಗೆಯನ್ನು ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್ ಮುಂದುವರೆಸಿದರು. ಶಿವಪ್ಪ ನಾಯಕ ಪ್ರತಿಮೆಗೆ ಕೆ.ಇ.ಕಾಂತೇಶ್ ಮಾಲಾರ್ಪಣೆ ಮಾಡಿದರು. ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೂಪದ ವ್ಯಕ್ತಿ ಎಲ್ಲರ ಗಮನ ಸೆಳೆದರು.

ರಾಷ್ಟ್ರಭಕ್ತರ ಬಳಗ ಹೆಸರಿನ ವಾಹನದಲ್ಲಿ ರಾಮ, ಹನುಮ ಮತ್ತು ಕಪಿ ಸೇನೆಯ ವೇಷಧಾರಿಗಳು, ಹಾಗೂ ವಿವಿಧ ವೇಷಧಾರಿಗಳು, ವಾದ್ಯಗಳೊಂದಿಗೆ ಈಶ್ವರಪ್ಪನವರು ಮೆರವಣಿಗೆ ನಡೆಸಿದರು. ರಾಮನ ವೇಷಧಾರಿಯೊಂದಿಗೆ ಕಾರ್ಯಕರ್ತರು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ವಾಹನದಲ್ಲಿ ಮೋದಿ ಹಾಗೂ ಈಶ್ವರಪ್ಪನವರ ಫೊಟೊವುಳ್ಳ ಫ್ಲೆಕ್ಸ್ ಅನ್ನು ಅಳವಡಿಸಲಾಗಿತ್ತು.
ಕಾರ್ಯಕರ್ತರು ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಮೋದಿ ಮತ್ತು ಈಶ್ವರಪ್ಪನವರು ಇರುವ ಬಾವುಟಗಳು ರಾರಾಜಿಸಿದವು.

ವರದಿ ಪ್ರಜಾ ಶಕ್ತಿ