ಬೈಂದೂರು: ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಿದ್ದ ವಿಷಯಗಳು ನನೆಗುದಿಗೆ ಬಿದ್ದಿವೆ. ಇಲ್ಲಿ ಮೀನುಗಾರಿಕೆ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಪರಿಹಾರ ಕಂಡು ಕೊಳ್ಳಬೇಕಿದ್ದರೆ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಬೇಕು ಎಂದು ಎಐಸಿಸಿ ಸಿಡಬ್ಲ್ಯುಸಿ ಸದಸ್ಯ ವೀರಪ್ಪ ಮೊಯಿಲಿ ಹೇಳಿದರು.

ತಾಲ್ಲೂಕಿನ ಉಪ್ಪುಂದ ಅಂಬಾಬಾಗಿಲು ಸಂತೆ ಮಾರ್ಕೆಟ್ ವಠಾರದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ಸಂಸತ್ ಸದಸ್ಯ ಸ್ಥಾನಕ್ಕೆ ಆಯ್ಕೆ ಆದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಂದ ಇಲ್ಲಿನ ಮೀನುಗಾರರ ಸಮಸ್ಯೆ ಪರಿಹಾರ ಆಗಲಿಲ್ಲ. ಈ ಸಮಸ್ಯೆ ಕುರಿತ ಕ್ಯಾಬಿನೆಟ್ ನಲ್ಲಿ ಇಂದು ಭಾರಿಯೂ ಕೂಡ ಚರ್ಚಿಸಿಲ್ಲ ಎಂದು ದೂರಿದರು.

ದೇಶದಲ್ಲಿ ಕಾಂಗ್ರೆಸ್ ಬಡವರ ಪರವಾದ ಕಾನೂನು ಮಾಡಲು ಹೊರಟಿದೆ. ಆದರೆ, ಬಿಜೆಪಿಯವರು ಶ್ರೀಮಂತರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ದೇಶದ ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಪ್ಪಿಸುವ ಹುನ್ನಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಇಲ್ಲಿ ಬದುಕುವ ಹಕ್ಕು ಬಡವರು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ದೇಶದ ಈ ಚುನಾವಣೆಯಲ್ಲಿ ಬಿಜೆಪಿಯನ್ನು ತೊಲಗಿಸಬೇಕಿದೆ ಎಂದರು.

ದೇಶದಲ್ಲಿ ಶೇ 86 ಯುವಜನತೆಗೆ ಉದ್ಯೋಗ ಸಿಗುತ್ತಿಲ್ಲ. ಮಹಿಳೆಯರ ವಿರುದ್ಧ ಶೋಷಣೆ ಹೆಚ್ಚಾಗಿದೆ. ಇದೆಲ್ಲವನ್ನೂ ಪ್ರಧಾನಿ ಮೋದಿ ಅವರು ಸಮರ್ಥನೆ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಮಹಿಳೆಯರು ಎಚ್ಚರಗೊಳ್ಳಬೇಕು ಎಂದರು.

ದೇಶದ ಕಾಂಗ್ರೆಸ್ ಪಕ್ಷದಿಂದ ಕಡುಬಡವರಿಗೂ ಉನ್ನತ ಸ್ಥಾನ ನೀಡಲಾಗುತ್ತಿದೆ. ಬಡವರ ಬಂಧುವಾಗಿದ್ದ ದಿವಂಗತ ಬಂಗಾರಪ್ಪ ಅವರ ಪುತ್ರಿ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಹರಸಬೇಕು ಎಂದರು.

ಇಲ್ಲಿ ನಟ ರಾಜ ಕುಮಾರ್ ಹಾಗೂ ಶಿವರಾಜಕುಮಾರ ಅವರ ಕುಟುಂಬಕ್ಕೆ ಹಣದ ಅವಶ್ಯಕತೆ ಇಲ್ಲ.ಗೀತಾ ಅವರು, ಜನಸಾಮಾನ್ಯರಿಗೆ ಸೇವೆ ನೀಡಲು ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಜನಪರ ಆಡಳಿತ ನೀಡಲು ಕ್ಷೇತ್ರದ ಜನರು ಅವಕಾಶ ಕಲ್ಪಿಸಿಕೊಡಬೇಕು‌. ಇಲ್ಲಿನ ಸಮಸ್ಯೆಗಳಿಗೆ ಧ್ವನಿ ಆಗಿರುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ, ಬೈಂದೂರು ಬ್ಲಾಕ್ ಅಧ್ಯಕ್ಷ ಅರಿವಿಂದ ಪೂಜಾರಿ, ರಾಜು ಪೂಜಾರಿ, ರಘುರಾಂ ಶೆಟ್ಟಿ, ಶಂಕರ್ ಪೂಜಾರಿ, ಗೌರಿ ದೇವಾಡಿಗ, ಜಗದೀಶ್ ದೇವಾಡಿಗ, ಮಂಜು ಪೂಜಾರಿ, ಭರತ್ ದೇವಾಡಿಗ, ಸುಭ್ರಮಣ್ಯ ಭಟ್, ಡಿ.ಆರ್.ರಾಜು ಸೇರಿ ಕಾರ್ಯಕರ್ತರು ಇದ್ದರು.

ವರದಿ ಪ್ರಜಾ ಶಕ್ತಿ