ನಾನು ತವರು ಮರೆಯುವ ಪ್ರಶ್ನೆಯೇ ಇಲ್ಲ. ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಬರುವುದಿಲ್ಲ ಎಂದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್ ಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಸುಮಾರು ೫.೩೫ ಲಕ್ಷ ಮತಗಳು ಬಂದಿವೆ. ಇದೇನು ಕಡಿಮೆಯೇನಲ್ಲ. ಕಳೆದ ಸಲಕ್ಕಿಂತಲೂ ದುಪ್ಪಟ್ಟು ಮತ ಪಡೆದಿರುವೆ. ಚುನಾವಣೆ ಎಂದರೆ ಸೋಲು, ಗೆಲುವು ಇದ್ದೇ ಇರುತ್ತದೆ. ಯಾರಾದರೂ ಒಬ್ಬರು ಗೆಲ್ಲಲೇ ಬೇಕಲ್ಲವೇ? ಚುನಾವಣೆಯಲ್ಲಿ ನಾವು ಮತ್ತು ನಮ್ಮ ಪಕ್ಷ ಮಾಡಬೇಕಾದ ಕೆಲಸ ಮಾಡಿದ್ದೇವೆ. ಗೆಲ್ಲುವ ವಿಶ್ವಾಸವಿತ್ತು. ಆದರೆ, ಸೋತಿದ್ದೇನೆ. ಗೆದ್ದವರಿಗೆ ಅಭಿನಂದನೆ. ಅವರು ಒಳ್ಳೆಯ ಕೆಲಸ ಮಾಡಲಿ ಎಂದರು.
ಸೋಲಿನ ಹೊಣೆಯನ್ನು ಯಾರ ಮೇಲೂ ಹೊರಿಸಲು ನನಗೆ ಇಷ್ಟವಿಲ್ಲ. ಸೋಲಿನ ಹೊಣೆಯನ್ನು ನಾವು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಾವು ಯಾರೂ ತಪ್ಪು ಮಾಡಿಲ್ಲ. ಎಲ್ಲರೂ ಅವರವರ ಕೆಲಸ ಮಾಡಿದ್ದಾರೆ. ಬಿಸಿಲು ಎನ್ನದೇ, ನನ್ನ ಪರವಾಗಿ ನನಗಿಂತ ಹೆಚ್ಚು ಕೆಲಸವನ್ನು ಮಹಿಳಾ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಮಾಡಿದ್ದಾರೆ. ಸೋತಿರಬಹುದು ಅದಕ್ಕಾಗಿ ದುಃಖವಿಲ್ಲ. ಮುಂದೆ ಚುನಾವಣೆಗಳು ಮತ್ತೆ ಬರುತ್ತವೆ. ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಶಿವರಾಜ್‌ಕುಮಾರ್ ಪ್ರತಿಕ್ರಿಯೆ…
ಚುನಾವಣೆಯಲ್ಲಿ ಒಬ್ಬರು ಗೆಲ್ಲಬೇಕಿತ್ತು. ಅವರು ಗೆದ್ದಿದ್ದಾರೆ. ನಮಗೆ ಯಾರೂ ಶತ್ರುಗಳಿಲ್ಲ, ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದೂ ಸರಿಯಲ್ಲ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಗೀತಾ ಗೆಲುವಿಗಾಗಿ ಎಲ್ಲರೂ ಶ್ರಮಪಟ್ಟಿದ್ದಾರೆ. ಗೆಲ್ಲುವ ವಿಶ್ವಾಸವಿತ್ತು ನಿಜ. ಆದರೆ ಸೋತಿದ್ದಾರೆ. ಫಿಲಂ ಚೇಂಬರ್ ನಿಂದ ಹಿಡಿದು ನಟರು, ನಟಿಯರು ಕೂಡ ಪ್ರಚಾರಕ್ಕೆ ಬಂದಿದ್ದರು. ಕಾರ್ಯಕರ್ತರು ಕೂಡ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಅಭಿನಂದನೆ ಎಂದರು.
ಕುಮಾರ್ ಬಂಗಾರಪ್ಪರ ಮನೆ ಮೇಲೆ ದಾಳಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ದೇವರು ಇದ್ದಾನೆ. ನೋಡಿಕೊಳ್ಳುತ್ತಾನೆ. ನಟರೆಂದ ಮೇಲೆ ಅಭಿಮಾನಿಗಳು ಇದ್ದೇ ಇರುತ್ತಾರೆ. ಯಾರ ಬಗ್ಗೆಯೂ ನಾನು ಹೇಳುವುದಿಲ್ಲ. ಯಾರಾದರೊಬ್ಬರು ಗೆಲ್ಲಲೇಬೇಕಿತ್ತಲ್ಲವೇ ಎಂದರು.