ಶಿವಮೊಗ್ಗ : ವಿದ್ಯಾರ್ಥಿಗಳು ವಾಸ್ತವತೆಯನ್ನು ವಿಮರ್ಶಿಸುವ ವೈಜ್ಞಾನಿಕ ಚಿಂತನೆಯೊಂದಿಗೆ ಬದುಕಿಗೆ ಸಾಹಿತ್ಯವೆಂಬ ಭಾವನೆಯ ಸ್ಪರ್ಶ ನೀಡಲು ಪ್ರಯತ್ನಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಹೇಳಿದರು.
ನಗರದ ಜೆ.ಪಿ.ಎನ್ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾದ ಪಠ್ಯಪುಸ್ತಕ ವಿತರಿಸಿ ಮಾತನಾಡಿದರು.
ವೈಜ್ಞಾನಿಕ ಅರಿವಿನ ಜೊತೆಗೆ ಸಾಹಿತ್ಯಾತ್ಮಕ ಚಿಂತನೆ ಅತ್ಯವಶ್ಯಕ ವಿಚಾರವಾಗಿದೆ. ಹಾಗಾಗಿಯೇ ನಮ್ಮ ಶೈಕ್ಷಣಿಕ ಅಧ್ಯಯನ ಪಠ್ಯಕ್ರಮಗಳು ವಿವಿಧ ವಿಷಯಗಳನ್ನು ಒಳಗೊಂಡಿದೆ. ಪ್ರತಿಯೊಂದು ವಿಷಯಗಳನ್ನು ಆಸಕ್ತಿಯಿಂದ ಅಧ್ಯಯನ ನಡೆಸಿ.
ನಮ್ಮ ನಡುವೆ ಅನೇಕ ದುರಾಭ್ಯಾಸಗಳು ಆಕರ್ಷಣೀಯವಾಗಿ ಕಾಣುತ್ತದೆ. ಅಂತಹ ಆಕರ್ಷಣೆಗಳು ಅಲ್ಪ ಮಾತ್ರವಾಗಿದ್ದು, ನಾವು ಕಲಿತ ವಿದ್ಯೆ ಮತ್ತು ಸೃಜನಶೀಲ ಚಿಂತನೆಗಳೆ ನಮ್ಮನ್ನು ಯಶಸ್ಸಿನ ದಡಕ್ಕೆ ಮುಟ್ಟಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಇಮ್ತಿಯಾಜ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯಮುನಾ.ಆರ್, ಪ್ರಶಾಂತ್ ಹಳದಪ್ಪ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.