ಬಿಜೆಪಿ ಶಿಕಾರಿಪುರ ಮಂಡಲ ಇಂದು ಕುಮುದ್ವತಿ ಸಭಾಂಗಣದಲ್ಲಿ ಲೋಕಸಭಾ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ “ಕೃತಜ್ಞತಾ ಸಮಾರಂಭ” ದಲ್ಲಿ ಪಾಲ್ಗೊಂಡು, ನೆರೆದಿದ್ದ ಸಾವಿರಾರು ಸಂಖ್ಯೆಯ ಆತ್ಮೀಯ ದೇವದುರ್ಲಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಾಯಿತು.

ಸತತ ನಾಲ್ಕನೇ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಎರಡು ಲಕ್ಷಗಳ ಅಧಿಕ ಮತಗಳ ಅಂತರದಿಂದ ಚುನಾಯಿತನಾಗಲು ಪಕ್ಷದ ಎಲ್ಲಾ ಕಾರ್ಯಕರ್ತರ ಪರಿಶ್ರಮ ಊಹೆಗೂ ಮಿಲುಕದ್ದು ಎಂದೇ ನಾನು ಭಾವಿಸಿದ್ದೇನೆ. ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದಲ್ಲಿ ಮತ್ತಷ್ಟು ಹುಮ್ಮಸ್ಸಿನಿಂದ ಅಭಿವೃದ್ಧಿ ಕಾರ್ಯಗಳ ಮೂಲಕ ಕಾರ್ಯನಿರ್ವಹಿಸುತ್ತೇನೆ ಎಂಬ ಭರವಸೆ ನೀಡುತ್ತೇನೆ.

ಜಿಲ್ಲೆಯಲ್ಲಿ ನನ್ನ ಲೋಕಸಭಾ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅನೇಕ ಜನಪರ ಯೋಜನೆಗಳ ಮೇಲೆ ನಂಬಿಕೆ ಇಟ್ಟು ಮತನೀಡಿದ ಕ್ಷೇತ್ರದ ಮತದಾರ ಬಾಂಧವರಿಗೆ ಈ ವೇದಿಕೆಯ ಮೂಲಕ ಕೃತಜ್ಞತೆ ಸಲ್ಲಿಸಲು ನಾನು ಉತ್ಸುಕನಾಗಿದ್ದೇನೆ. ನನ್ನ ಮೇಲೆ ಇಟ್ಟಿರುವ ಈ ನಂಬಿಕೆಯನ್ನು ಉಳಿಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇನೆ. ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಮುಂಬರುವ ದಿನಗಳಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂಬ ಭರವಸೆ ನೀಡುತ್ತೇನೆ.

ಈ ಸಂದರ್ಭದಲ್ಲಿ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ , ನೂತನ ವಿಧಾನಪರಿಷತ್ ಶಾಸಕರಾದ ಶ್ರೀ ಡಾ. ಧನಂಜಯ ಸರ್ಜಿ , ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮೇಘರಾಜ್ , ಬಿಜೆಪಿ ಶಿಕಾರಿಪುರ ಅಧ್ಯಕ್ಷರಾದ ಶ್ರೀ ಹನುಮಂತಪ್ಪ , ಶ್ರೀ ಗುರುಮೂರ್ತಿ ಅವರು ಸೇರಿದಂತೆ ಮಂಡಲದ ಎಲ್ಲಾ ಪ್ರಮುಖ ಕಾರ್ಯಕರ್ತರು, ಮುಖಂಡರು, ಗಣ್ಯರು ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ