ಬಾರ್ಬಡೋಸ್ ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ರೋಚಕ ಪಂದ್ಯ ನಡೆಯಿತು.ಪಂದ್ಯದಲ್ಲಿ ರನ್ ಮೆಷಿನ್ ಕೊಹ್ಲಿಯ ಅಬ್ಬರದ ಅರ್ಧಶತಕ (76 ರನ್) ಹಾಗೂ ಅಕ್ಷರ್ ಪಟೇಲ್ ಅವರ ಸ್ಫೋಟಕ ಬ್ಯಾಟಿಂಗ್ (47 ರನ್) ಹಾಗೂ ಆಲ್ರೌಂಡರ್ ಬುಮ್ರ, ಹಾರ್ದಿಕ್ ಪಾಂಡ್ಯ ಶಿಸ್ತಿನ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ 2024 ವಿಶ್ವಕಪ್ ಗೆಲುವು ಸಾಧಿಸಿದೆ.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋತಿತ್ತು. ಆದರೆ ಈಗ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಮತ್ತೆ ಚಾಂಪಿಯನ್‌ ಆಗಿದೆ. ಇಂದಿನ ರಣರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಸಲಿ ಚಾಂಪಿಯನ್‌ ಯಾರು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

ಭಾರತದ ಪಾಲಿಗೆ ಇದು ಸ್ಮರಣೀಯ ಟ್ರೋಫಿ. ತಂಡ ನಾಯಕ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗೆ ಅಪೇಕ್ಷಿತ ಚಾಂಪಿಯನ್ ಪಟ್ಟ. ಅತ್ತ ದಕ್ಷಿಣ ಆಫ್ರಿಕಾ ತಂಡ ತನ್ನ ಚೋಕರ್ಸ್​ ಹಣೆಪಟ್ಟಿಯನ್ನು ಮತ್ತಷ್ಟು ದಿನ ಕಟ್ಟಿಕೊಳ್ಳುವಂತಾಯಿತು. 4 ದಶಕಗಳ ತನ್ನ ವಿಶ್ವಕಪ್​ ಅಭಿಯಾನದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದೇ ನಿರಾಸೆ ಎದುರಿಸಿತು.