ʼಸಂಶೋಧನೆ ಎಂಬುದು ಬುದ್ಧಿ ಮತ್ತು ಶ್ರಮ ಎರಡನ್ನೂ ನಿರೀಕ್ಷೆ ಮಾಡುವ ಕೆಲಸ; ಆದರೆ ಇತ್ತೀಚೆಗೆ ಇವೆರಡನ್ನೂ ನಿರೀಕ್ಷಿತ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಸಂಶೋಧಕರ ಕೊರತೆ ಹೆಚ್ಚಾಗುತ್ತಿದ್ದು ಇದು ಒಟ್ಟಾರೆಯಾಗಿ ಸಂಶೋಧನಾ ಪ್ರಬಂಧಗಳ ಗುಣಮಟ್ಟ ಕುಸಿಯಲು ಕಾರಣವಾಗಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆʼ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ ಡಿ.ವಿ ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ಅವರು ತೀರ್ಥಹಳ್ಳಿ ಸಮೀಪದ ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ʼಹಿರಿಯ ಸಂಶೋಧನಾ ವಿದ್ವಾಂಸರ ಸಂಘವನ್ನು ಉದ್ಘಾಟಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ʻಹಿಂದೆ ಸಂಶೋಧನೆಗೆ ಬರುವವರು ಪ್ರಮಾಣಪತ್ರ ಸಿಗಲಿ ಬಿಡಲಿ ನನ್ನ ಸಂಶೋಧನೆಯನ್ನು ನಾಲ್ಕುಜನ ಓದಿ ಮೆಚ್ಚಿಕೊಂಡರೆ ಸಾಕು ಎನ್ನುವ ಮನಸ್ಥಿತಿ ಹೊಂದಿದ್ದರೆ ಈಗ ಅದಕ್ಕೆ ವಿರುದ್ಧವಾಗಿ ಜನ ಓದಲಿ ಬಿಡಲಿ ಪ್ರಮಾಣಪತ್ರ ಸಿಕ್ಕರೆ ಸಾಕು ಎನ್ನುವ ಮನಸ್ಥಿತಿಯವರು ಬರುತ್ತಿದ್ದಾರೆ. ಇದರ ಬಗ್ಗೆ ಹಿರಿಯ ಸಂಶೋಧಕರು ಗಂಭೀರವಾಗಿ ಚಿಂತಿಸಬೇಕಾಗಿದೆʼ ಎಂದರು.

ʻಹಂಪಿಯ ಕನ್ನಡ ವಿವಿ ಸಂಶೋಧನೆಗಾಗಿಯೇ ಇರುವ ಒಂದು ವಿಶಿಷ್ಟ ವಿಶ್ವವಿದ್ಯಾಲಯವಾಗಿದ್ದುಸಾಕಷ್ಟು ಸಮಸ್ಯೆಗಳ ನಡುವೆಯೂ ಜ್ಞಾನವನ್ನು ಸೃಷ್ಟಿಸುವ ಮತ್ತು ವಿತರಿಸುವ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದೆʼ ಎಂದ ಅವರು ಅದನ್ನು ಕನ್ನಡಿಗರೆಲ್ಲರ ವಿಶ್ವವಿದ್ಯಾಲಯವನ್ನಾಗಿ ಮಾಡಲು ಹಿರಿಯ ಸಂಶೋದಕರೆಲ್ಲರೂ ಸಹಾಯಮಾಡಬೇಕು, ಇದಕ್ಕೆ ಸಂಘಕ್ಕೆ ಬೇಕಾದ ಎಲ್ಲ ಬೆಯ ಸಹಕಾರವನ್ನು ವಿಶ್ವವಿದ್ಯಾಲಯವು ನೀಡುತ್ತದೆʼಎಂದು ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಂಶೋಧನಾ ವಿದ್ವಾಂಸರ ಸಂಘದ ಅಧ್ಯಕ್ಷರಾದ ಡಾ. ಕೆ.ಟಿ. ಪಾರ್ವತಮ್ಮ ವಹಿಸಿದ್ದರು. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌, ಕುವೆಂಪು ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ ಬಿ ಎಂ ಪುಟ್ಟಯ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಡಾ ರಾಜೇಂದ್ರ ಬುರಡಿಕಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಡಾ. ರಾಜೇಂದ್ರ ಬುರಡಿಕಟ್ಟಿ
ಪ್ರಧಾನ ಕಾರ್ಯದರ್ಶಿ
ಹಿರಿಯ ಸಂಶೋಧನಾ ವಿದ್ವಾಂಸರ ಸಂಘ, ಕುಪ್ಪಳಿ.
ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
Ph: 8310938434, 9481504080
Email:srsa2023@gmail.com
05-07-2024

ವರದಿ ಪ್ರಜಾ ಶಕ್ತಿ