ಗುಣಮಟ್ಟದ ಶಿಕ್ಷಣ ಮತ್ತು ಪರೀಕ್ಷಾ ಪಾವಿತ್ರ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳು ಉತ್ತಮ ಫಲತಾಂಶ ಪಡೆಯಲು ಅನುಕೂಲಕರವಾದ ಎಲ್ಲ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.


ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ 2022-23 ನೇ ಸಾಲಿನಲ್ಲಿ ಎಸ್ ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಹಾಗೂ 2023-24 ನೇ ಸಾಲಿನಲ್ಲಿ ಎಸ್ ಎಸ್ ಎಲ್‍ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‍ಎಸ್‍ಎಲ್‍ಸಿ ಯಲ್ಲಿ ಉತ್ತಮ ಅಂಕ ಮತ್ತು ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳು ಹಾಗೂ ಶಾಲೆಗಳು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿವೆ. ಈ ಬಾರಿ ಜಿಲ್ಲೆ ಎಸ್‍ಎಸ್‍ಎಲ್‍ಸಿ ಯಲ್ಲಿ 3 ನೇ ಸ್ಥಾನಕ್ಕೆ ಏರಿದ್ದು, ಈ ಸಾಧನೆಯನ್ನು ಶಿಕ್ಷಕ ವೃಂದಕ್ಕೆ ಅರ್ಪಿಸುತ್ತೇನೆ.
ಗುಣಮಟ್ಟದ ಶಿಕ್ಷಣ ನೀಡಲು ಹಲವು ಬದಲಾವಣೆಗಳನ್ನು ಮಾಡಲಾಗಿದೆ. ವರ್ಷದಲ್ಲಿ ಮೂರು ಪರೀಕ್ಷೆಯಿಂದ ಹಾಗೂ ಕಾಪಿಗೆ ಯಾವುದೇ ಅವಕಾಶವಿಲ್ಲದೆ ಶಿಸ್ತುಬದ್ದ ಪರೀಕ್ಷೆ ನಡೆಸಿರುವುದು ಉತ್ತಮ ಫಲಿತಾಂಶವನ್ನೇ ನೀಡಿದೆ.


ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇತ್ತು. ಕಡಿಮೆ ಕಾಲಮಿತಿಯಲ್ಲಿ 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಪೌಷ್ಟಿಕಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು 8ನೇ ತರಗತಿವರೆಗೆ ಮಾತ್ರ ನೀಡಲಾಗುತ್ತಿದ್ದ ಮೊಟ್ಟೆಯನ್ನು 10 ನೇ ತರಗತಿವರೆಗೆ ವಿಸ್ತರಿಸಲಾಗಿದೆ. ರಾಗಿ ಮಾಲ್ಟ್ ನೀಡಲಾಗುತ್ತಿದೆ. ಹಾಗೂ ವಾರದಲ್ಲಿ ಒಂದು ನೀಡುತ್ತಿದ್ದ ಮೊಟ್ಟೆಯನ್ನು 2 ದಿನಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ವಾರದಲ್ಲಿ 6 ದಿನವೂ ಮೊಟ್ಟೆ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಶಿಥಿಲಾವಸ್ಥೆಯಲ್ಲಿ ಇರುವ ಶಾಲಾ ಕಟ್ಟಡ ಮತ್ತು ಕೊಠಡಿಗಳನ್ನು ಹಂತ ಹಂತವಾಗಿ ರಿಪೇರಿ ಮಾಡಲಾಗುತ್ತಿದೆ. 1600 ಕೊಠಡಿ ರಿಪೇರಿ ಮತ್ತು ಅವಶ್ಯವಿರುವೆಡೆ ಹೊಸ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಮಂಜೂರಾತಿ ದೊರೆಯಲಿದೆ.

ರಾಜ್ಯದಲ್ಲಿ ಹೊಸದಾಗಿ 500 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು, ಉನ್ನತೀಕರಿಸಲಾಗುವುದು ಎಂದು ಹೇಳಿದ್ದ ಪ್ರಕಾರ ಹಂತ ಹಂತವಾಗಿ ಕೆಪಿಎಸ್ ಶಾಲೆ ಉನ್ನತೀಕರಣ ಆಗುತ್ತಿದೆ. ಕೆಪಿಎಸ್ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಮಾಧ್ಯಮ, ಎಲ್‍ಕೆಜಿ, ಯುಕೆಜಿ, ಲೈಬ್ರರಿ ಸೇರಿದಂತೆ ಉತ್ತಮ ಸೌಲಭ್ಯಗಳು ದೊರೆಯಲಿದ್ದು 500 ರಿಂದ 1 ಸಾವಿರ ಕೆಪಿಎಸ್ ಶಾಲೆಗಳನ್ನು ತೆರೆಯುವ ಮತ್ತು
10 ಲಕ್ಷ ಮಕ್ಕಳು ಓದುವ ಗುರಿ ಹೊಂದಲಾಗಿದೆ. ಮುಂದಿನ ವರ್ಷ 3 ಲಕ್ಷ ವಿದ್ಯಾರ್ಥಿಗಳು ಇಲ್ಲಿ ಓದುವ ಗುರಿ ಹೊಂದಲಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಲಾಗುವುದು. ಡಿಡಿಪಿಐ, ಬಿಇಓ ಗಳು ಈ ಕಡೆ ಹೆಚ್ಚಿನ ಗಮನ ನೀಡಬೇಕು. ಶಾಲಾ ಹಾಜರಾತಿ ಕುರಿತು ಸುಳ್ಳು ಹೇಳುವಂತಿಲ್ಲ. ಸ್ಯಾಟ್ಸ್ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು. ಸರ್ಕಾರಿ ಶಾಲೆಯಲ್ಲೇ ಅತ್ಯುತ್ತಮ ಶಿಕ್ಷಕರಿದ್ದು ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ಸಂಜೆ ಪಾಠ ವ್ಯವಸ್ಥೆ ಮಾಡಿದಲ್ಲಿ ಫಲಿತಾಂಶ ಹೆಚ್ಚಲಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಶೇ.100 ಫಲಿತಾಂಶ ಬರಬೇಕು. ಹೆಮ್ಮೆಯಿಂದ ಸರ್ಕಾರಿ ಶಾಲೆಗೆ ಮಕ್ಕಳು ಬರುವಂತೆ ಆಗಬೇಕು ಎಂದರು.


ಪ್ರಸ್ತುತ ಎಲ್ಲ ಪೋಷಕರಿಗೆ ತಮ್ಮ ಮಕ್ಕಳಿಗೆ ನೀಟ್ ತರಬೇತಿ ಕೊಡಿಸುವುದು ಸಾಧ್ಯವಿಲ್ಲ. ಅತಿ ದುಬಾರಿ, ಆದ್ದರಿಂದ ರಾಜ್ಯ ಸರ್ಕಾರ ಹೊಸ ಯೋಜನೆ ಜಾರಿಗೆ ತಂದು ಮೊದಲ ಹಂತದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ 20 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೀಟ್ ತರಬೇತಿ ನೀಡಲಿದೆ. ಈ ಯೋಜನೆ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ.
ಹಂತ ಹಂತವಾಗಿ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಈ ವರ್ಷ ಸುಮಾರು 10 ಸಾವಿರ ಸರ್ಕಾರಿ ಶಿಕ್ಷಕರ ನೇಮಕ ಮಾಡಲಾಗುವುದು. ಅನುದಾನಿತ ಶಾಲೆಗಳಿಗೂ 2020 ರಿಂದ ಮಂಜೂರಾತಿ ನೀಡಲು ಮತ್ತು ಅವರ ಅಭಿವೃದ್ದಿಗಾಗಿ ಪ್ರಯತ್ನಿಸಲಾಗುವುದು ಎಂದರು.


ಕಾರ್ಯಕ್ರಮದಲ್ಲಿ 2022-23 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ 3 ಮತ್ತು ತಾಲ್ಲೂಕುಗಳಿಂದ ತಲಾ 3 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು ಹಾಗೂ 2023-24 ನೇ ಸಾಲಿನಲ್ಲಿ ಎಸ್‍ಎಸ್ ಎಲ್‍ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕ/ಶಿಕ್ಷಕರನ್ನು ಅಭಿನಂದಿಸಲಾಯಿತು.
ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಸುಂದರೇಶ್ ಮಾತನಾಡಿದರು. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸ್ವಾಗತಿಸಿದರು.
ಕಾರ್ಯಕರಮದಲ್ಲಿ ಜಿ.ಪಂ ಸಿಇಒ ಎನ್.ಹೇಮಂತ್, ಶಿಕ್ಷಕರ ಸಂಘದ ಸಿದ್ದಬಸಪ್ಪ, ಧರ್ಮಪ್ಪ, ರಾಘವೇಂದ್ರ, ಹರಿಪ್ರಸಾದ್, ಬಿಇಓ, ಶಿಕ್ಷಣಾಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

ವರದಿ ಪ್ರಜಾ ಶಕ್ತಿ