ಶಿವಮೊಗ್ಗ: ಬದುಕಿನಲ್ಲಿ ಎದುರಾಗುವ ಅವಮಾನಗಳಿಂದ ಕುಗ್ಗದೆ ಸ್ಪೂರ್ತಿಯಾಗಿ ಪಡೆಯಿರಿ ಎಂದು ಖ್ಯಾತ ಉದ್ಯಮಿ ನಿವೇದನ್ ನೆಂಪೆ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ, ಟೆಕ್‌ಫಾರ್ಜ್ ಸ್ಟುಡೆಂಟ್ಸ್ ಕ್ಲಬ್, ಐಇಇಇ ಸ್ಟೂಡೆಂಟ್ ವಿಭಾಗದ ಸಂಯುಕ್ತಾಶ್ರಯದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರ ಮಟ್ಟದ ʼಫಾಸ್ ಹ್ಯಾಕ್ – 2024ʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾವೀನ್ಯ ಯೋಜನೆಗಳು ಕೆಲವರಿಗೆ ಇಷ್ಟವಾಗದೆ ಇರಬಹುದು, ನಗೆಪಾಟಲಿಗೀಡಾದ ನಾವೀನ್ಯ ಯೋಜನೆಗಳೆ ಮುಂದೊಂದು ದಿನ ಯಶಸ್ಸಿನ ಉನ್ನತ ಸ್ಥಾನದಲ್ಲಿ ಪ್ರಜ್ವಲಿಸಲಿದೆ. ನಿಂದನೆಗಳನ್ನು ಸಮರ್ಥವಾಗಿ ಎದುರಿಸಿ. ಯಾವುದೇ ಯಶಸ್ವಿ ವ್ಯಕ್ತಿಯ ಸಾಧನೆಗಳಿಂದ ಪಡೆದ ಪ್ರೇರಣೆ ಕ್ಷಣ ಮಾತ್ರವಾಗಿದ್ದು, ನಿಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆಯೆ ನಿಮಗೆ ಪ್ರೇರಣೆಯಾಗಲಿ.
ಎಲ್ಲರಿಂದ ಎಲ್ಲವು ಸಾಧ್ಯವಿಲ್ಲ. ಯಾವುದೇ ಜಾತಿ ಧರ್ಮದ ಸೀಮಿತವಿಲ್ಲದೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ. ಆಡಿಕೊಳ್ಳುವವರಿಗಾಗಿ ಬದುಕನ್ನು ಬದಲಾಯಿಸಬೇಡಿ. ಹೊಸತನದ ಪ್ರಯೋಗಗಳ ನಿರಂತರತೆ ಸದಾ ಬದುಕಿನಲ್ಲಿ ಪ್ರಜ್ವಲಿಸುತ್ತಿರಲಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ವಿಶಿಷ್ಟ ವ್ಯಕ್ತಿತ್ವಗಳಿಂದ ಪಡೆದ ಪ್ರೇರಣೆ ಬದುಕಿನಲ್ಲಿ ವೈಶಿಷ್ಟ್ಯ ಪೂರ್ಣ ಬದಲಾವಣೆ ತರಲಿದೆ. ಹ್ಯಾಕಥಾನ್ ಅಂತಹ ವೇದಿಕೆ ನಮ್ಮಲ್ಲಿ ಸೃಜನಶೀಲತೆ, ಸಂಶೋಧನಾರ್ಥಿಗಳೊಂದಿಗೆ ಸಂಪರ್ಕ, ಪ್ರಯೋಗಶೀಲ ಗುಣಗಳನ್ನು ಉತ್ತೇಜಿಸಲಿದೆ. ವೃತ್ತಿಪರ ಕ್ಷೇತ್ರದಲ್ಲಿ ಪ್ರಯೋಗಗಳು ಕಷ್ಟವಿರಬಹುದು, ಅದರೆ ವಿದ್ಯಾರ್ಥಿ ಜೀವನದಲ್ಲಿ ಮಾಡುವ ಪ್ರಯೋಗಗಳಿಗೆ ಯಾವುದೆ ಸೋಲಿನ ಭೀತಿ ಇರುವುದಿಲ್ಲ. ವಿದ್ಯಾರ್ಥಿ ಜೀವನದಂತಹ ಪ್ರಯೋಗಶೀಲ ಮುಕ್ತ ವಾತಾವರಣವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಆವಿಷ್ಕಾರಿ ಪ್ರಯೋಗಗಳ ವಿಚಾರದಲ್ಲಿ ಶಿವಮೊಗ್ಗ ವಿಶಿಷ್ಟ ಸ್ಥಾನ ಪಡೆದಿದೆ. ಕಾರುಗಳಿಗೆ ಬಳಕೆಯಾಗುವ ನಿರ್ದಿಷ್ಟ ಬಿಡಿಭಾಗಗಳು ಉತ್ಫಾದನೆಯಾಗುವುದು ಶಿವಮೊಗ್ಗದ ಫೌಂಡರಿಗಳಿಂದ ಎಂಬುದು ಹೆಮ್ಮೆಯ ಸಂಗತಿ. ಮೊಬೈಲ್ ನಲ್ಲಿ ಅನಗತ್ಯ ಕಾಲಹರಣ ಮಾಡದೆ ಅಮೂಲ್ಯವಾದ ಸಮಯವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರದ ಯೋಜನಾ ವ್ಯವಸ್ಥಾಪಕ ಅರುಣ್ ಕುಮಾರ್.ಕೆ.ಎಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ವಿದ್ಯಾರ್ಥಿ ಸಂಯೋಜಕ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಶಶಾಂಕ್.ಆರ್.ಆರ್ ಉಪಸ್ಥಿತರಿದ್ದರು. ಅಹೋರಾತ್ರಿ ನಡೆಯುವ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಶಿವಮೊಗ್ಗ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ 40 ಕ್ಕು ಹೆಚ್ಚು ತಂಡಗಳು ಭಾಗವಹಿಸಿದ್ದವು.