ಶಿವಮೊಗ್ಗ: ಪ್ರೌಢಿಮೆ ಮತ್ತು ಉತ್ತಮ ಶಿಕ್ಷಣದಿಂದ ಹೆಣ್ಣು ಮಕ್ಕಳು ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ವತಿಯಿಂದ ಕುವೆಂಪು ರಂಗಮಂದಿರಲ್ಲಿ ಏರ್ಪಡಿಸಿದ್ದ ಕಾಲೇಜಿನ 2024-25 ನೇ ಸಾಲಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವಿಭಾಗ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಪೂರ್ಣ ವ್ಯಕ್ತಿತ್ವಕ್ಕಾಗಿ ಸಂಸ್ಕಾರ ಮತ್ತು ಸಾಂಸ್ಕೃತಿಕ ನೆಲೆಗಟ್ಟುಗಳು ಬೇಕಿದೆ. ಅಂತಹ ನೆಲೆಗಟ್ಟುಗಳ ಮೂಲ ಬೇರು ಮನೆ ಕುಟುಂಬದ ಆಧಾರದ ಮೇಲೆ ನಿಂತಿದೆ. ಎಲ್ಲಿ ಒಳ್ಳೆಯ ಸಂಸಾರವಿರುತ್ತದೆ, ಅಲ್ಲಿ ಉತ್ತಮ ಸಂಸ್ಕಾರವಿರುತ್ತದೆ. ಭವಿಷ್ಯದ ಪ್ರಜೆಗಳಾಗಿ ಹೊರಹೊಮ್ಮುವ ನಿಮಗೆ ಸಂಸ್ಕಾರ ಆತ್ಮವಿಶ್ವಾಸ ನೀಡಲಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳು ಉನ್ನತ ವಿದ್ಯಾಭ್ಯಾಸಗಳನ್ನು ಪಡೆದು, ಸಮಾಜದಲ್ಲಿ ಅದ್ಭುತ ಸಾಧನೆಗಳನ್ನು ಮಾಡುತ್ತಿರುವುದು ನಾವೆಲ್ಲರು ಹೆಮ್ಮೆ ಪಡುವ ವಿಚಾರವಾಗಿದೆ. ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಸಾಂಸ್ಕೃತಿಕ, ಲಲಿತ ಕಲೆಗಳು ಸೇರಿದಂತೆ ಸಮಾಜಮುಖಿ ಪಠ್ಯೇತರ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಿ. ಒಂದು ಮೊಟ್ಟೆಯನ್ನು ಒಡೆದಾಗ ಜೀವ ಹಾನಿಯಾಗುತ್ತದೆ, ಅದೇ ತಾನಾಗಿಯೆ ಒಡೆದರೆ ಜೀವಾಂಕುರವಾಗುತ್ತದೆ. ಅಂತಹ ಜೀವಾಂಕುರ ಹೊಂದಿದ ಅಂತಃ ಶಕ್ತಿ ನಿಮ್ಮದಾಗಲಿ.
ಸಾಹಿತ್ಯದ ಅಧ್ಯಯನ ಬದುಕಿನ ಅಂತಃ ಶಕ್ತಿ ಹೆಚ್ಚಿಸಲಿದೆ. ಒಳ್ಳೆಯ ಸ್ನೇಹಿತರನ್ನು ಪಡೆಯಲು ಸದಾ ಪ್ರಯತ್ನಿಸಿ. ಹುಟ್ಟು ತಂದೆ ತಾಯಿಯ ಕೊಡುಗೆ, ಜ್ಞಾನ ಗುರುವಿನ ಕೊಡುಗೆ, ಅದರೆ ಸ್ನೇಹ ಭಗವಂತನ ಕೊಡುಗೆ. ನಮ್ಮ ಪ್ರಭಾವಕ್ಕಿಂತ ಸ್ವಭಾವ ನೋಡಿ ಬರುವ ಜನರೊಂದಿಗೆ ಸ್ನೇಹ ಮಾಡಿ. ಎಂದಿಗೂ ಕೆಟ್ಟವರ ಮೇಲೆ ನಂಬಿಕೆ ಇಡದೆ, ಒಳ್ಳೆಯವರ ಮೇಲೆ ಸಂಶಯ ಪಡದೆ ಮೌಲ್ಯಾಧಾರಿತ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಆಶಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ವೈಜ್ಞಾನಿಕ ಮನೋಭಾವದೊಂದಿಗೆ ಯಾವುದೇ ವಿಷಯಗಳಲ್ಲಿ ವಾಸ್ತವತೆಯ ವಿಮರ್ಶೆಯೊಂದಿಗೆ ಆಚರಣೆಗೆ ತರಲು ಪ್ರಯತ್ನಿಸಿ. ಇಲ್ಲವಾದಲ್ಲಿ ಅದು ಅಂಧ ಶ್ರದ್ಧೆಯಾಗಿ ಉಳಿದುಬಿಡುತ್ತದೆ. ನಮ್ಮ ಸಂಸ್ಕೃತಿ, ಆಚರಣೆ, ಕಲಿಕೆ ಎಲ್ಲವನ್ನು ಮುಕ್ತವಾಗಿ ವಿಮರ್ಶಿಸಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಎಸ್.ಆರ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರಬಾ ಪ್ರೌಢಶಾಲೆಯ ನಿವೃತ್ತ ಉಪ ಪ್ರಾಂಶುಪಾಲ ಕೆ.ಆರ್.ಉಮೇಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶಾಯಿಸ್ತಾ ರಿಯಾಜ್, ಉಪಾಧ್ಯಕ್ಷೆ ಹೇಮಾವತಿ ಜಿ.ಡಿ, ಕಾರ್ಯದರ್ಶಿ ಶಾಲಿನಿ, ಸಹ ಕಾರ್ಯದರ್ಶಿ ಲಕ್ಷ್ಮೀ ಬಾಯಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.