ಜಿಲ್ಲಾಸ್ಪತ್ರೆಯಲ್ಲಿ ಶಿಶು ಆರೈಕೆ ಬಗ್ಗೆ ಸುಸಜ್ಜಿತ ವ್ಯವಸ್ಥೆ ಮತ್ತು ತಜ್ಞ ವೈದ್ಯರುಗಳಿಂದ ಸೇವೆ ಒದಗಿಸಲಾಗುತ್ತಿದೆ. ಇತ್ತೀಚಿನ ಶಿಶು ಮರಣದ ಅಂಕಿ- ಅಂಶಗಳನ್ನು ಪರಿಗಣಿಸಿದಾಗ ಶಿಶು ಮರಣ ತಡೆಗಟ್ಟುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಹಿಂದಿನ ವರ್ಷಗಳಲ್ಲಿ 20-25 ಇದ್ದ ಶಿಶು ಮರಣ ಪ್ರಮಾಣವನ್ನು 6 ರಿಂದ 7 ಕ್ಕೆ ತರಲಾಗಿದೆ. ಇದಕ್ಕೆ ಕಾರಣ ತಜ್ಞ ವೈದ್ಯರು ಮತ್ತು ಎಲ್ಲಾ ಸಿಬ್ಬಂದಿಗಳು ಎಂದು ತಿಳಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿಯ ಎದೆಹಾಲು ಸಂಗ್ರಹಣ ನಿಧಿ ಸ್ಥಾಪಿಸಲಾಗಿದ್ದು, ಇದಕ್ಕೆ ತಾಯಂದಿರೇ ಹಾಲಿನ ದಾನಿಗಳಾಗಿರುತ್ತಾರೆ. ಇಲ್ಲಿಯವರೆಗೆ ಒಟ್ಟು 56 ಲೀಟರ್ ತಾಯಿ ಹಾಲು ಸಂಗ್ರಹಣೆಯಾಗಿದೆ. 38 ಲೀಟರ್‌ನಷ್ಟು ಎದೆಹಾಲನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಸಿದ್ದನಗೌಡ ಪಾಟೀಲ್ ತಿಳಿಸಿದರು.
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತುಜಿಲ್ಲಾ ಪಂಚಾಯತ್, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಬೋಧನ ಜಿಲ್ಲಾ ಆಸ್ಪತ್ರೆ, ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರು ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಮಾತ್ರ ಮಿಲ್ಕ್ ಬ್ಯಾಂಕ್ ವ್ಯವಸ್ಥೆ ಇರುತ್ತದೆ. ಇದು ಕೂಡ ಶಿಶುಮರಣ ತಡೆಗಟ್ಟುವಲ್ಲಿ ಬಹಳ ಪ್ರಮುಖವಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ತಾಯಂದಿರಲ್ಲಿ ಮಗುವಿನ ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪತ್ತಿಯಾಗುತ್ತಿದ್ದರೆ ಅಂತವರು ಎದೆ ಹಾಲನ್ನು ಮಿಲ್ಕ್ ಬ್ಯಾಂಕ್‌ಗೆ ದಾನ ಮಾಡುವಂತೆ ಅವರು ಕರೆ ನೀಡಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಡಾ|| ನಾಗರಾಜ್ ನಾಯ್ಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಇವರು ಪ್ರತಿ ವರ್ಷ ಆಗಸ್ಟ್ 1 ರಿಂದ 7 ರವರೆಗೆ ವಿಶ್ವದಾದ್ಯಂತ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತದೆ. ಎದೆ ಹಾಲಿನ ಮಹತ್ವ ಹಾಗೂ ಹಾಲುಣಿಸುವ ವಿಧಾನ ಮತ್ತು ಶಿಶುವಿಗೆ ನೀಡಬೇಕಾದ ಪೂರಕ ಆಹಾರ ನೀಡುವ ಕ್ರಮದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ತಾಯಂದಿರು ಮಗು ಹುಟ್ಟಿದ ಒಂದು ಗಂಟೆಯೊಳಗೆ ಎದೆ ಹಾಲು ನೀಡಲು ಪ್ರಾರಂಭಿಸಿ ಆರು ತಿಂಗಳವರೆಗೆ ಕೇವಲ ಎದೆ ಹಾಲು ಮಾತ್ರ ನೀಡಬೇಕು. ಬೇರೆ ಯಾವುದೇ ಆಹಾರ ನೀಡಬಾರದು ಎಂದು ತಿಳಿಸಿದರು.
ಮಕ್ಕಳ ತಜ್ಞರಾದ ಡಾ|| ಸುನೀತಾ ಮಾತನಾಡಿ ತಾಯಿ ಹಾಲು ಮಕ್ಕಳ ಬೌದ್ಧಿಕ, ಶಾರೀರಿಕ ಬೆಳವಣಿಗೆಗೆ ಬಹಳ ಮುಖ್ಯವಾಗಿದ್ದು, ಎದೆ ಹಾಲು ಕುಡಿಯುವ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಸದೃಡ ಮತ್ತು ಆರೋಗ್ಯವಂತರಾಗಿರುತ್ತಾರೆ. ತಾಯಿ ಹಾಲು ಕುಡಿಸುವುದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿಸಿ ಎಲ್ಲರಿಗೂ ತಪ್ಪದೇ ಎದೆಹಾಲುಣಿಸುವಂತೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧ್ಯಕ್ಷರಾದ ಡಾ.ತಿಮ್ಮಪ್ಪ ಓ.ಬಿ.ಜಿ ವಿಭಾಗದ ಮುಖ್ಯಸ್ಥರಾದ ಡಾ|| ಲೇಪಾಕ್ಷಿ, ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ||ಆರ್.ಬಿ.ಪಾಟೀಲ್, ಮಿಲ್ಕ್ ಬ್ಯಾಂಕ್ ವಿಭಾಗದ ಡಾ|| ವಂಸತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಡಾ|| ವಿರೂಪಾಕ್ಷಪ್ಪ, ನಿರ್ದೇಶಕರು, ಸಿಮ್ಸ್ ಅಧ್ಯಕ್ಷ ನುಡಿಯನ್ನಾಡಿದರು,