ಗೌರಿ ಮತ್ತು ಗಣೇಶ ಹಬ್ಬಗಳ ಹಿನ್ನೆಲೆಯಲ್ಲಿ ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಗಣಪತಿ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿ ಸದಸ್ಯರ ಸಭೆಯನ್ನು ನಡೆಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.

1) ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು / ಜನಸಮೂಹವು ಒಂದೆಡೆ ಸೇರಿ ವಿಜೃಂಭಣೆಯಿಂದ ಆಚರಣೆಯಲ್ಲಿ ಭಾಗಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಗಣಪತಿ ಹಬ್ಬ ಮತ್ತು ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವುದು ಹೆಮ್ಮೆಯ ವಿಚಾರವಾಗಿರುತ್ತದೆ. ಕಳೆದ ಬಾರಿಯ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ಶಾಂತ ರೀತಿಯಲ್ಲಿ ಮತ್ತು ಯಶಸ್ವಿಯಾಗಿ ನಡೆಯುವಲ್ಲಿ ಪೊಲೀಸ್ ಇಲಾಖೆಗೆ ನೀವು ನೀಡಿದ ಸಹಕಾರಕ್ಕೆ ಧನ್ಯವಾದಗಳು. ಇದೇ ರೀತಿ ಈ ವರ್ಷವೂ ಕೂಡ ಪೊಲೀಸ್ ಇಲಾಖೆಯೊಂದಿಗೆ ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.

2) ಕಾನೂನುನಿನ ಚೌಕಟ್ಟಿನಲ್ಲಿ ನಡೆಸಲಾಗುವ ಆಚರಣೆಗೆ ಪೊಲೀಸ್ ಇಲಾಖೆಯು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ ಹಾಗೂ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಒಂದು ತಿಂಗಳು ಮುಂಚಿತವಾಗಿ ಎಲ್ಲಾ ರೀತಿಯ ತಯಾರಿ ಹಾಗೂ ವ್ಯವಸ್ಥೆ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳು ಕಾರ್ಯ ಸನ್ನದ್ದರಾಗಿರುತ್ತಾರೆ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

3) ಈ ಬಾರಿ ಎಲ್ಲೆಡೆ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಗಣಪತಿ ಮೂರ್ತಿಗಳ ವಿಸರ್ಜನಾ ಸಮಯದಲ್ಲಿ ಅವಗಡಗಳು ಸಂಭವಿಸುವ ಸಾದ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳ ಬೇಕಾದ ಕ್ರಮಗಳು ಮತ್ತು ಆಯಾ ಇಲಾಖೆಗಳ ಜವಾಬ್ದಾರಿಗಳ ಬಗ್ಗೆ ಚರ್ಚಿಸಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ.

4) ಮುಖ್ಯವಾಗಿ ವಿಸರ್ಜನಾ ಮೆರವಣಿಗೆಯಲ್ಲಿ ಮತ್ತು ಬಂಟಿಂಗ್ಸ್ ಹಾಗೂ ಬ್ಯಾನರ್ ಗಳನ್ನು ಕಟ್ಟುವ ವಿಚಾರದಲ್ಲಿ ಸಮಸ್ಯೆಯುಂಟಾಗುವ ಸಾಧ್ಯತೆ ಇದ್ದು, ಆದ್ದರಿಂದ ವಿಸರ್ಜನಾ ಮೆರವಣಿಗೆಯ ಅಲಂಕಾರ ಸಮಿತಿಯು ಪ್ರತಿ ವರ್ಷದಂತೆ ಈ ಬಾರಿಯು ಕೂಡ ಪೊಲೀಸ್ ಇಲಾಖೆಗೆ ಸಹಕಾರ ನೀಡಿ, ನಿಮ್ಮ ಮತ್ತು ಇತರರ ಭಾವನೆಗಳಿಗೆ ದಕ್ಕೆಯುಂಟಾಗದಂತೆ ಅಲಂಕಾರ ಮಾಡಿದರೆ ಸೂಕ್ತವಿರುತ್ತದೆ.

5) ಎಲ್ಲರ ಸುರಕ್ಷತೆಯ ದೃಷ್ಠಿಯಿಂದ ಸಿಸಿ ಟಿವಿ ಕ್ಯಾಮೆರಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿ, ಪ್ರಮುಖವಾಗಿ ಗಣಪತಿ ಮೂರ್ತಿ ಪ್ರತಿಷ್ಠಾಪನಾ ಸ್ಥಳ (ಗಣಪತಿ ಪೆಂಡಾಲ್), ಸೂಕ್ಷ್ಮ ಸ್ಥಳಗಳು ಹಾಗೂ ಮೆರವಣಿಗೆ ಮಾರ್ಗಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಿಸುವದರಿಂದ ಯಾವುದೇ ಸಮಸ್ಯೆಗಳು ಉಂಟಾಗದಂತೆ ಮೂಲದಲ್ಲಿಯೇ ತಡೆಯಲು ಸಾಧ್ಯವಿರುತ್ತದೆ. ಇದರಿಂದ ವಿಸರ್ಜನಾ ಮೆರವಣಿಗೆ ಬಂದು ಸೇರುವ ಜನರು, ಜನಸಾಂದ್ರತೆ ಹಾಗೂ ಅವರ ಚಟುವಟಿಕೆಗಳ ಮೇಲೂ ಸಹಾ ಸೂಕ್ಮವಾಗಿ ನಿಗಾವಹಿಸಲು ಸುಲಭವಾಗುತ್ತದೆ.

6) ಗಣಪತಿ ಹಬ್ಬದ ಬಂದೋಬಸ್ತ್ ನಲ್ಲಿ ವಿಸರ್ಜನಾ ಮೆರವಣಿಗೆಯ ದಿನ ಮತ್ತು ಅದರ ಹಿಂದಿನ ಮತ್ತು ಮುಂದಿನ 02 ದಿನಗಳು ತುಂಬಾ ಪ್ರಮುಖವಾದ ಘಟ್ಟವಾಗಿರುತ್ತದೆ. ಆದ್ದರಿಂದ ಈ ದಿನಗಳಲ್ಲಿ ಯಾವುದೇ ಸಣ್ಣ ಪುಟ್ಟ ಘಟನೆಗಳು ಜರುಗಿದರೂ ಕೂಡ ನಿಮ್ಮ ಮಟ್ಟದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದಕ್ಕಿಂತ ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ. ಸಮಸ್ಯೆಗಳನ್ನು ತಳಮಟ್ಟದಿಂದ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಶ್ರಮಿಸೋಣ.

7) ಪೊಲೀಸ್ ಇಲಾಖೆಯೊಂದಿಗೆ ಕರ್ತವ್ಯ ನಿರ್ವಹಿಸಲು ಇಚ್ಛೆಯುಳ್ಳ ಸಾರ್ವಜನಿಕರು ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದ್ದು, ಹಬ್ಬದ ಆಚರಣೆಯ ಸಂದರ್ಭ, ಪ್ರತಿಷ್ಠಾಪನಾ ದಿನಗಳಲ್ಲಿ ಮತ್ತು ವಿಸರ್ಜನಾ ಮೆರವಣಿಗೆಯಲ್ಲಿಯೂ ಕೂಡ ಅವರ ಸಹಕಾರವನ್ನು ಪಡೆಯಲಾಗುತ್ತದೆ. ಹಬ್ಬ ಆಚರಣೆ ಮತ್ತು ವಿಸರ್ಜನೆ ಬಂದೋಬಸ್ತ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂಧಿಗಳನ್ನು ಸಹಾ ನಿಯೋಜನೆ ಮಾಡಲಿದ್ದು, ಯಾವುದೇ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆಯು ವ್ಯವಸ್ಥೆ ಮಾಡಲಿದೆ.

ಹಬ್ಬದ ಆಚರಣೆಯು ಎಷ್ಟು ವಿಜೃಂಭಣೆಯಿಂದ ಕೂಡಿರುತ್ತದೆಯೋ ಅಷ್ಟೇ ಸೊಗಸಾಗಿರುತ್ತದೆ. ಪೊಲೀಸ್ ಇಲಾಖೆಯು ಕೂಡ ನಿಮ್ಮೊಂದಿಗೆ ಸಮನಾಗಿ ನಿಂತು ಹಬ್ಬದ ಆಚರಣೆಯಲ್ಲಿ ಭಾಗವಹಿಸುತ್ತದೆ. ಯಾವುದೆ ಭಿನ್ನಾಭಿಪ್ರಾಯ ಹಾಗೂ ಸಮಸ್ಯೆಗಳಿದ್ದಲ್ಲಿ, ಅವುಗಳನ್ನು ಬಗೆ ಹರಿಸಿಕೊಂಡು ಎಲ್ಲರೂ ಸೇರಿ ಹಬ್ಬವನ್ನು ವಿಜೃಂಭಣೆಯಿಂದ ಹಬ್ಬ ಆಚರಿಸೋಣ.

ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಬಾಬು ಆಂಜನಪ್ಪ, ಡಿವೈಎಸ್.ಪಿ, ಶಿವಮೊಗ್ಗ ಎ ಉಪ ವಿಭಾಗ, ಶ್ರೀ ರವಿ ಪಾಟೀಲ್ ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ, ಶ್ರೀ ದೀಪಕ್ ಪಿಐ ಕೋಟೆ ಪೊಲೀಸ್ ಠಾಣೆ ಪ್ರಭಾರ ಮತ್ತು ಗಣಪತಿ ಪ್ರತಿಷ್ಠಾಪನಾ ಸಮಿತಿ, ಅಲಂಕಾರ ಸಮಿತಿಯ ಸದಸ್ಯರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ