ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ
ಹಿನ್ನೆಲೆಯಲ್ಲಿ ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲಿನ ದಾನಾ ಫ್ಯಾಲೇಸ್ ಸಭಾ ಭವನದಲ್ಲಿ, ಗಣೇಶ ಪ್ರತಿಷ್ಠಾಪನಾ ಸಮಿತಿ ಮತ್ತು ಈದ್ ಮಿಲಾದ್ ಸಮಿತಿ ಸದಸ್ಯರ ಸಭೆ ನಡೆಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
1) ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಎರಡೂ ಧರ್ಮಗಳಿಗೆ ಪವಿತ್ರವಾದ ಹಬ್ಬಗಳಾಗಿರುತ್ತವೆ. ಈ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಕಾನೂನಿನ ಚೌಕಟ್ಟಿನ ಒಳಗೆ ಪೊಲೀಸ್ ಇಲಾಖೆಯು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ.
2) ಹಬ್ಬವನ್ನು ಪೈಪೋಟಿಯ ರೀತಿ ಆಚರಿಸದೇ ಹಬ್ಬಗಳ ಮಹತ್ವ ಮತ್ತು ಹಿನ್ನೆಲೆಯನ್ನು ಅರಿತು ಹಬ್ಬಗಳನ್ನು ಆಚರಿಸಿದಾಗ ಮಾತ್ರ ಯಾವುದೇ ಸಮಸ್ಯೆಗಳಿಲ್ಲದೇ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ. ಬೇರೆಡೆಗಳಲ್ಲಿ ಆದಂತಹ ಘಟನೆಗಳು ಈ ಪ್ರದೇಶದಲ್ಲಿ ಸಂಭವಿಸುವುದು ಬೇಡ ಎನ್ನುವ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿಯ ಸಭೆಗಳನ್ನು ಆಯೋಜಿಸಲಾಗುತ್ತಿದೆ.
3) ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗ ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಮತ್ತು ಇದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಎಲ್ಲರೂ ಶಾಂತ ರೀತಿಯಲ್ಲಿ ಮತ್ತು ಸಹಬಾಳ್ವೆಯಿಂದ ಹಬ್ಬ ಆಚರಣೆ ಮಾಡೋಣ.
4) ಹಬ್ಬದ ಆಚರಣೆಯ ಸಂದರ್ಭದಲ್ಲಿ ಡಿಜಿ ನಿಷೇಧಿಸಲಾಗಿದ್ದು, ಧ್ವನಿ ವರ್ಧಕಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು, ಘನ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ವಯ ನಿಗದೀಪಡಿಸಿದ ಸಮಯ ಮತ್ತು ನಿಗದಿತ ಶಬ್ದ ಮಿತಿಯಲ್ಲಿಯೇ ಧ್ವನಿ ವರ್ಧಕಗಳನ್ನು ಬಳಸುವುದು.
5) ಹಬ್ಬಗಳ ಹಿನ್ನೆಲೆಯಲ್ಲಿ ಅಳವಡಿಸಲಾಗುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳಲ್ಲಿ ಯಾವುದೇ ಕಾರಣಕ್ಕೂ ಇತರ ಭಾವನೆಗಳಿಗೆ ದಕ್ಕೆಯಾಗುವಂತಹ ಮತ್ತು ಆಕ್ಷೇಪಾರ್ಹ ಹೇಳಿಕೆ / ಚಿತ್ರಗಳು ಇರಬಾರದು. ಈ ಬಗ್ಗೆ ಈಗಾಗಲೇ ಫ್ಲೆಕ್ಸ್ ಬ್ಯಾನರ್ಸ್ ಪ್ರಿಂಟರ್ಸ್ ರವರಿಗೂ ಸಹಾ ಸೂಚನೆ ನೀಡಲಾಗಿರುತ್ತದೆ. ಒಂದು ವೇಳೆ ಯಾವುದೇ ಆಕ್ಷೇಪಾರ್ಹ / ಇತರರ ಭಾವನೆಗಳಿಗೆ ನೋವುಂಟಾಗುವಂತಹ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಿದರೆ ಅಥವಾ ಪ್ರಿಂಟ್ ಮಾಡಿ ನೀಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
6) ಯಾರೋ ಕೆಲವು ಜನ ಮಾಡುವ ಕಿಡಿಗೇಡಿತನದಿಂದ ಇತರರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪೋಷಕರು ಮತ್ತು ಹಿರಿಯರು ತಮ್ಮ ಮಟ್ಟದಲ್ಲಿ ಮೊದಲು ಬುದ್ದಿ ಮಾತುಗಳನ್ನು ಹೇಳಿ, ಒಂದು ವೇಳೆ ತಿದ್ದುಕೊಳ್ಳುವುದು ಕಾಣದೇ ಇದ್ದಲ್ಲಿ ಅಂತಹವರ ಬಗ್ಗೆ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ತಿಳಿಸಿ, ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
7) ಯುವ ಪೀಳಿಗೆಯು ಸಾಮಾಜಿಕ ಜಾಲತಾಣವನ್ನು ಹೆಚ್ಚಿನದಾಗಿ ಬಳಸುತ್ತಿದ್ದು, ಎಲ್ಲಿಯೋ ನಡೆದಂತಹ ಘಟನೆಗಳನ್ನು ಇಲ್ಲಿಯೇ ನಡೆದಿದೆ ಎಂಬ ರೀತಿಯಲ್ಲಿ ಬಿಂಬಿಸಿ ಪೋಸ್ಟ್ ಮಾಡುವುದು ಹಾಗೂ ಆಕ್ಷೇಪಾರ್ಹ ಮತ್ತು ಪ್ರಚೋದನಾಕಾರಿ ಫೋಟೋ ಮತ್ತು ಮಾಹಿತಿಯನ್ನು ಪೋಸ್ಟ್ ಮಾಡುವುದು, ಫಾರ್ವರ್ಡ್ ಮಾಡುವುದು, ಶೇರ್ ಮಾಡುವುದು ಟ್ಯಾಗ್ ಮಾಡುವುದು ಕಾನೂನು ರೀತ್ಯ ಅಪರಾಧವಾಗಿರುತ್ತದೆ. ಆದ್ದರಿಂದ ಈ ರೀತಿ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.
ಹಬ್ಬ ಆಚರಣೆಯ ಸಂಬಂಧ ಪೊಲೀಸ್ ಇಲಾಖೆ ಮತ್ತು ಇತರೆ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಎಲ್ಲರೂ ಸೇರಿ ಯಾವುದೇ ತೊಡಕಿಲ್ಲದೆ, ವಿಜೃಂಭಣೆಯಿಂದ ಹಬ್ಬ ಆಚರಿಸೋಣ. ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಬಾಬು ಆಂಜನಪ್ಪ,
ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಎ ಉಪ ವಿಭಾಗ, ಶ್ರೀ ಮಂಜುನಾಥ್ ಬಿ ಪಿಐ ತುಂಗಾನಗರ ಪೊಲೀಸ್ ಠಾಣೆ, ಗಣಪತಿ ಪ್ರತಿಷ್ಠಾಪನಾ ಸಮಿತಿ ಹಾಗೂ ಈದ್ ಮಿಲಾದ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.