ಪೌರ ಕಾರ್ಮಿಕರ ದಿನಾಚರಣೆ – 2024
ಸಮಾಜ ಸ್ವಚ್ಚಗೊಳಿಸುವ ಪೌರಕಾರ್ಮಿಕ ನಾರಾಯಣ ಸ್ವರೂಪಿ : ಎಸ್.ಎನ್.ಚನ್ನಬಸಪ್ಪ…
ಸಮಾಜವನ್ನು ಸ್ವಚ್ಚಗೊಳಿಸುವ ಕಾಯಕ ಮಾಡುತ್ತಿರುವ ಪೌರಕಾರ್ಮಿಕರನ್ನು ನಾರಾಯಣ ಸ್ವರೂಪಿ ಎನ್ನಬಹುದು. ಪೌರ ಕಾರ್ಮಿಕರ ಯೋಗಕ್ಷೇಮ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ನುಡಿದರು.
ಮಹಾನಗರಪಾಲಿಕೆ, ಶಿವಮೊಗ್ಗ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ -2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಸುಂದರವಾಗಿ, ಚೆನ್ನಾಗಿರಬೇಕೆಂದರೆ ಸ್ವಚ್ಚತೆ ಇರಬೇಕು. ಇಂತಹ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರು ನಾರಾಯಣಿ ಸ್ವರೂಪಿಯಾಗಿದ್ದು ಇವರ ಕಾರ್ಯ ಪವಿತ್ರವಾದದ್ದು ಮತ್ತು ಮೆಚ್ಚುವಂತದ್ದು. ಪೌರ ಕಾರ್ಮಿಕರ ಬಗ್ಗೆ ಪಾಲಿಕೆ ಯಾವಾಗಲೂ ಕಾಳಜಿ ಹೊಂದಿದೆ.
ಮಹಾತ್ಮಾ ಗಾಂಧೀಜಿಯವರು ಕಾರ್ಮಿಕರಲ್ಲಿ ಹರಿಯನ್ನು ಕಾಣುತ್ತಿದ್ದೇನೆ ಎಂದಿದ್ದರು. ಪೌರ ಕಾರ್ಮಿಕರಿಲ್ಲದಿದ್ದರೆ ಸಮಾಜದ ಆರೋಗ್ಯ ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಸ್ವಾಸ್ಥö್ಯ ಕಾಯುವ ಪೌರ ಕಾರ್ಮಿಕರ ಕುಟುಂಬಗಳು ಚೆನ್ನಾಗಿರಬೇಕು. ಆರೋಗ್ಯದಿಂದ ಕೂಡಿರಬೇಕು. ಇತ್ತೀಚೆಗೆ ಅನೇಕ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಉತ್ತಮ ಹುದ್ದೆಗಳನ್ನು ಮಾಡತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವಿದ್ಯಾವಂತರಾಗಬೇಕು.
ಒಂದು ಹಂತದಲ್ಲಿ ಪೌರ ಕಾರ್ಮಿಕರು ಸಮಾಜದ ಉಳ್ಳವರ ಮನಸ್ಸನ್ನು ಸಹ ಬದಲಾಯಿಸುವ ಕೆಲಸ ಮಾಡಿದ್ದಾರೆ. ಬರ, ನೆರೆ ಪರಿಸ್ಥಿತಿಯಲ್ಲಿ ತಮ್ಮ ಕಲ್ಯಾಣ ನಿಧಿಯ ಹಣ ನೀಡಿದ್ದಾರೆ. ಕೊರೊನಾ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಅವರು ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಗರದ ಸ್ವಚ್ಚತೆ ಹಾಗೂ ನಮ್ಮೆಲ್ಲರ ಆರೋಗ್ಯ ಕಾಪಾಡುವ ಕೆಲಸವನ್ನು ಸ್ವಾಭಿಮಾನದಿಂದ ಅವರು ಮಾಡುತ್ತಿದ್ದಾರೆ. ಇಂತಹ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ನಾವು ಶಾಸಕರು ಪ್ರಯತ್ನಿಸುತ್ತೇವೆ. ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತೇವೆ. ಸಮಸ್ಯೆಗಳಿಗೆ ಸ್ಪಂದುಸುತ್ತೇವೆ ಎಂದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಸಮಾಜದ ರೋಗವನ್ನು ತಡೆಯುವ ಮತ್ತು ಖಾಯಿಲೆ ಬಾರದಂತೆ ಮಾಡುವ ಶಕ್ತಿ ಪೌರ ಕಾರ್ಮಿಕರಿಗಿದೆ. ಇಂತಹ ಪೌರ ಕಾರ್ಮಿಕರಿಗೆ ಒಳ್ಳೆಯ ಆರೋಗ್ಯ, ಆಯುಷ್ಯವನ್ನು ಭಗವಂತ ನೀಡಲಿ. ಅವರು ಹೃದಯ ಶ್ರೀಮಂತಿಕೆಯಿAದ ಸ್ವಚ್ಚತಾ ಕಾರ್ಯ ಮಾಡುತ್ತಿದ್ದು ನಿಮ್ಮ ಜೀವನವೂ ನೆಮ್ಮದಿಯಿಂದ ಕೂಡಿರಬೇಕು ಎಂದರು.
ರಾಜ್ಯದ ಪಾಲಿಕೆಗಳಲ್ಲಿ ಕೇವಲ 10577 ಖಾಯಂ ನೌಕರರು ಇದ್ದು ಉಳಿದಂತೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಸದನದಲ್ಲಿ ನಿಮ್ಮ ಪರ ಕೆಲಸ ಮಾಡುತ್ತೀವಿ ಎಂದ ಅವರು ಪೌರ ಕಾರ್ಮಿಕರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ಪ್ರತಿ 5 ವರ್ಷಗಳಿಗೊಮ್ಮೆ ಟಿಟಿ ಲಸಿಕೆ, ಟೈಫಾಯಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ನೀವು ಬಗ್ಗಿಕೊಂಡೇ ಹೆಚ್ಚು ಕೆಲಸ ಮಾಡುವುದರಿಂದ ಬೆನ್ನಿನ ಮೂಳೆಗೆ ಅನುಕೂಲವಾಗುವಂತಹ ವ್ಯಾಯಾಮ ಮಾಡಬೇಕು. ಅತ್ಯಂತ ಅಚ್ಚುಕಟ್ಟಾಗಿ, ಮನಸ್ಫೂರ್ತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದೀರೆಂದು ಶ್ಲಾಘಿಸಿದರು.
ಮಹಾನಗಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರ ಕಾರ್ಮಿಕರ ಹೆಣ್ಣು ಮಕ್ಕಳ ಮದುವೆಗಾಗಿ ಪಾಲಿಕೆಯ ತಾಳಿ ಭಾಗ್ಯ ಯೋಜನೆಯಡಿ ರೂ. 50 ಸಾವಿರ ಹಾಗೂ ರಮಾಬಾಯಿ ಅಂಬೇಡ್ಕರ್ ಯೋಜನೆಯಡಿ ರೂ. 10 ಸಾವಿರ ಸೌಲಭ್ಯವನ್ನು ನೀಡುತ್ತಿದ್ದು ಇದು ದೇಶದಲ್ಲೇ ಪ್ರಥಮ ಎನ್ನಬಹುದು. ಕಲ್ಯಾಣ ಕಾರ್ಯಕ್ರಮದಡಿ ಪೌರ ಕಾರ್ಮಿಕರಿಗೆ 168 ಮನೆಗಳು ಮತ್ತು ರೂ. 4 ಕೋಟಿ ವೆಚ್ಚದಲ್ಲಿ ಚಿಕ್ಕಲ್ ನಲ್ಲಿ ಸಮುದಾಯ ಭವನ ನಿರ್ಮಾಣ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಪೌರ ಕಾರ್ಮಿಕರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಿ, ಅವರಿಗೆ ಸಿಗಬೇಕಾದ ವೇತನ ಇತರೆ ಸೌಲಭ್ಯ ನೀಡಬೇಕು.
ಪ್ರಸ್ತುತ 1080 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, 530 ನೌಕರರ ಕೊರತೆ ಇದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಪಾಲಿಕೆಯು ಸಮುದಾಯ ಭವನ ನಿರ್ಮಾಣಕ್ಕೆ ಬಾಕಿ ಇರುವ ಅನುದಾನಕ್ಕೆ ಕ್ರಮ ವಹಿಸಬೇಕು. 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಖಾಯಂ ಗೊಳಿಸಬೇಕು, ತಾಳಿ ಭಾಗ್ಯ ಯೋಜನೆಯನ್ನು ಹೊರಗುತ್ತಿಗೆ ನೌಕರರಾದ ಲೋಡರ್ಸ್, ಕ್ಲೀನರ್ಸ್, ಕಂಪ್ಯೂಟರ್ ಆಪರೇಟರ್ ಇತರೆ ನೌಕರರಿಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.
ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮಾತನಾಡಿ, ಸಾರ್ವಜನಿಕರು ಕಸ ವಿಂಗಡಣೆ ಮಾಡಿ ಕೊಡಬೇಕು. ಈಗ ನಮ್ಮ ಪೌರ ಕಾರ್ಮಿಕರೇ ವಿಂಗಡಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲ ಜಾಗವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು, ಪೌರ ಕಾರ್ಮಿಕರು ಬಂದಾಗ ಅವರಿಗೆ ಸಹಕರಿಸಬೇಕು. ಪೌರ ಕಾರ್ಮಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಪರಿಕರಗಳನ್ನು ಬಳಸಿಕೊಂಡು ಕೆಲಸ ಮಾಡಬೇಕು. ಕಾರ್ಮಿಕರಿಗೆ ಪಾಲಿಕೆ ವತಿಯಿಂದ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ. ವಿಮೆ, ಗೃಹಭಾಗ್ಯ ಯೋಜನೆ, ತಾಳಿಭಾಗ್ಯ, ಪೌರ ಕಾರ್ಮಿಕರ ಭವನದಂತಹ ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಜನ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಹಾಗೂ ಶಾಸಕರು ಮತ್ತು ಪಾಲಿಕೆ ಆಯುಕ್ತರು ಪೌರ ಕಾರ್ಮಿಕರ ಸೇವೆ ಸ್ಮರಿಸಿ ಮಂಡಿಯೂರಿ ಪೌರ ಕಾರ್ಮಿಕರಿಗೆ ನಮಸ್ಕರಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಉಪಾಯುಕ್ತ ಲಿಂಗೇಗೌಡ, ಕರಿಭೀಮಣ್ಣನವರ್, ಇತರೆ ಅಧಿಕಾರಿಗಳು, ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.