ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಣಯಗಳನ್ನು ಕೈಗೊಂಡು ಅನುಷ್ಠಾನಗೊಳಿಸಿದೆ. ಈ ಕಾರ್ಯಕ್ರಮದ ಭಾಗವಾಗಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ 01 ರಿಂದ 10ನೇ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಾರದ 06 dinagala kaala ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಮೊಟ್ಟೆಯನ್ನು ವಿತರಿಸಲಾಗುತ್ತಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.
ಅವರು ಅನವಟ್ಟಿಯ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದ ವ್ಯವಸ್ಥಿತ ಅನುಷ್ಠಾನಕ್ಕಾಗಿ ವಿಪ್ರೊ ಮುಖ್ಯಸ್ಥ ಹಾಗೂ ಪ್ರತಿಸ್ಥಿತ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ್ನೊಂದಿಗೆ ಮೂರು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು,1591ರೂ. ಗಳ ಆರ್ಥಿಕ ನೆರವನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು ಎಸ್ ಎಸ್ ಎಲ್ ಸಿ ಯಲ್ಲಿ ಅನುತ್ತೀರ್ಣರಾಗಿ, ಕಲಿಕೆಯಿಂದ ಹಿಂದುಳಿಯುತ್ತಿದ್ದ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಮೂರು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಟ್ಟಿದ್ದು ಇದರಿಂದಾಗಿ 63 ಸಾವಿರ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಹಾಗೂ 82,000 ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶಿಕ್ಷಣ ಪಡೆದು ತಮ್ಮ ಶೈಕ್ಷಣಿಕ ಚಟುವಟಿಕೆಯನ್ನು ಮುಂದುವರೆಸಿದ್ದಾರೆ ಎಂಬ ವಿಷಯವನ್ನು ತಿಳಿಸಲು ಹರ್ಷವೆನಿಸಿದೆ ಎಂದರು.
ರಾಜ್ಯದ ಯಾವುದೇ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತರಾಗದಂತೆ ಹಾಗೂ ಕಲಿಕೆಯಿಂದ ಹಿಂದೆ ಸರಿಯದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ವಿಶೇಷ ಗಮನಹರಿಸುವಂತೆ ಮನವಿ ಮಾಡಿದ ಅವರು ಸಿ ಎಸ್ ಆರ್ ನಿಧಿಯನ್ನು ಬಳಸಿಕೊಂಡು ಶಾಲಾ ವಿದ್ಯಾರ್ಥಿಗಳ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಯಲ್ಲಿ 625 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿನಿ ಕು. ಅಂಕಿತಾ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಎಂಬುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿದಿಗಳು ಉಪಸ್ಥಿತರಿದ್ದರು.