ಜೀವನದಲ್ಲಿ ಗುರಿ ಸಾಧಿಸಲು ಕಾನೂನಾತ್ಮಕವಾಗಿ ಸರಿದಾರಿಯಲ್ಲಿ ಸಾಗಬೇಕು. ಆಗ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯ. ಇದಕ್ಕಾಗಿಯೇ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನವದೆಹಲಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಮೂಲಕ “ಕ್ರಿಯೆಯ ಮೂಲಕ ಸಮಾಧಾನ” ಎಂಬ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ತಿಳಿಸಿದರು.


ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನವದೆಹಲಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಶಿವಮೊಗ್ಗ, ಮಹಾನಗರಪಾಲಿಕೆ ಶಿವಮೊಗ್ಗ, ಜಿಲ್ಲಾ ಸ್ವಯಂ ಸೇವಾಸಂಸ್ಥೆಗಳ ಒಕ್ಕೂಟ ಹಾಗೂ ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್, ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗದ ಮಹಾತ್ಮಗಾಂಧೀ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ನ ಸಭಾಂಗಣದಲ್ಲಿ ಅ.03 ರಂದು “ಕ್ರಿಯೆಯ ಮೂಲಕ ಸಮಾಧಾನ” (ವಿಧಾನ್ಸೇ-ಸಮಾಧಾನ) ಎಂಬ ಶೀರ್ಷಿಕೆ ಅಡಿ ಮಹಿಳಾ ಸಬಲೀಕರಣ ಕುರಿತು ಏರ್ಪಡಿಸಲಾಗಿದ್ದ ಕಾನೂನು ಜಾಗೃತಿ ಕಾರ್ಯಕ್ರಮ ಹಾಗೂ ಸರ್ಕಾರಗಳ ಮಹಿಳಾ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡುವ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.


ಮಹಿಳೆಯರಿಗೆ ಸಂಬAಧಿಸಿದAತೆ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ಸಹ ಇಂದಿಗೂ ಸಹ ಅನೇಕ ಮಹಿಳೆಯರು ತಮಗಾಗಿಯೇ ಇರುವ ಕಾನೂನುಗಳ ಬಗ್ಗೆ ಸರಿಯಾದ ಮಾಹಿತಿ ಪಡೆದಿಲ್ಲ ಆದ್ದರಿಂದ ಮಹಿಳೆಯರಿಗಾಗಿ ಇರುವ ಕಾನೂನುಗಳು ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಹಿಳೆಯರು ಆಸಕ್ತಿಯಿಂದ ಈ ಕಾರ್ಯಗಾರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿಯವರು ಮಾತನಾಡಿ, ಶಿವಮೊಗ್ಗ ನಗರದಲ್ಲಿ ದಿನೇದಿನೇ ಹೊಸ ಹೊಸ ಬಡಾವಣೆಗಳು ಬೆಳೆಯುತ್ತಿದ್ದು ಜೊತೆಗೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇವುಗಳನ್ನು ತಡೆಗಟ್ಟಲು ನಗರದ ಎಲ್ಲಾ ಬಡಾವಣೆಗಳಲ್ಲಿ ಮಹಾನಗರಪಾಲಿಕೆ ವತಿಯಿಂದ ಸಿಸಿಟಿವಿ ಅಳವಡಿಸುವ ಅಗತ್ಯವಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಜಿಲ್ಲಾ ವಾರ್ತಾಧಿಕಾರಿಗಳು ಮತ್ತು ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸದಸ್ಯರಾದ ಬಿ. ಎಸ್. ತಿನ್ನೋಲಿ ರವರು ಮಾತನಾಡಿ ಕಾನೂನು ಎಂಬ ಪದದ ಅರ್ಥ “ಸಾಮಾನ್ಯ ತಿಳುವಳಿಕೆ” ಎಂಬುದಾಗಿದ್ದು, ಪ್ರತಿಯೊಬ್ಬ ಮನುಷ್ಯರು ನೆಲದ ಕಾನೂನುಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಿದಾಗ ಪ್ರಜ್ಞಾವಂತ ನಾಗರೀಕರಾಗಿ ಬಾಳಲು ಸಾಧ್ಯ. ಈ ದಿಶೆಯಲ್ಲಿ ಮಹಿಳೆಯರು ಸಹ ಕಾನೂನಿನ ಸಾಮಾನ್ಯ ತಿಳುವಳಿಕೆ ಹೊಂದುವುದು ಅತ್ಯಗತ್ಯವಾಗಿದೆ ಎಂದರು.


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಎಸ್. ಸಂತೋಷ್ ಮಾತನಾಡಿ, ನಮ್ಮ ಸಮಾಜದಲ್ಲಿ ಮೌಲ್ಯಗಳ ಕೊರತೆ ಇದ್ದು ಸಾಮಾಜಿಕ ಪ್ರಜ್ಞೆ ಕಡಿಮೆಯಾಗುತ್ತಿರುವ ಕಾರಣ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ದೈಹಿಕ ದೌರ್ಜನ್ಯಗಳು ನಡೆಯುತ್ತಿದ್ದು ಇವುಗಳನ್ನು ತಡೆಗಟ್ಟಲು ಮನೆಯೊಳಗಿರುವ ಮಹಿಳೆ ಕಾನೂನು ತಿಳುವಳಿಕೆ ಹೊಂದುವ ಜೊತೆಗೆ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿದರೆ ಮಕ್ಕಳು ಕಾನೂನು ಪರಿಪಾಲನೆ ಮಾಡಿ ಎಲ್ಲರ ಬಾಳು ಹಸನಾಗಲು ಸಾಧ್ಯ ಎಂದು ತಿಳಿಸಿದರು.
ಮಹಾನಗರಪಾಲಿಕೆಯ ಆಯುಕ್ತರಾದ ಡಾ. ಕವಿತಾಯೋಗಪ್ಪನವರ್ ಮಾತನಾಡಿ ಮಹಿಳೆ ಅಬಲೆಯಲ್ಲ ಸಬಲೆ. ನಮ್ಮ ಮನಸ್ಸಿನಲ್ಲಿ ನಾವೇ ಕೀಳರಿಮೆಯ ಬೇಲಿ ಹಾಕಿಕೊಳ್ಳದೆ, ಇರುವ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕೆಂದು ಕರೆ ನೀಡಿದರು. ಮಹಿಳೆಯರನ್ನು ಕೀಳಾಗಿ ನೋಡುವ ವ್ಯವಸ್ಥೆ ನಮ್ಮಲ್ಲಿದ್ದರೂ ಅದನ್ನು ಮೆಟ್ಟಿ ನಿಂತು ಛಲದಿಂದ ಅಭಿವೃದ್ಧಿ ಸಾಧಿಸಬೇಕೆಂದು ತಿಳಿಸಿದ ಅವರು ಹೆಣ್ಣು ಮಗು ಶಿಕ್ಷಣ, ಕೌಶಲ್ಯ ಪಡೆದು ಸಾಧನೆ ಮಾಡಿ ತೋರಿಸಿದಾಗ ಸಬಲತೆ ಪಡೆಯುವ ಜೊತೆಗೆ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಗೌರವ ಸ್ಥಾನ ಮಾನ ಹೊಂದಲು ಸಾಧ್ಯ ಎಂದರು.


ಕಾರ್ಯಕ್ರಮದಲ್ಲಿ “ವಿಧಾನ್ಸೇ ಸಮಾಧಾನಾ” ಕುರಿತು ಹಾಗೂ ಮಹಿಳಾ ಸಬಲೀಕರಣ ಕುರಿತು ಆಡಿಯೋ ವಿಡೀಯೋ ಪ್ರದರ್ಶನ ನೆಡೆಯಿತು. ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಿಂದ ಬಂದಿದ್ದ ಮಹಿಳೆಯರು ಕಾರ್ಯಗಾರದಲ್ಲಿ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ನ ನಿರ್ದೇಶಕ ಕೆ.ಸಿ. ಬಸವರಾಜ್ ಮಹಿಳೆಯರು ಶಿಕ್ಷಣ, ಸಾಕ್ಷರತೆ ಹೊಂದುವ ಜೊತೆಗೆ ಕಾನೂನಿನ ಜ್ಞಾನವನ್ನು ಪಡೆದು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ಪ್ರಗತಿ ಹಾಗೂ ಸಾಮರಸ್ಯ ಸಾಧಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಹೆಚ್. ಪ್ರಶಾಂತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಶಶಿರೇಖಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಮಹಾನಗರ ಪಾಲಿಕೆ ಅಧಿಕಾರಿ ಅನುಪಮರವರು ಪ್ರಾರ್ಥಿಸಿದರು. ಫೆವೋಸ್ ಕಾರ್ಯದರ್ಶಿ ನಟರಾಜ್ ರವರು ವಂದಿಸಿದರು. ಮಹಾತ್ಮ ಗಾಂಧೀ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಉಷಾರಾವ್ ಕಾರ್ಯಕ್ರಮ ನಿರೂಪಣೆ ನಡೆಸಿದರು.

ವರದಿ ಪ್ರಜಾ ಶಕ್ತಿ