ವಿದ್ಯರ್ಥಿಗಳು ಸೇರಿದಂತೆ ನಾವೆಲ್ಲ ದಿನನಿತ್ಯದ ಜೀವನಕ್ಕೆ ಅಗತ್ಯವಾದ ಕಾನೂನಿನ ಜ್ಞಾನ ಹೊಂದುವುದು ಅಗತ್ಯವಾಗಿದೆ. ಇದನ್ನು ವಿದ್ಯಾರ್ಥಿಗಳು ಇಂದಿನಿಂದಲೇ ರೂಢಿಸಿಕೊಳ್ಳುವುದು ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಿವಿಆರ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ, ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ನಗರದ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು ಇಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನವೆಂಬರ್ 9 ರಂದು ದೇಶಾದ್ಯಂತ ಕಾನೂನು ಸೇವಾ ದಿನಾಚರಣೆ ಆಚರಿಸಲಾಗುತ್ತದೆ. ಈ ಕಾರ್ಯ ಕ್ರಮದ ಮೂಲಕ ಜನರಿಗೆ ಕಾನೂನಿನ ಅರಿವು ಮೂಡಿಸುವುದು, ಯಾರಿಗೆ ಕಾನೂನಿನ ಸೇವೆ ಅಗತ್ಯ ಇದೆ, ಯಾರು ಅಸಮರ್ಥರು ಅವರಿಗೆ ಕಾನೂನಿನ ನೆರವು ನೀಡುವುದು ಮತ್ತು ಬಾಕಿ ಇರುವ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ರಾಜೀ ಸಂಧಾನದ ಮೂಲಕ ಪರಿಹರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ನಾವು ಯಾವುದೇ ಸೌಲಭ್ಯ ಪಡೆಯಲು ಜನನ ಪ್ರಮಾಣ ಪತ್ರ ಮುಖ್ಯ ವಾಗಿರುತ್ತದೆ. ಆದ್ದರಿಂದ ಸರಿಯಾಗಿ ನೊಂದಾವಣೆ ಮಾಡದಿದ್ದರೆ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುವ ಸಂದರ್ಭ ಎದುರಾಬಹುದು ಎಂದರು. ಶಾಲಾ ಕಾಲೇಜುಗಳಲ್ಲಿ, ಶಾಲಾ ದಾಖಲಾತಿಗಳಲ್ಲಿ ಹಲವಾರು ತಪ್ಪು ಗಳಿರುತ್ತವೆ. ಜಾತಿ, ಹೆಸರು, ವಿಳಾಸ ಆಧಾರದ ಮೇಲೆ ಮೀಸಲಾತಿ ಮೂಲಕ ಕೆಲಸ ದೊರೆಯುತ್ತದೆ. ಅದಕ್ಕಾಗಿ ಆ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಬೇಕು. ಎಲ್ಲರು ಕನಿಷ್ಠ ಕಾನೂನು ಜ್ಞಾನವನ್ನು ಹೊಂದಬೇಕು. ನ್ಯಾಯಾಲಯಕ್ಕೆ ಬರುವ ಸಂದರ್ಭ ತಂದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ(ಪ್ರಭಾರ) ಶ್ರೀಮತಿ ಭಾರತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಕಾನೂನಿನ ಬಗ್ಗೆ ತಿಳಿಯುವುದು ಬಹಳ ಮುಖ್ಯ, ನಾವು ವಿದ್ಯಾರ್ಥಿಗಳಿಗೆ ಪ್ರತಿ ದಿನ ಕಾನೂನಿನ ಬಗ್ಗೆ ಮತ್ತು ಪೋಕ್ಸೊ ಕಾಯಿದೆ ಬಗ್ಗೆ ಅರಿವು ಮೂಡಿಸುತ್ತೇವೆ. ಮಕ್ಕಳ ದಾಖಾಲಾತಿಗಳನ್ನು ಸ್ಯಾಟ್ಸ್ ಪೋರ್ಟಲ್ ಮೂಲಕ ಸರಿಯಾಗಿ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ ಎಂ.ಎಸ್, ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕ ಶಿವಲಿಂಗಪ್ಪ ಬಿ .ಎಲ್ , ಕಾಲೇಜಿನ ಉಪನ್ಯಾಸಕರು,ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.