ಶಿವಮೊಗ್ಗ: ನಾವು ಕಲಿತ ವಿದ್ಯೆಯನ್ನು ಯಾರೂ ಕಳ್ಳತನ ಮಾಡಲಾಗುವುದಿಲ್ಲ. ವಿಭಜನೆ ಮಾಡಲಾಗುವುದಿಲ್ಲ. ಯಾವ ರಾಜ, ಅಧಿಕಾರಿಯೂ ದರ್ಪದಿಂದ ಕಿತ್ತುಕೊಳ್ಳಲಾಗುವುದಿಲ್ಲ ಎಂದು ಪೂಜ್ಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ ಹೇಳಿದ್ದಾರೆ.
ಅವರು ನಗರದ ಬಂಟರ ಭವನದಲ್ಲಿ ಜಿ.ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆ(ರಿ) ಉಡುಪಿ ಜಿಲ್ಲೆ ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿ.ಎಸ್.ಬಿ. ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಶಿವಮೊಗ್ಗ ಜಿ.ಎಸ್.ಬಿ. ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ಮತ್ತು ವೃತ್ತಿ ಪ್ರೇರಣಾ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಹಾಗೂ ಕುಟುಂಬ ಚೈತನ್ಯ ನಿಧಿಯ ಚಾಲನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವಚನ ನೀಡಿದರು.
ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಕೂಡ ಅದು ಭಾರ ಎನಿಸುವುದಿಲ್ಲ.
ವಿದ್ಯಾಧನಂ ಸರ್ವಧನ ಪ್ರಧಾನಂ ಎಂದು ಶಾಸ್ತ್ರ ಹೇಳಿದೆ. ನಾವು ಪಡೆದ ಶಿಕ್ಷಣವೇ ಹೆಚ್ಚು ಎಂಬ ಅಹಂಭಾವ ಬೇಡ. ಮತ್ತು ಇನ್ನೊಬ್ಬರು ಪಡೆದ ಶಿಕ್ಷಣವನ್ನು ಅವಹೇಳನ ಮಾಡಬಾರದು. ಎಲ್ಲಾ ವಿದ್ಯೆಗೂ ಅದರದ್ದೇ ಆದ ಗೌರವವಿದೆ. ಯಾವುದೇ ವಿದ್ಯೆ ಪಡೆದರೂ ಕೂಡ ಒಂದಲ್ಲ ಒಂದು ದಿನ ಅದು ಉಪಯೋಗಕ್ಕೆ ಬರುತ್ತದೆ. ಲೌಖಿಕ ಜಗತ್ತು ಎದುರಿಸಲು ಶಿಕ್ಷಣ ಬೇಕೇ ಬೇಕು. ಮತತ್ಉ ನೈತಿಕತೆ ಇರಬೇಕು. ನೈತಿಕತೆ ಇಲ್ಲದ ಶಿಕ್ಷಣ ವ್ಯರ್ಥ ಎಂದರು,
ಮಹಿಳೆ ಶಿಕ್ಷಣ ಪಡೆದರೆ ಕುಟುಂಬದ ನಿರ್ವಹಣೆಗೂ ಮತ್ತು ಮಕ್ಕಳ ಜೀವನಕ್ಕೂ ಸಹಕಾರಿಯಾಗುತ್ತದೆ. ಇವತ್ತಿನ ಕಾರ್ಯಕ್ರಮ ದೀಪಸ್ತಂಭದ ರೂಪದಲ್ಲಿ ಎಲ್ಲರಿಗೂ ಬೆಳಕು ನೀಡುತ್ತಿದೆ. ಶಿಕ್ಷಣ ನೀಡುವುದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ. ವಿದ್ಯಾನಿಧಿಯನ್ನು ಪಡೆದ ಫಲಾನುಭವಿಗಳು ತಾವು ಪಡೆಯುವದಷ್ಟೇ ಅಲ್ಲ, ಉನ್ನತ ಸ್ಥಾನಕ್ಕೇರಿದ ಮೇಲೆ ಇನ್ನೂ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವ ಸಂಕಲ್ಪ ಮಾಡಿ ಎಂದರು.
ಇಂದಿನ ಸಮಾರಂಭದಲ್ಲಿ ಸುಮಾರು 332 ವಿದ್ಯಾರ್ಥಿಗಳಿಗೆ ವಿದ್ಯಾ ಪೋಷಕನಿಧಿ, 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಯೋಜನೆ ಮತ್ತು ವೃದ್ಧಾಪ್ಯ ಹಾಗೂ ಅನಾರೊಗ್ಯದಿಂದ ಆರ್ಥಿಕ ಅಶಕ್ತರಾದ ಕುಟುಂಬಗಳಿಗೆ ಕುಟುಂಬ ಚೈತನ್ಯ ನಿಧಿ ವಿತರಿಸಲಾಯಿತು.
ಬೆಳಗ್ಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರಿಂದ 5.70 ಲಕ್ಷ ರಾಮನಾಮ ಜಪ ನಡೆಯಿತು. ಬಳಿಕ ಕಾರ್ಯಕ್ರಮ ಉದ್ಘಾಟಿಸಿದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ನರೇಂದ್ರ ಭಟ್ ಮಾತನಾಡಿ, ಪ್ರತಿಯೊಬ್ಬರಲ್ಲೂ ದೇವರಿದ್ದಾನೆ ಎಂಬುದನ್ನು ಮರೆಯದೇ ಯಾರಿಗೂ ಮೋಸ ಮಾಡದೇ ಜೀವಿಸಬೇಕು. ಜಿ.ಎಸ್.ಬಿ. ಸಮಾಜ ಎಲ್ಲರೊಂದಿಗೂ ಬೆರೆತು ಸಿಹಿಯಂತೆ ಬಾಳುವ ಸಮಾಜ. ನಿಸ್ಪೃಹ ವ್ಯಕ್ತಿತ್ವ ಬೆಳೆಸಿಕೊಳ್ಳಿ. ನಿಷ್ಕಾಮ ಪ್ರೇಮದಿಂದ ಜೀವನ ಮಾಡಿ. ನಿಮಗೆ ಸ್ಥಾನ ಮಾನ ದೊರೆತಾದ ಸಮಾಜವನ್ನು ಮರೆಯಬೇಡಿ. ಸಂಬಂಧ, ಸಂಸ್ಕಾರವನ್ನು ಉಳಿಸಿ, ಜೀವನ ಮೌಲ್ಯಗಳನ್ನು ಬೆಳೆಸಿಕೊಂಡು ಹೃದಯವಂತರಾಗಿ ಎಂದರು.
ಈ ಸಂದರ್ಭದಲ್ಲಿ ಆರ್.ಎನ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಸುಧೀರ್ ಪೈ ಕೆ.ಎಲ್., ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು.
ಉಡುಪಿಯ ತ್ರಿಶಾ ಶೈಕ್ಷಣಿಕ ಸಂಸ್ಥೆಯ ಸಂಸ್ಥಾಪಕರಾದ ಸಿ.ಎ. ಗೋಪಾಲಕೃಷ್ಣ ಭಟ್ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿರುವ ಅವಕಾಶಗಳು ಮತ್ತು ಸವಾಲುಗಳು ಹಾಗೂ ಉದ್ಯಮಶೀಲತೆಯಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ಪ್ರೇರಣಾದಾಯಿ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಸಾಗರದ ಖ್ಯಾತ ಉದ್ಯಮಿ ಶಿವಾನಂದ್ ಭಂಡಾರ್ಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರವೀಂದ್ರ ನಾಯಕ್, ಕೊಂಕಣ್ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಮುರಳೀಧರ ಪ್ರಭು, ಖ್ಯಾತ ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್, ಹಾಗೂ ಜಿ.ಎಸ್.ಬಿ. ಶಿವಮೊಗ್ಗ ಸಮಾಜದ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್, ವಿದ್ಯಾಪೋಷಕ ನಿಧಿ ಶಿವಮೊಗ್ಗ ಸಂಯೋಜಕ ಮಡೂರು ಪ್ರಕಾಶ್ ಪ್ರಭು, ಪ್ರಮುಖರಾದ ಹಾಲಾಡಿ ರಾಜೇಂದ್ರ ಪೈ, ರಾಮು ಕಿಣಿ, ಶಂಕರ್ ದಿವೇಕರ್, ಹಿತರಕ್ಷಣಾ ವೇದಿಕೆ ಸಂಚಾಲಕ ವಿವೇಕಾನಂದ ಶೆಣೈ, ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಹಾಗೂ ವೇದಿಕೆಯ ವಿವಿಧ ತಾಲೂಕಿನ ಪದಾಧಿಕಾರಿಗಳು ಮತ್ತು ಸಮಾಜದ ಬಂಧುಗಳು ಭಾಗವಹಿಸಿದ್ದರು.