ಶಿವಮೊಗ್ಗ ನಗರದ ರವೀಂದ್ರ ನಗರ ಪಾರ್ಕ್ ನಲ್ಲಿ ರವೀಂದ್ರ ನಗರದ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಪೊಲೀಸ್ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನಾಗರೀಕರ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.
1) ಹಿರಿಯ ನಾಗರೀಕರ ರಕ್ಷಣಾ ಕಾಯ್ದೆಯು 2009 ರಲ್ಲಿ ಜಾರಿಗೆ ಬಂದಿದ್ದು, ಈ ಕಾಯ್ದೆಯ ಮೂಲ ಉದ್ದೇಶವು 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಕಾನೂನಾತ್ಮಕವಾಗಿ ನ್ಯಾಯ ಒದಗಿಸುವುದೇ ಆಗಿರುತ್ತದೆ. ಈ ಕಾಯ್ದೆಯ ಪ್ರಕಾರ ಯಾರೇ ಮಕ್ಕಳು ತಮ್ಮ ವಯಸ್ಸಾದ ತಂದೆ ತಾಯಿಯವರ ಯೋಗ ಕ್ಷೇಮವನ್ನು ನೋಡಿಕೊಳ್ಳದೇ ನಿರ್ಲಕ್ಷತನ ತೋರಿದ್ದರೆ, ಹಿರಿಯ ನಾಗರೀಕರು ನೇರವಾಗಿ ಉಪ ವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಬಹುದಾಗಿರುತ್ತದೆ, ನಂತರ ತಪ್ಪಿತಸ್ಥರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಿ ಮೂರು ತಿಂಗಳ ಒಳಗಾಗಿ ಕಾನೂನಾತ್ಮಕವಾಗಿ ನಿಮಗೆ ನ್ಯಾಯ ಒದಗಿಸಲಾಗುತ್ತದೆ.
2) ಹಿರಿಯ ನಾಗರೀಕರಿಗೆ ಕಾನೂನಿನಲ್ಲಿ ವಿಶೇಷ ಆದ್ಯತೆಗಳಿದ್ದು, ಪೊಲೀಸ್ ಇಲಾಖೆಯಿಂದ ಒಂಟಿಯಾಗಿ ವಾಸಿಸುವ ಹಿರಿಯನಾಗರೀಕರ ಪಟ್ಟಿಯನ್ನು ತಯಾರಿಸಿ ಯಾವುದೇ ಸಮಸ್ಯೆ ಇದ್ದರೆ ಶೀಘ್ರವಾಗಿ ಪರಿಹರಿಸಲಾಗುತ್ತದೆ. ಹಾಗೂ ನೀವು ಯಾವುದೇ ದೂರು / ಸಮಸ್ಯೆ / ಸಹಾಯಕ್ಕಾಗಿ 112 ತುರ್ತು ಸಹಾಯವಾಣಿಗೆ ಕರೆ ಮಾಡಬಹುದಾಗಿರುತ್ತದೆ. ನೇರವಾಗಿ ಪೊಲೀಸ್ ಠಾಣೆಗೆ ಬಂದು ನಿಮ್ಮ ದೂರನ್ನು ಸಲ್ಲಿಸಲು ಅನಾನುಕೂಲವಿದ್ದಲ್ಲಿ ಕೆ.ಎಸ್.ಪಿ ಅಪ್ಲಿಕೇಷನ್ / ಇ-ಮೇಲ್ ಮುಖಾಂತರ ಕೂಡ ದೂರು ನೀಡಬಹುದಾಗಿರುತ್ತದೆ. ನಿಮ್ಮ ದೂರುಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ, ಆದ್ಯತೆ ಮೇರೆಗೆ ನಿಮ್ಮ ಸಮಸ್ಯೆ ಬಗೆಹರಿಸಲಾಗುತ್ತದೆ.
3) ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿ ಆನ್ ಲೈನ್ ನಲ್ಲಿ ವ್ಯವಹರಿಸುವಾಗ ಎಚ್ಚರವಹಿಸುವಂತೆ ಹಾಗೂ ಯಾರಾದರು ಫೋನ್ ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ / ಬ್ಯಾಂಕ್ ನ ಮಾಹಿತಿ / ಓಟಿಪಿ ಕೇಳಿದರೆ ಯಾವುದೇ ಕಾರಣಕ್ಕೂ ನೀಡಬೇಡಿ, ಒಂದು ವೇಳೆ ನಿಮಗೆ ಯಾರಾದರೂ ಈ ರೀತಿ ಕರೆ ಮಾಡಿದರೆ ಕೂಡಲೇ 1930 ಗೆ ಕರೆ ಮಾಡಿ ಸೈಬರ್ ಕ್ರೈಂ ಕುರಿತು ವರದಿ ಮಾಡುವಂತೆ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ರವೀಂದ್ರ ನಗರದ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.