
ವಿಧಾನಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಜಲ ಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ಸ್ಥಳೀಯ ಸಂಸ್ಥೆಗಳ ವಿವಿಧ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಖಾಯಂ ನೌಕರರನ್ನಾಗಿ ಪರಿಗಣಿಸಬೇಕೆನ್ನುವ ವಿಷಯವನ್ನು ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರ ಬಳಿ ಪ್ರಸ್ತಾಪಿಸಿದರು.
ಮಹಾನಗರ ಪಾಲಿಕೆಗಳಲ್ಲಿ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳನ್ನು ಖಾಯಂ ನೌಕರರನ್ನಾಗಿ ಪರಿಗಣಿಸಲು ಪ್ರಸ್ತುತ ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ತಿಳಿಸಿ ಎಲ್ಲಾ ಮಹಾನಗರ ಪಾಲಿಕೆಯ ಆಯುಕ್ತರಿಗೆ ಹೊರಗುತ್ತಿಗೆ ನೌಕರರ ವೇತನವನ್ನು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯಂತೆ ನಿಯಮಾನುಸಾರ ವೇತನ ಕಾಯ್ದೆಯಂತೆ ನಿಯಮಾನುಸಾರ ವೇತನ ಪಾವತಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದಾಗ,
ಶಾಸಕರು ನೀರು ಸರಬರಾಜು ಮಾಡುವವರು ದಿನವೂ ಮೂರು ಪಾಳಿಗಳಲ್ಲಿ ದುಡಿಯುತ್ತಾ ತಮ್ಮ ಕರ್ತವ್ಯವನ್ನು ನಿರಂತರವಾಗಿ ನಿಭಾಯಿಸಿದ್ದಾರೆ.
ಕೋವಿಡ್-19 ಮಹಾಮಾರಿಯ ಸಮಯದಲ್ಲೂ ಎಲ್ಲರೂ ಮನೆಗಳಲ್ಲಿ ಸುರಕ್ಷಿತವಾಗಿದ್ದಾಗ, ಇವರು ತಮ್ಮ ಕೆಲಸವನ್ನು ಸಾಮಾನ್ಯವಾಗಿ ಮುಂದುವರಿಸಿದರು, ದುಃಖದ ವಿಚಾರವೇನೆಂದರೆ, ಇವರಲ್ಲಿ ಮೂವರು ಕೋವಿಡ್-19 ಸೋಂಕಿತರಾಗಿ ಮೃತಪಟ್ಟಿದ್ದಾರೆ,ಇವರು ತೋರಿಸಿದ ಸಮರ್ಪಣೆ ಮತ್ತು ಸೇವೆಗಣನೆಗೆ ಬಾರದಂತಾಗಿದೆ. ಇಂದಿಗೂ ಇವರಿಗೆ ಕೆಲಸದ ಭದ್ರತೆ ಇಲ್ಲದಿರುವುದು ಹಾಗೂ ನೇರವಾಗಿ ವೇತನ ಪಾವತಿಯಾಗುವುದಿಲ್ಲ ಎಂಬ ವಿಚಾರ ಎಷ್ಟರಮಟ್ಟಿಗೆ ಸರಿ ಎಂದು ಸದನಕ್ಕೆ ತಿಳಿಸುತ್ತಾ ಘನ ನ್ಯಾಯಾಲಯ ಕೂಡ ಮೂಲಭೂತ ಸೌಲಭ್ಯ ಒದಗಿಸುವವರಿಗೂ ಕನಿಷ್ಠ ನೇರ ಪಾವತಿ ಖಾತರಿ ನೀಡಬೇಕೆಂದು ಗಮನಿಸಿರುವ ಹಿನ್ನೆಲೆಯಲ್ಲಿ, ಇವರ ಕೊಡುಗೆಗಳಿಗೆ ತಕ್ಕ ಗೌರವ ಮತ್ತು ಬೆಂಬಲ ಸಿಗಬೇಕೆಂದು ಸಚಿವರಲ್ಲಿ ಮನವಿ ಮಾಡಿ ಹೊರಗುತ್ತಿಗೆ ಆಧಾರದ ಮೇಲೆ ನೌಕರರಿಗೆ ವೇತನವನ್ನು ಬಿಡುಗಡೆ ಮಾಡ ಬದಲು ನೇರ ಪಾವತಿ ಅಡಿ ಇಂತಹ ನೌಕರರನ್ನು ಪರಿಗಣಿಸಿದ್ದಲ್ಲಿ ಸೇವಾ ಶುಲ್ಕವನ್ನು ಸಹ ಕಡಿತಗೊಳಿಸಬಹುದೆಂದು ಶಾಸಕರು ಸಲಹೆ ನೀಡಿದರು.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಶಾಸಕರ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಆರ್ಥಿಕ ಇಲಾಖೆಯಲ್ಲಿ ಚರ್ಚಿಸಿ ಪಾಲಿಕೆ ಅಧೀನದಲ್ಲಿರುವ ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರಿಗೆ ಸಾಧ್ಯವಾದಷ್ಟು ಅನುಕೂಲ ಮಾಡುತ್ತೇನೆಂದು ಭರವಸೆ ನೀಡಿದರು.
ಡಿ.ಎಸ್.ಅರುಣ್
ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು.