ಶಿವಮೊಗ್ಗ: ‘ಹೊಸ ತಲೆಮಾರಿಗೆ ಕನ್ನಡ ಅಂಕಿಗಳ ಬಗ್ಗೆ ಅರಿವೇ ಇಲ್ಲ. ಸರ್ಕಾರದ ಮಟ್ಟದಿಂದ ಪಂಚಾಯ್ತ ಮಟ್ಟದ ಎಲ್ಲ ಕಚೇರಿಗಳ ಲೆಕ್ಕಪತ್ರ ಹಾಗೂ ಕಡತಗಳಲ್ಲಿ ಕನ್ನಡ ಅಂಕಿಗಳನ್ನೇ ಬಳಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ’ ಎಂದು ಹಿರಿಯ ಸಮಾಜವಾದಿ ನಾಯಕ ಕೋಣಂದೂರು ಲಿಂಗಪ್ಪ ಹೇಳಿದರು.
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನಿಂದ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಕನ್ನಡಪರ ಹೋರಾಟದ ಕಿಡಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಕನ್ನಡ ಅಂಕಿಗಳನ್ನು ಬಳಸದ ಹೊರತು ಕನ್ನಡ ಭಾಷೆಯ ಅಸ್ತಿತ್ವ ಕಾಪಾಡಲು ಸಾಧ್ಯವಿಲ್ಲ. ಈ ಬಗ್ಗೆ ಚಳವಳಿ ನಡೆಸಿದರೂ ತಪ್ಪಾಗದು. ಕನ್ನಡ ಭಾಷೆ ಅಳವಡಿಕೆ ಜೊತೆ–ಜೊತೆಗೆ ಕನ್ನಡ ಅಂಕಿಗಳ ಬಳಕೆಗೂ ಒತ್ತುಕೊಡಬೇಕು. ಕನ್ನಡದ ಪುಸ್ತಕಗಳಲ್ಲಿಯೂ ಇಂಗ್ಲಿಷ್ ಅಂಕಿಗಳೇ ಬಳಕೆಯಾಗುತ್ತಿವೆ. ಇದು ಹೀಗೇ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಅಂಕಿಗಳು ಅಪರಿಚಿತವಾಗುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಕೋಣಂದೂರು ಲಿಂಗಪ್ಪನವರು ಕನ್ನಡ ಪರ ಹೋರಾಟಕ್ಕೆ ಮೊದಲು ಅಡಿಪಾಯ ಹಾಕಿದರು. ಇದನ್ನು ವಾಟಾಳ್ ನಾಗರಾಜ್ ಮುಂದುವರೆಸಿದರು. ಆದರೆ, ವಾಟಾಳ್ ಉಪದೇಶಗಳನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಕಾರಣ, ಅವರ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ್ದಾರೆ. ಕನ್ನಡ ಪರ ಹೋರಾಟಕ್ಕೆ ನಿಂತವರ ಇಂತಹ ತಪ್ಪುಗಳು ಸಾಕಷ್ಟಿವೆ. ಇಲ್ಲಿ ನನ್ನ ತಪ್ಪುಗಳೂ ಇರಬಹುದು’ ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಹೇಳಿದರು.
‘ಅಭಿಮಾನ ಶೂನ್ಯ ಹಾಗೂ ಸ್ವಾಭಿಮಾನದ ಕೊರತೆಯಿಂದ ಕನ್ನಡ ಭಾಷೆ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಕನ್ನಡವನ್ನು ರಾಜ್ಯ ಭಾಷೆ ಎಂದು ಹೇಳಿದ್ದರೆ ನ್ಯಾಯ ಸಿಗುತ್ತಿತ್ತು. ಆದರೆ, ಮಾತೃ ಭಾಷೆ ಎಂದು ಹೇಳಿಕೊಂಡಿದ್ದರಿಂದ ನ್ಯಾಯಾಲಯದಲ್ಲೂ ಭಾಷೆಗೆ ಹಿನ್ನಡೆ ಆಗಿದೆ’ ಎಂದು ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯ ತಿಳಿಸಿದರು.
‘ರೈತ ಸಂಘಟನೆಗಳ ಹೋರಾಟ ದಿಂದಾಗಿ ಬಗರ್‌ಹುಕುಂ ಜಮೀನುಗಳು ರೈತರ ಬಳಿಯೇ ಉಳಿದಿವೆ. ತೀರ್ಥಹಳ್ಳಿಯಲ್ಲಿ ಶ್ರೀಮಂತರು ಮಾತ್ರ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಕಾಲವಿತ್ತು. ಹಿಂದುಳಿದ ವರ್ಗದ ಲಿಂಗಪ್ಪ ಗೆದ್ದು ಬಂದ ಬಳಿಕ ಅನೇಕ ಬದಲಾವಣೆ ಆಯಿತು’ ಎಂದು ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ಪ್ರಮುಖರಾದ ಕಲ್ಲೂರು ಮೇಘರಾಜ್, ಪ್ರೊ.ಕಲ್ಲನ, ಪಾಣಿ ರಾಜಪ್ಪ, ಎಚ್.ಎಂ.ಸಂಗಯ್ಯ, ಶೇಖರ್ ಗೌಳೇರ್ ಇದ್ದರು.
ಗೌಡರ ಮಫ್ಲರ್‌ನಿಂದ ಲಿಂಗಪ್ಪಗೆ ಗೆಲುವು
‘ಶಾಂತವೇರಿ ಗೋಪಾಲಗೌಡರು ನೀಡಿದ್ದ ಮಫ್ಲರ್‌ನಿಂದ ಕೋಣಂದೂರು ಲಿಂಗಪ್ಪ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು’ ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಹೇಳಿದರು.
‘1972ರಲ್ಲಿ ಶಾಸಕರಾಗಿದ್ದ ಗೋಪಾಲಗೌಡರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದರು. ಆಗ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ 50 ಜನ ಮುಖಂಡರಿಗೆ ಕೇಳಲಾಗಿತ್ತು. ಯಾರೂ ಮುಂದೆ ಬಾರದಿದ್ದಾಗ ಲಿಂಗಪ್ಪ ಅವರಿಗೆ ಮನವಿ ಮಾಡಲಾಯಿತು. ‘ಗೌಡರೇ ಹೆಚ್ಚಿರುವ ತೀರ್ಥಹಳ್ಳಿಯಲ್ಲಿ ಹಣ ಬಲ–ಜನ ಬಲವಿಲ್ಲದ ನಾನು ಗೆಲ್ಲಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದರು.
‘ಆಸ್ಪತ್ರೆಯಲ್ಲಿದ್ದ ಗೋಪಾಲಗೌಡರನ್ನು ಭೇಟಿ ಮಾಡಿ ಸಲಹೆ ಕೇಳಿದಾಗ ಅವರ ಬಳಿ ಇದ್ದ ಮಫ್ಲರ್ ನೀಡಿದ್ದರು. ಚುನಾವಣೆ ಗೆಲ್ಲಲು ಇದೊಂದೇ ಸಾಕು ಎಂದು ಧೈರ್ಯ ತುಂಬಿದ್ದರು. ಅವರ ಸಲಹೆಯಂತೆ ಇಡೀ ಚುನಾವಣೆಯಲ್ಲಿ ಹಣ ಹಂಚದೆ, ಮಫ್ಲರ್ ಹಿಡಿದು ಪ್ರಚಾರ ಮಾಡಲಾಗಿತ್ತು’ ಎಂದು ನೆನಪುಗಳ ಮೆಲುಕು ಹಾಕಿದರು.