ಜಾತಿ ಒಳಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್‌ರವರ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ (ಶೈಕ್ಷಣಿಕ, ಆರ್ಥಿಕ) ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಅದರಂತೆ ಸಮೀಕ್ಷಾ ಕಾರ್ಯವು ಮೇ.05 ರಂದು ಪ್ರಾರಂಭವಾಗಿದ್ದು, ಗಣತಿದಾರರು ಮೇ.5 ರಿಂದ 17 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ದಾಖಲಿಸಿಕೊಳ್ಳಲ್ಲಿದ್ದಾರೆ.
ನಂತರ ಮೇ.19 ರಿಂದ 21 ರವರೆಗೆ ಮತಗಟ್ಟೆಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜನೆ ಮಾಡಲಾಗಿದ್ದು, ಮೇ.19 ರಿಂದ 23 ರವರೆಗೆ ಪರಿಶಿಷ್ಟ ಜಾತಿಯ ಕುಟುಂಬಗಳು ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯವನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳನ್ನಾಗಿ 3 ಸಿಬ್ಬಂದಿಗಳನ್ನು ಮತ್ತು ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೈನರ್‌ಗಳಾಗಿ ಪ್ರತೀ ತಾಲ್ಲೂಕಿಗೆ 5 ರಂತೆ ಒಟ್ಟು 35 ಸಿಬ್ಬಂದಿಗಳನ್ನು ನೇಮಿಸಿ ಮೇ.02 ರಂದು ತರಬೇತಿಯನ್ನು ನೀಡಲಾಗಿದೆ. ಸಮೀಕ್ಷೆ ನಡೆಸಲು 1793 ಮತಗಟ್ಟೆವಾರು ಶಿಕ್ಷಕರನ್ನು ಗಣತಿದಾರರನ್ನಾಗಿ ಹಾಗೂ 10 ರಿಂದ 12 ಮತಗಟ್ಟೆಗೆ ಒಬ್ಬರಂತೆ ಒಟ್ಟು 175 ಮುಖ್ಯ ಶಿಕ್ಷಕರುಗಳನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ.
ಸಮೀಕ್ಷಾ ಕಾರ್ಯವು ಸಕ್ರಿಯವಾಗಿ ಪ್ರಾರಂಭಗೊAಡು ಇಂದಿಗೆ 5 ದಿನಗಳು ಪೂರೈಸಲಾಗಿದ್ದು, ಸಮೀಕ್ಷಾ ಕಾರ್ಯದಲ್ಲಿ ಎದುರಾಗಬಹುದಾದಂತಹ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಕಛೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಗೂ ಮತಗಟ್ಟೆಯಲ್ಲಿ 200 ಕ್ಕಿಂತ ಹೆಚ್ಚಿನ ಕುಟುಂಬಗಳು ಇದ್ದಲ್ಲಿ ಹೆಚ್ಚುವರಿ ಗಣತಿದಾರರನ್ನು ನಿಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಸಮೀಕ್ಷೆ ಸಮಯದಲ್ಲಿ ಗಣತಿದಾರರು ಪರಿಶಿಷ್ಟ ಜಾತಿ ಅಲ್ಲದವರ ಮನೆಗೂ ಕೂಡ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಮನೆಯ ಮುಖ್ಯಸ್ಥರು ತಾವು ಯಾವ ಜಾತಿಗೆ ಸೇರಿರುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿದರೆ ಸಾಕು, ಆದರೆ ಪರಿಶಿಷ್ಟ ಜಾತಿ ಸಮುದಾಯದವರಾಗಿದ್ದಲ್ಲಿ ಪೂರ್ಣ ಪ್ರಮಾಣದ ಮಾಹಿತಿಯನ್ನು ಗಣತಿದಾರರಿಗೆ ನೀಡಬೇಕಾಗಿರುತ್ತದೆ. ಆದರಿಂದ ಒಳ ಮೀಸಲಾತಿಯ ಸಮೀಕ್ಷಾ ಕಾರ್ಯಕ್ಕೆ ಜಿಲ್ಲೆಯ ಎಲ್ಲಾ ನಾಗರೀಕರುಗಳು ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸಿಬೇಕೆಂದು ಜಿಲ್ಲಾಧಿಕಾರಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.