ಶಿವಮೊಗ್ಗದ ಶ್ರೀಮತಿ ಕೋಂ ಲೇಟ್ ಮಂಜುನಾಥಗೌಡ ಎಂಬುವವರು ಮ್ಯಾನೇಜಿಂಗ್ ಡೈರೆಕ್ಟರ್, ಶ್ರೀರಾಮ್ ಲೈಫ್ ಇನ್ಸೂರನ್ಸ್ ಕಂ.ಲಿ.- ಹೈದರಾಬಾದ್ ಮತ್ತು ಮ್ಯಾನೇಜರ್, ಶ್ರೀರಾಮ್ ಲೈಫ್ ಇನ್ಸೂರನ್ಸ್ ಕಂ.ಲಿ. ಶಿವಮೊಗ್ಗ ಇವರುಗಳ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರ ಮಗನಾದ ಸಚಿನ್ ಎಂಬುವವರು 2022ರಲ್ಲಿ ರೂ. 23,411 /- ಪಾವತಿಸಿ ಶ್ರೀರಾಮ್ ಲೈಫ್ ಇನ್ಸೂರನ್ಸ್ ಕಂಪನಿಯಿಂದ ಪಾಲಿಸಿಯನ್ನು ಪಡೆದಿರುತ್ತಾರೆ. 2023ರಲ್ಲಿ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪಾಲಸಿದಾರನ ತಾಯಿಯವರು ವಿಮಾ ಹಣವನ್ನು ಪಡೆಯಲು ಕ್ಲೈಮ್ ಮಾಡಿರುತ್ತಾರೆ. ಆದರೆ ಇನ್ಸೂರನ್ಸ್ ಕಂಪನಿಯವರು ನೀಡಲು ನಿರಾಕರಿಸಿದ್ದು, ಲೀಗಲ್ ನೋಟೀಸ್‌ಗೂ ಕೂಡ ಉತ್ತರ ಕೊಡದೆ ವಿಮಾ ಹಣವನ್ನೂ ಕೊಡದೆ ಸೇನಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗಕ್ಕೆ ದೂರು ಸಲ್ಲಿರುತ್ತಾರೆ.
ಆಯೋಗವು ದೂರನ್ನು ಪರಿಶೀಲಿಸಿ ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ತಕರಾರು ಸಲ್ಲಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಪಾಲಿಸಿ ವಿತರಿಸಿದ ಒಂದು ವರ್ಷದೊಳಗೆ ಪಾಲಿಸಿ ಪಡೆದುಕೊಂಡ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಮೊದಲನೆ ಪ್ರೀಮಿಯಂನ ಮೊತ್ತದಲ್ಲಿ ಶೇ.80ರಷ್ಟು ಪಾವತಿಸಬೇಕಾಗಿರುತ್ತದೆ ಎಂಬ ವಿಷಯವು ಪಾಲಿಸಿಯ ಷರತ್ತಿನಲ್ಲಿರುತ್ತದೆ.
ಆದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ಈ ಆದೇಶದ 45 ದಿನಗಳೊಳಗೆ ಪಾಲಿಸಿಯ ಮೊದಲನೇ ಪ್ರೀಮಿಯಂ ಮೊತ್ತದ ಶೇ.80 ರಷ್ಟು ಅಂದರೆ ರೂ. 17,506/- ಗಳನ್ನು ವಾರ್ಷಿಕ ಶೇ.10% ಬಡ್ಡಿಯೊಂದಿಗೆ ದಿ: 22/11/2024 ರಿಂದ ಪೂರ ಹಣ ನೀಡುವವರೆಗೂ, ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.12% ರಂತೆ ಬಡ್ಡಿ ಸಹಿತ ಪಾವತಿಸಲು ಹಾಗೂ ರೂ.50,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು, ತಪ್ಪಿದಲ್ಲಿ ಈ ಮೊತ್ತಗಳ ಮೇಲೆ ವಾರ್ಷಿಕ ಶೇ.12% ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಹಣವನ್ನು ಪಾವತಿಸುವವರೆಗೂ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮೇ.05 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಎಂ.ಟಿ.ಗಂಗಾಧರ ನಾಯ್ಕ್ ತಿಳಿಸಿದ್ದಾರೆ.