ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭಾರತೀಯ ಪಶು ವೈದ್ಯಕೀಯ ಪರಿಷತ್‌ನಿಂದ ಮಾನ್ಯತೆಯ ನವೀಕರಣ ಪಡೆಯುವ ಸಲುವಾಗಿ ರೂ.22.44 ಕೋಟಿ ಮೊತ್ತದ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದ್ದು ಈ ಕುರಿತು ಸರ್ಕಾರದೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ತಿಳಿಸಿದರು.


ನಗರದ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ನಂತರ ಸಭೆ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯವು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನ ಒಂದು ಅಂಗ ಸಂಸ್ಥೆಯಾಗಿದೆ. 173 ಎಕರೆ ವಿಸ್ತೀರ್ಣ ಜಮೀನಿನಲ್ಲಿದ್ದು ಸುಸಜ್ಜಿತವಾದ ಕಟ್ಟಡಗಳಿವೆ. ಸುಂದರ ಆವರಣವನ್ನು ಹೊಂದಿದೆ.
ಸಾಕಷ್ಟು ಮೂಲಸೌಕರ್ಯಗಳಿರುವ ಈ ಕಾಲೇಜಿಗೆ ಎಂಎಸ್‌ವಿಇ-2016(ಮಿನಿಮಮ್ ಸ್ಟಾö್ಯಂಡರ್ಡ್ಸ್ ಆಫ್ ವೆಟೆರ್ನರಿ ಎಜುಕೇಷನ್) ರ ಪ್ರಕಾರ ಭಾರತೀಯ ಪಶುವೈದ್ಯಕೀಯ ಪರಿಷತ್‌ನಿಂದ ಮಾನ್ಯತೆಯ ನವೀಕರಣ ಪಡೆಯುವ ಸಲುವಾಗಿ ರೂ.2244 ಲಕ್ಷದ ಕಾಮಗಾರಿಗಳು ಕೈಗೊಳ್ಳುವುದು ಅವಶ್ಯವಿದೆ ಎಂದು ವಿವಿ ಕುಲಪತಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.ಈ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದು, ಸರ್ಕಾರದ ಕಾರ್ಯದರ್ಶಿಗಳು, ಡೀನ್‌ಗಳ ಸಮ್ಮುಖದಲ್ಲಿ ಒಂದು ಸಭೆ ನಡೆಸಲು ಶೀಘ್ರದಲ್ಲೇ ದಿನಾಂಕ ನಿಗದಿಗೊಳಿಸುತ್ತೇನೆ ಎಂದರು.


ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಕೆ ಸಿ ವೀರಣ್ಣ ಮಾತನಾಡಿ, ಇತ್ತೀಚೆಗೆ ಐಸಿಎಆರ್ ಅಕ್ರಿಡಿಟೇಷನ್ ಸಮಿತಿ ತಂಡದವರು ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ರಾಜ್ಯದ ಎರಡನೇ ಅತ್ಯುತ್ತಮ ಕಾಲೇಜು ಎಂದು ಗುರುತಿಸಿರುತ್ತಾರೆ. ಮತ್ತು ಬಾಕಿ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ ಕಾಲೇಜನ್ನು ಇನ್ನೂ ಉತ್ತಮ ಮಟ್ಟಕ್ಕೆ ಬೆಳೆಸಬಹುದೆಂದು ಸಲಹೆ ನೀಡಿರುತ್ತಾರೆಂದು ತಿಳಿಸಿದರು.


ಆವರಣದಲ್ಲಿ ಅಪೂರ್ಣವಾಗಿರುವ ಕಟ್ಟಡಗಳು ಹಳೆಯದ್ದಾಗಿದ್ದು, ತುರ್ತಾಗಿ ಕಾಮಗಾರಿ ಕೈಗೊಂಡು ಈ ಕಟ್ಟಡಗಳನ್ನು ಪೂರ್ಣಗೊಳಿಸಬೇಕಿದ್ದು ಶೀಘ್ರವಾಗಿ ಹಣ ಬಿಡುಗಡೆ ಮಾಡಿಬೇಕೆಂದು ಮನವಿ ಮಾಡಿದರು.
ಈ ಮಹಾವಿದ್ಯಾಲಯದ ಆವರಣದ ಒಳಗೆ 2500 ಮೀಟರ್ ಆಂತರಿಕ ರಸ್ತೆ ಆಗಬೇಕಿದ್ದು, ರೈತರು ಮತ್ತು ಜಾನುವಾರುಗಳು ಓಡಾಡುವುದರಿಂದ ಈ ರಸ್ತೆ ಅಗತ್ಯವಾಗಿ ಬೇಕಾಗಿದೆ ಎಂದರು.


ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ರಾಜ್ಯ, ರಾಷ್ಟç ಮಟ್ಟದಲ್ಲಿ ರೈತರ ಹಾಗೂ ಜಾನುವಾರುಗಳ ಸೇವೆ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ವಿಶೇಷ ಸಂಶೋಧನೆಗಳು ಇನ್ನಿತರೆ ಸೇವೆ ಚೆನ್ನಾಗಿದ್ದು, ಪ್ರಯೋಗಾಲಯದ ಪರಿಕರಗಳನ್ನು ಅಪ್‌ಗ್ರೇಡ್ ಮಾಡಬೇಕಿದ್ದು ಇದಕ್ಕೆ ಸುಮಾರು ರೂ.25 ಕೋಟಿ ಹಣದ ಅವಶ್ಯವಿದೆ ಎಂದು ತಿಳಿಸಿದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕಾಲೇಜಿನ ಮೂಲಭೂತ ಸೌಕರ್ಯಗಳು ಮತ್ತು ಇತರೆ ಕಾಮಗಾರಿಗಳ ಕುರಿತು ಸಚಿವರು ವೈಯಕ್ತಿಕ ಆಸಕ್ತಿ ತೆಗೆದುಕೊಂಡು ಅನುಕೂಲ ಮಾಡಿಕೊಡಬೇಕೆಂದು ಕೋರಿದರು.


ಸಚಿವರು, ರೂ.22.44 ಕೋಟಿ ಕಾಮಗಾರಿಯ ಪ್ರಸ್ತಾವನೆ, ರಸ್ತೆಗಳು ಹಾಗೂ ಲ್ಯಾಬ್ ಅಪ್‌ಗ್ರೇಡ್ ಇತರೆ ವಿಚಾರಗಳ ಕುರಿತು ಸರ್ಕಾರದ ಹಂತದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಮಾಜಿ ವಿಧಾನ ಪರಿಷತ್ ಶಾಸಕ ಪ್ರಸನ್ನಕುಮಾರ್, ಇತರೆ ಮುಖಂಡರು, ಕಾಲೇಜಿನ ಡೀನ್ ಪ್ರಕಾಶ್ ಎನ್, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *