ಮಥುರಾ ಪ್ಯಾರಡೈಸ್ ಎಂದರೆ ಶಿವಮೊಗ್ಗದ ಅಭಿವೃದ್ಧಿಗೆ ಪೂರಕ ಸಂಸ್ಥೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಥುರಾ ರಜತೋತ್ಸವ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಥುರಾ ಎಂದರೆ ಗೋಪಿ, ಗೋಪಿ ಎಂದರೆ ಅದು ಮಥುರಾವಾಗಿದೆ. ಇದು ಅನ್ವರ್ಥ ನಾಮ ಎಂಬಂತಾಗಿದೆ‌‌. ಸಂಸ್ಥೆ ಹೆಸರಿನ ಜೊತೆಗೆ ರೂಪಿತವಾದ ವ್ಯಕ್ತಿ ಎಂದರೆ, ಅದು ಮಥುರಾ ಗೋಪಿನಾಥ್ ಎಂದು ಅಭಿಪ್ರಯಿಸಿದರು.

ಶಿವಮೊಗ್ಗದ ಮುಖಂಡರು ಹಾಗೂ ನಾಗರೀಕರಿಗೆ ಮಥುರಾ ಪ್ಯಾರಡೈಸ್ ಅವಿನಾಭಾವ ಸಂಬಂಧವಿದ್ದು, ಕಳೆದ 25 ವರ್ಷಗಳಿಂದ ಮಥುರಾ ಕೇವಲ ಉದ್ಯಮವಾಗಿ ಬೆಳೆದು ನಿಲ್ಲದೇ, ಸಾರ್ವಜನಿಕವಾಗಿ ಮೈಗೂಡಿಸಿಕೊಂಡು ಮುಂದುವರೆದಿದೆ ಎಂದರು. 25 ನೇ ವರ್ಷಕ್ಕೆ 36 ಕಾರ್ಯಕ್ರಮಗಳು ರೂಪಿಸಿದ್ದು, ಅರ್ಥಗರ್ಭಿತವಾಗಿದೆ. ಬಹಳ ಸಂಸ್ಥೆಗಳಿಗೆ ಮಥುರಾ ಗೋಪಿ ನೆರವಾಗಿರುವುದು ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಶುಭ ಕೋರಿದ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಗೋಪಿಯವರ ಮಥುರಾ ಸಂಸ್ಥೆ 25 ವರ್ಷಗಳಾಗಿದ್ದು, ಮರೆತೇ ಹೋಗಿದೆ. ಮೊನ್ನೆ ಮೊನ್ನೆ ಆರಂಭವಾದಂತಿದೆ. ಮಥುರಾ ಸಂಸ್ಥೆ ಸಾಕಷ್ಟು ಚಟುವಟಿಕೆ ಮಾಡುತ್ತಿದೆ. ಗೋಪಿಯವರ ಈ ಸಂಸ್ಥೆ ಚಟುವಟಿಕೆಗಳ ಕೇಂದ್ರವಿದ್ದಂತೆ. ತಮ್ಮ ಸ್ನೇಹಿತರನ್ನು ಜೋಡಿಸಿಕೊಂಡು ಹಲವಾರು ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಶಿವಮೊಗ್ಗದ ಅಭಿವೃದ್ಧಿ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಎಂದರು. ಗೋಪಿ ಹಾಗೂ ಲಕ್ಷ್ಮಿದೇವಿ ಗೋಪಿನಾಥ್ ಅವರು, ಆದರ್ಶ ದಂಪತಿ ಇದ್ದಂತೆ. ಇಬ್ಬರೂ ಕೂಡ ಉತ್ತಮವಾಗಿ ಹಲವಾರು ಕಾರ್ಯಕ್ರಮ ರೂಪಿಸಿದ್ದಾರೆ. ಅನೇಕ ಸಂಸ್ಥೆಗಳಿಗೆ ಇವರಿಬ್ಬರೂ ನೆರವಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಿ.ಎಸ್. ಅರುಣ್, ಮಥುರಾ ಸಂಸ್ಥೆ ಬೆಳೆದು ಬಂದ ಹಾದಿ ಸ್ಮರಿಸಿದರು. ಮೊಟ್ಟ ಮೊದಲ ಬಾರಿಗೆ ಮಥುರಾ ಪ್ಯಾರಡೈಸ್ ಸಂಸ್ಥೆಯಲ್ಲಿ ಹೊಸ, ಹೊಸ ಚಿಂತನೆಗಳು, ಹೋರಾಟದ ರೂಪು, ರೇಷೆ ಸಾಕಾರಗೊಂಡಿವೆ. ಮಥುರಾ ಹಲವರಿಗೆ ಆಶ್ರಯ ನೀಡಿದ ಸ್ಥಳವಾಗಿದೆ. ಕೇವಲ ವ್ಯವಹಾರದ ದೃಷ್ಟಿಯಿಂದ ಮಾತ್ರ ನೋಡದೇ ಸಾಮಾಜಿಕವಾಗಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಮಥುರಾ ಪ್ಯಾರಡೈಸ್ ನಲ್ಲಿ ಉಚಿತ ಕಾಫಿ, ಟೀ, ಉಚಿತ ಸಭೆಗಳು ನಡೆದಿದ್ದು, ಇವುಗಳು ಕೂಡ ಶಿವಮೊಗ್ಗಕ್ಕೆ ಅನೇಕ ಕೊಡುಗೆ ನೀಡಿದೆ ಎಂದು ಸ್ಮರಿಸಿದರು. ಅಲ್ಲದೇ, ಶಿವಮೊಗ್ಗದ ಬೆಳವಣಿಗೆಗೆ ಮಥುರಾ ಪ್ಯಾರಡೈಸ್ ಪ್ರಮುಖ ಪಾತ್ರ ವಹಿಸಿದೆ ಎಂದರು.

ಈ ವೇಳೆ ಸಂಸ್ಥೆ ಪರವಾಗಿ ಧನ್ಯವಾದ ಅರ್ಪಿಸಿದ ಎನ್. ಗೋಪಿನಾಥ್, ನನಗೆ ಗೌರವ ನೀಡಿರುವುದಕ್ಕೆ ಧನ್ಯವಾದ ಅರ್ಪಿಸಿದರು. ನಮ್ಮ ಕನಸಿನ ಶಿವಮೊಗ್ಗ ಸಂಸದಥೆ ಮೂಲಕ ಶಿವಮೊಗ್ಗದ ಮೆಡಿಕಲ್ ಕಾಲೇಜು ಹೋರಾಟ ಆರಂಭವಾಗಿದ್ದೆ ಇಲ್ಲಿಂದ. ನಮ್ಮ ಕನಸಿನ ಶಿವಮೊಗ್ಗದಿಂದಲೇ ಅನೇಕ ಕನಸುಗಳು ಸಾಕಾರಗೊಂಡಿವೆ. ರಾಜಕಾರಣಿಗಳು, ನಮ್ಮ ಪದಾಧಿಕಾರಿಗಳ ವಿಶೇಷ ಪ್ರಯತ್ನದಿಂದ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದು ಸ್ಮರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಥುರಾ ಸಂಸ್ಥೆಯ ಲಕ್ಷ್ಮಿದೇವಿ ಗೋಪಿನಾಥ್, ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಆ.ನಾ. ವಿಜೇಂದ್ರ, ಸೇರಿದಂತೆ ಹಲವರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಜತೋತ್ಸವ ಸಮಿತಿ ಅಧ್ಯಕ್ಷ ವಸಂತಕುಮಾರ್ ಹೋಬ್ಳಿದಾರ್ ವಹಿಸಿದ್ದರು.

Leave a Reply

Your email address will not be published. Required fields are marked *