ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಪ್ರೋತ್ಸಾಹಿಸಲು ಆರಂಭಿಸಲಾಗಿರುವ ‘ಅರಿವು’ ಕೇಂದ್ರಗಳು ಉತ್ತಮವಾಗಿ ನಡೆಯುತ್ತಿದ್ದು ಗ್ರಾಮಗಳ ಪ್ರತಿ ನಾಗರೀಕರು ಸಹ ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ಇವರ ಸಹಯೋಗದಲ್ಲಿ ಶುಕ್ರವಾರ ಜಿ.ಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಚಿಣ್ಣರ ಚೆಲುವು-ಬೇಸಿಗೆ ಸಡಗರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾ.ಪಂ ವ್ಯಾಪ್ತಿಯ ಅರಿವು ಕೇಂದ್ರಗಳಲ್ಲಿ ನಡೆದ ಚಿಣ್ಣರ ಚೆಲುವು-ಬೇಸಿಗೆ ಸಡಗರ ಶಿಬಿರವು ನಾಲ್ಕು ವಾರಗಳ ಕಾಲ ಅತ್ಯುತ್ತಮವಾಗಿ ನಡೆದಿದ್ದು, ಉತ್ತಮವಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿ ಯಶಸ್ವಿಗೊಳಿಸಿದ ಗ್ರಾ.ಪಂ ಅಧಿಕಾರಿ, ಸಿಬ್ಬಂದಿಗಳು, ತಾ.ಪಂ ಇಓ, ಸಹಾಯಕ ನಿರ್ದೇಶಕರು, ಗ್ರಂಥಾಲಯ ಮೇಲ್ವಿಚಾರಕರಿಗೆ ಧನ್ಯವಾದಗಳು ಎಂದು ಅಭಿನಂದಿಸಿದರು.


ಅರಿವು ಕೇಂದ್ರಗಳಲ್ಲಿ ಅಗತ್ಯವಾಗಿ ಬೇಕಿರುವ ಮೂಲಭೂತ ಸೌಕರ್ಯಗಳ ಕುರಿತು ಗ್ರಂಥಾಲಯ ಮೇಲ್ವಿಚಾರಕರು, ವಿದ್ಯಾರ್ಥಿಗಳು, ಇತರೆ ಅಧಿಕಾರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸವಿವರವಾಗಿ ತಿಳಿಸಿದ್ದು, ಅರಿವು ಕೇಂದ್ರಗಳಲ್ಲಿ ಮಕ್ಕಳಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವೆಡೆ ಹಾಗೂ ಇವುಗಳ ಅಭಿವೃದ್ಧಿ ಕಡೆ ಗಮನ ಹರಿಸುತ್ತೇವೆ ಎಂದರು.
ಅರಿವು ಕೇಂದ್ರ ಕೇವಲ ಮಕ್ಕಳಿಗೆ ಮಾತ್ರವಲ್ಲ, ಗ್ರಾಮಗಳ ಪ್ರತಿ ನಾಗರೀಕರು ದಿನ ಪತ್ರಿಕೆ, ಇತರೆ ಪುಸ್ತಕಗಳನ್ನು ಓದುವ ಮೂಲಕ ಮಾಹಿತಿ ಪಡೆಯಲು ಒಂದು ಉತ್ತಮ ಸ್ಥಳವಾಗಿದೆ. ಓದುವ ಹವ್ಯಾಸ ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದ್ದು ಮಕ್ಕಳು, ನಾಗರೀಕರ ಸಬಲೀಕರಣಕ್ಕೆ ಈ ಓದು ಸಹಕಾರ ನೀಡಲಿದೆ.

80 ವರ್ಷ ಮೀರಿದ ವೃದ್ದರೂ ಅರಿವು ಕೇಂದ್ರಗಳಿಗೆ ಭೇಟಿ ನೀಡಿ, ದಿನಪತ್ರಿಕೆಗಳು, ಇತರೆ ಪುಸ್ತಕಗಳನ್ನು ಓದುತ್ತಿರುವುದನ್ನು ಕಾಣುತ್ತಿದ್ದೇವೆ. ಮಕ್ಕಳ ಜೊತೆ ಪೋಷಕರೂ ಅರಿವು ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದರು.
ಅರಿವು ಕೇಂದ್ರಗಳಿಗೆ ಇನ್ನು ಮುಂದೆ ವೇಳಾಪಟ್ಟಿಯನ್ನು ನೀಡಲಾಗುವುದು. ಮಕ್ಕಳಿಗೆ ಪಠ್ಯೇತರ ಹಾಗೂ ವೈವಿಧ್ಯಮಯ ಚಟುವಟಿಕೆಗಳು ಇಷ್ಟವಾಗುತ್ತವೆ. ಈ ನಿಟ್ಟಿನಲ್ಲಿ ವೇಳಾಪಟ್ಟಿ ಸಿದ್ದಪಡಿಸಿ, ಪ್ರತಿದಿನ ವಿಭಿನ್ನ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಇಂತಹ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು.
ಇನ್ನು ಮುಂದೆ ವರ್ಷದಲ್ಲಿ ಎರಡು ಬಾರಿ ಅಂದರೆ ಬೇಸಿಗೆ ಮತ್ತು ದಸರಾ ರಜೆಯಲ್ಲೂ ಶಿಬಿರ ನಡೆಸಲು ಯೋಚಿಸಲಾಗುತ್ತಿದೆ. ಹಾಗೂ ಅರಿವು ಕೇಂದ್ರಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಉತ್ತೇಜಿಸಲು ವಾರಕ್ಕೊಮ್ಮೆ ಸರ್ಕಾರಿ ಶಾಲಾ ಶಿಕ್ಷಕರು ಭೇಟಿ ನೀಡುವಂತೆ ಆದೇಶಿಸಲಾಗುವುದು ಎಂದು ತಿಳಿಸಿದರು.


ವೈಯಕ್ತಿಕವಾಗಿ ನಾನು ಗ್ರಂಥಾಲಯವನ್ನು ಹೆಚ್ಚು ಬಳಕೆ ಮಾಡಿಕೊಂಡಿದ್ದೇನೆ. ಭಾರತೀಯ ಆಡಳಿತ ಸೇವೆ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುವ ವೇಳೆ ನಾನು ಸರ್ಕಾರಿ ಗ್ರಂಥಾಲಯವನ್ನು ಯಥೇಚ್ಚವಾಗಿ ಉಪಯೋಗ ಮಾಡಿಕೊಂಡಿದ್ದೇನೆ. ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಅಡಚಣೆಗಳಿಲ್ಲದೆ, ನೆಮ್ಮದಿಯಿಂದ ಓದಲು ಸಾಧ್ಯವಾಗುತ್ತದೆ.
ಈ ಬೇಸಿಗೆ ಶಿಬಿರದಲ್ಲಿ ಗ್ರಾ.ಪಂ ವ್ಯಾಪ್ತಿಯ ಯಾವುದೇ ವಿದ್ಯಾರ್ಥಿಗಳು, ರಜೆಗಾಗಿ ಬಂದಿರುವ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಪಠ್ಯೇತರ ಚಟುವಟಿಕೆಗಳು, ಸೃಜನಾತ್ಮಕತೆ ಉತ್ತೇಜಿಸುವ ಚಟುವಟಿಕೆಗಳನ್ನು ಹೆಚ್ಚಾಗಿ ಕೈಗೊಳ್ಳಲಾಗುತ್ತದೆ. ಗ್ರಾ.ಪಂ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಅಲ್ಲಿ ವಿಜೇತರಾದವರಿಗೆ ಇಂದು ಜಿಲ್ಲಾ ಪಂಚಾಯತ್‌ನಲ್ಲಿ ಜಿಲ್ಲಾ ಮಟ್ಟದ ಚೆಸ್, ಕೇರಂ, ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಆಯೋಜನೆ ಮಾಡಿದ ಅಧಿಕಾರಿ/ಸಿಬ್ಬಂದಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿ(ಆಡಳಿತ) ಸುಜಾತ, ಜಿ.ಪಂ ಉಪ ಕಾರ್ಯದರ್ಶಿ(ಅಭಿವೃದ್ದಿ) ಜಯಲಕ್ಷ್ಮಿ, ಯೋಜನಾ ನಿರ್ದೇಶಕಿ ನಂದಿನಿ, ಮುಖ್ಯ ಲೆಕ್ಕಾಧಿಕಾರಿ ರಮೇಶ್ ಸಹಾಯಕ ನಿರ್ದೇಶಕರಾದ ತಾರಾ ಎನ್. ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಇತರೆ ಅಧಿಕಾರಿಗಳು, ಗ್ರಂಥಾಲಯ ಮೇಲ್ವಿಚಾರಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *