ಶಿವಮೊಗ್ಗ: ಸಮಾಜದ ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂತೋಷ್ ಬಾಹೋಜಿ ಹೇಳಿದರು.


ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ರಾಜ್ಯಮಟ್ಟದ ಮುಕ್ತ ದಳಗಳ ರ‍್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಸಾಕಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ನಮ್ಮ ದಿನನಿತ್ಯದ ಜೀವನದಲ್ಲಿ ಪ್ರತಿಯೊಂದು ಕಾರ್ಯಕ್ಷೇತ್ರಗಳಲ್ಲಿ ಓಡಾಡುವಾಗ, ರಸ್ತೆ ದಾಟುವಾಗ, ವಾಹನ ಚಲಾಯಿಸುವಾಗ ರಸ್ತೆ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಪಾಲನೆ ಮಾಡಬೇಕು ಎಂದು ತಿಳಿಸಿದರು


ನಾನು ಸಹ ಬಾಲ್ಯದಲ್ಲಿ ಸ್ಕೌಟ್ ವಿದ್ಯಾರ್ಥಿಯಾಗಿ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ. ಸ್ಕೌಟ್ ಸಂಸ್ಥೆ ಒಂದು ಶಿಸ್ತುಬದ್ಧ ಹಾಗೂ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆಯಲ್ಲಿ ತೊಡಗಿಕೊಳ್ಳಬೇಕು ಎಂದರು.


ಡಿವೈಎಸ್ಪಿ ಬಾಬು ಅಂಜನಪ್ಪ ಮಾತನಾಡಿ ರಸ್ತೆ ಸುರಕ್ಷತೆ ಕಾರ್ಯಕ್ರಮಗಳು ಮಕ್ಕಳಿಗೆ ತಲುಪಬೇಕು. ಅದರಿಂದ ಅವರು ಪಾಲಕರರಿಗೆ ಮನವರಿಕೆ ಮಾಡುತ್ತಾರೆ. ಪ್ರತಿಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದರ ಮುಖಾಂತರ ಅಪಘಾತಗಳನ್ನು ತಪ್ಪಿಸುವುದರ ಜತೆಗೆ ಪ್ರಾಣಗಳನ್ನು ಉಳಿಸಿಕೊಳ್ಳಬಹುದು. ಪರವಾನಿಗೆ ಇಲ್ಲದೆ ಗಾಡಿಗಳನ್ನು ಯಾರೂ ಓಡಿಸಬಾರದು. ಇದರಿಂದ ದಂಡದ ಜೊತೆಗೆ ಶಿಕ್ಷೆಯು ಸಹ ಆಗುತ್ತದೆ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ರಾಜ್ಯ ಮಟ್ಟದ ರ‍್ಯಾಲಿಗಳಲ್ಲಿ ಮಕ್ಕಳಿಗೆ ಅಗತ್ಯವಾಗಿ ಬೇಕಾದಂತಹ ಕಾರ್ಯಕ್ರಮಗಳ ಜತೆಗೆ ಇಂತಹ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದೇವೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಎಸ್.ಗುಂಡಪಲ್ಲಿ ಮಾತನಾಡಿ, ಸ್ಕೌಟ್ ಅಂಡ್ ಗೈಡ್ ಸಂಸ್ಥೆ ನಮ್ಮ ಶಿಕ್ಷಣ ಇಲಾಖೆಯ ಒಂದು ಅವಿಭಾಜ್ಯ ಅಂಗ. ಇದರ ಮುಖಾಂತರ ಶಾಲೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗುವ ಜತೆಗೆ ವಿದ್ಯಾರ್ಥಿಗಳು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ ಎಂದರು.


ಹನ್ನೊಂದು ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಸ್ಕೌಟ್, ಗೈಡ್, ಕಬ್, ಬುಲ್ ಬುಲ್, ರೋವರ್ಸ್, ರೆಂಜರ್ಸ್ ವಿದ್ಯಾರ್ಥಿಗಳು ಪಥ ಸಂಚಲನ ಮಾಡುವುದರ ಮುಖಾಂತರ ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸಿದರು.
ರಾಜ್ಯ ಸಂಸ್ಥೆಯ ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಆಯುಕ ಎಸ್.ಜಿ.ಆನಂದ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಕೆ.ರವಿ, ವೈ.ಆರ್.ವೀರೇಶಪ್ಪ, ಚೂಡಾಮಣಿ ಪವಾರ್, ಶಿವಶಂಕರ್, ಆಯೋಜಕ ರಾಜೇಶ್ ಅವಲಕ್ಕಿ, ನಿರ್ದೇಶಕ ಕೆ.ರವಿ, ಕಾರ್ಯದರ್ಶಿ ಚಂದ್ರಶೇಖರಯ್ಯ, ಸಿಎಂ.ಪರಮೇಶ್ವರಯ್ಯ ಉಪಸಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ