ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಶೇ. 85ರಷ್ಟು ಲೂಟಿ ಮಾಡಿದ್ದೂ ಅಲ್ಲದೆ, ಪ್ರಜಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿದರು.

ರಾಜೀವ್‌ಗಾಂಧಿ ಯೋಜನೆಯ ವಸತಿ ಮನೆಗಳ ಹಗರಣ ಹಾಗೂ ಮುಸಲ್ಮಾನರಿಗೆ ಮಿತಿಮೀರಿದ ಮೀಸಲಾತಿ ಕೊಡುತ್ತಿರುವ ರಾಜ್ಯ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಜಿಲ್ಲಾ ಪಂಚಾಯತ್ ಕಛೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

ಕಾಂಗ್ರೆಸ್ ಎನ್ನುವುದು ಮುಸಲ್ಮಾನರ ತುಷ್ಠೀಕರಣಕ್ಕಾಗಿಯೇ ಇರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ಅಲ್ಪಸಂಖ್ಯಾತರಿಗೋಸ್ಕರ ಇರುವುದೇ ಕಾಂಗ್ರೆಸ್ ಸರ್ಕಾರ. ಬಡವರ ಪರವಾಗಿ ಇರುವಂತಹದ್ದು ಬಿಜೆಪಿ ಪಕ್ಷ. ವಸತಿ ಹಂಚಿಕೆಯಲ್ಲಿ ಹಣ ತೆಗೆದುಕೊಂಡು ವಸತಿ ನೀಡುತ್ತಿರುವುದು ನೀಚ ಸರ್ಕಾರವಾಗಿದೆ. ರಾಜೀವ್‌ಗಾಂಧಿ ವಸತಿ ನಿಗಮದ ಹೆಸರಿಟ್ಟುಕೊಂಡು ವಸತಿ ಹಂಚಿಕೆಯಲ್ಲೂ ಭ್ರಷ್ಟಾಚಾರ ಮಾಡಿ, ರಾಜೀವ್‌ಗಾಂಧಿಯವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ದೂರಿದರು.

ಬಿಜೆಪಿ ಸರ್ಕಾರವಿದ್ದಾಗ ಭಾಗ್ಯಲಕ್ಷ್ಮೀ ಬಾಂಡ್, ಸೈಕಲ್ ಕೊಟ್ಟಿದ್ದೆವು. ಅದನ್ನು ಬರೀ ಹಿಂದೂಗಳಿಗೆ ಮಾತ್ರ ಕೊಟ್ಟಿಲ್ಲ. ಎಲ್ಲಾ ಜತಿಯವರಿಗೂ ನೀಡಿದ್ದೇವೆ. ಪ್ರಜಪ್ರಭುತ್ವ ವ್ಯವಸ್ಥೆಯ ಸರ್ಕಾರ ಬಿಜೆಪಿಯದ್ದಾಗಿದ್ದು, ಕೂಲಿ ಕಾರ್ಮಿಕರ, ರೈತರ ಹಾಗೂ ಬಡವರ ಪಕ್ಷ ಬಿಜೆಪಿ ಎಂದರು.

ಸರ್ಕಾರದಲ್ಲಿ ಸಾವಿರಾರು ಕೋಟಿ ರೂ. ಹಣ ಲೂಟಿಯಾಗಿದೆ. ಎಲ್ಲಾ ಇಲಾಖೆಗಳಲ್ಲೂ ಹಾಗೂ ನಿಗಮಗಳಲ್ಲೂ ಭ್ರಷ್ಟಾಚಾರ ಆಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹ ಸರಿಯಾಗಿ ತನಿಖೆ ನಡೆಯದೇ ಇನ್ನೂ ನ್ಯಾಯ ಸಿಕ್ಕಿಲ್ಲ. ಅವರ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದ್ದರೂ ಇದೂವರೆಗೂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರಕ್ಕೆ ನೈತಿಕತೆ ಇದೆ ಎನ್ನುವುದಾದರೆ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಿ, ಚುನಾವಣೆ ಎದುರಿಸಬೇಕು ಎಂದು ತಾಕೀತು ಮಾಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಮಾಜಿ ಶಾಸಕರಾದ ಕೆ.ಬಿ. ಅಶೋಕ್‌ನಾಯ್ಕ, ಕೆ.ಜಿ. ಕುಮಾರಸ್ವಾಮಿ, ಬಿಜೆಪಿ ನಗರಾಧ್ಯಕ್ಷ ಮೋಹನ್‌ರೆಡ್ಡಿ, ಪ್ರಮುಖರಾದ ಎಸ್. ಜನೇಶ್ವರ್, ಸುನೀತಾ ಅಣ್ಣಪ್ಪ, ರಮೇಶ್, ನಾಗರಾಜ್, ಶಂಕರ್‌ಗನ್ನಿ, ಸುರೇಖಾ ಮುರಳೀಧರ್, ಹರಿಕೃಷ್ಣ, ಶಿವಕುಮಾರ್, ಪ್ರಭು, ರಾಹುಲ್‌ಬಿದಿರೆ ಶ್ರೀನಾಗ್ ದಿನೇಶ್ ಆಚಾರ್ಯ ಇನ್ನಿತರರು ಭಾಗವಹಿಸಿದ್ದರು.