12 ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕುಡೊAಕುಗಳು, ಕಠೋರ ಜಾತಿ ಪದ್ದತಿ ಮತ್ತು ಮೌಢ್ಯತೆಯನ್ನು ತೊಡೆದುಹಾಕಲು ಹಾಗೂ ಕಾಯಕ ಸಂಸ್ಕೃತಿಯನ್ನು ಬಿತ್ತಲು ಹಡಪದ ಅಪ್ಪಣ್ಣ ಸೇರಿದಂತೆ ಬಸವಾದಿ ಶರಣರು ತಮ್ಮ ಜೀವನ ಮುಡಿಪಾಗಿಟ್ಟರು ಎಂದು ಪ್ರಿಯದರ್ಶಿನಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ವೀರೇಶ್ ಸ್ಮರಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮAದಿರದಲ್ಲಿ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಮಾತನಾಡಿದರು.
ಮಾಡುವ ಕಾಯಕದಲ್ಲಿ ಮೇಲೂ ಅಲ್ಲ. ಕೀಳೂ ಅಲ್ಲ. ತನು, ಮನ, ಧನವೆಂಬ ತ್ರಿಕರಣ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕವೆಂದು ಶಿವಶರಣ ಶ್ರೀ ಹಡದಪ್ಪ ಅಪ್ಪಣ್ಣ 12 ನೇ ಶತಮಾನದಲ್ಲಿ ಇಡೀ ಸಮಾಜಕ್ಕೆ ತಿಳಿಸಿದರು.


ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿಹಾಳ ಗ್ರಾಮದಲ್ಲಿ ಜನಿಸಿದ್ದಾರೆ ಎಂಬ ಪ್ರತೀತಿ ಇದೆ. ಇದು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರದಿAದ 6 ಕಿ.ಮೀ. ದೂರ ಇದೆ. ಅಪ್ಪಣ್ಣನವರು ಅಪಾರ ಭಕ್ತಿ, ಜ್ಞಾನವುಳ್ಳವರಾಗಿದ್ದರು. ಕಾಯಕ ಜೀವಿಗಳಾಗಿ ಕ್ಷೌರ ವೃತಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಕಾಯಕ ನಿಷ್ಠರಾದ ಶರಣ ಹಡಪದ ಅಪ್ಪಣ್ಣನವರು ಲಿಂಗಮ್ಮನವರನ್ನು ವಿವಾಹವಾದರು. ಶರಣೆ ಲಿಂಗಮ್ಮನವರು ಕೂಡ ಅಪಾರವಾದ ಜ್ಞಾನವನ್ನು ಹೊಂದಿದವರಾಗಿದ್ದರು. ಇವರಿಬ್ಬರೂ ಆಗಿನ ಕಾಲದ ಜಾತಿ ವ್ಯವಸ್ಥೆಯಲ್ಲಿ ಭೌತಿಕವಾಗಿ ಹಿಂದುಳಿದವರಾಗಿದ್ದು ಮಾನಸಿಕವಾಗಿ ಅತ್ಯಂತ ಸದೃಢ ಮನಸ್ಸಿನವರಾಗಿ ಮೇರು ಜ್ಞಾನವನ್ನು ಹೊಂದಿದ್ದ ಶರಣ ದಂಪತಿಗಳಾಗಿದ್ದರು. 12 ನೇ ಶತಮಾನದಲ್ಲಿ ಬಸವಣ್ಣನವರ ಬಗ್ಗೆ ತಿಳಿದುಕೊಂಡ ಈ ದಂಪತಿಗಳಿಬ್ಬರು ಸಂಗಮಕ್ಕೆ ಬಂದು ಬಸವಣ್ಣನವರನ್ನು ಕಂಡರು. ನಂತರ ಬಸವಣ್ಣನವರೊಡನೆ ಕಲ್ಯಾಣದಲ್ಲೇ ನೆಲೆಸಿದ ಅವರು ಶರಣರು ಕಲ್ಯಾಣಕ್ಕೆ ಬಂದರೆ ಜೀವ ಬಂದAತೆ ಎಂದು ನಂಬಿದ್ದರು.


ಅಪ್ಪಣ್ಣನವರಿಗೆ ಬಸವಣ್ಣನೇ ಗುರುವಾದನು, ಲಿಂಗವಾದನು, ಜಂಗಮವಾದನು, ಪ್ರಸಾದವಾದನು. ನಾನು ದೇಹವಾದರೆ, ಬಸವಣ್ಣನೇ ಪ್ರಾಣವಾದನು ಎಂದು ಬಸವಪ್ರಿಯರಾದರು. ಕ್ಷೌರಿಕರಾದ ಹಡಪದ ಅಪ್ಪಣ್ಣನವರ ಮುಖ ನೋಡಿದರೆ ಅಪಶಕುನ ಎಂದು ಕಲ್ಯಾಣದ ಮೇಲ್ಜಾತಿಗಳು ಬೊಬ್ಬಿಡುತ್ತಿದ್ದರು. ಹೀಗಿರುವಾಗ ಬಸವಣ್ಣನವರು ಅಪ್ಪಣ್ಣನವರು ಆಪ್ತಕಾರ್ಯದರ್ಶಿ ಹಾಗೂ ತಮ್ಮ ಜೀವದ ಒಡನಾಡಿಯಾಗಿ ಮಾಡಿಕೊಂಡರು. ಆ ಮೂಲಕ ಮೇಲ್ಜಾತಿಯವರ ಮೌಢ್ಯತೆಯನ್ನು ಬಸವಣ್ಣ ಧಿಕ್ಕರಿಸಿ ತಮ್ಮನ್ನು ಭೇಟಿಯಾಗಲು ಬರುವ ಯಾರೇ ಆಗಲಿ, ಅವರು ಮೊದಲು ಹಡಪದ ಅಪ್ಪಣ್ಣನವರನ್ನು ಭೇಟಿಯಾಗಿಯೇ ಬರಬೇಕೇಂಬ ನಿಯಮ ಮಾಡಿದರು.

ಅದರಂತೆ ಎಲ್ಲರೂ ಅಪ್ಪಣ್ಣನವರನ್ನು ಭೇಟಿಯಾಗಿ ಬರುತ್ತಿದ್ದರು. ಜಾತೀಯತೆ ಮೂಢನಂಬಿಕೆ ರಹಿತ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಹಡಪದ ಅಪ್ಪಣ್ಣನವರು ಸದಾ ಬಸವಣ್ಣನವರ ಬಲಗೈ ಬಂಟರಾಗಿದ್ದರು ಎಂದರು.
ಪ್ರತಿ ಕ್ಷಣದಲ್ಲೂ ಬಸವಣ್ಣನವರಿಗೆ ಪ್ರತಿಯೊಂದು ಮಾಹಿತಿಯನ್ನೂ ಮೊದಲು ತಿಳಿಸುತ್ತಿದ್ದರು. ಕಲ್ಯಾಣಕ್ಕೆ ಬರುವ ಶರಣರ ಸಮೂಹಕ್ಕೆ ತಾಂಬೂಲ ಕೊಟ್ಟು ಸ್ವಾಗತಿಸುತ್ತಿದ್ದರು. ಕ್ಷಣವಾದರೂ ಬಸವಣ್ಣನವರನ್ನು ಬಿಟ್ಟಿರಲಾರದ ಜೀವ ಅಪ್ಪಣ್ಣನವರದ್ದು.
ಸದಾ ಬಸವಣ್ಣನವರ ಆಪ್ತ ಒಡನಾಡಿಗಳಾಗಿ ಅನುದಿನ ಅನುಕ್ಷಣವೂ ಅಣ್ಣನವರ ದಿವ್ಯ ಸಾನಿಧ್ಯದಲ್ಲಿ ಇರುತ್ತಿದ್ದ ಅಪ್ಪಣ್ಣನವರು ಎಲ್ಲಾ ಶರಣರ ಮೆಚ್ಚುಗೆಗೆ ಪಾತ್ರರಾಗಿ ನಿಜಸುಖಿ ಅಪ್ಪಣ್ಣ ಎಂಬ ಬಿರುದನ್ನು ಪಡೆದರು. ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರೂ ಕೂಡ ಮಹಾಜ್ಞಾನಿಗಳಾಗಿದ್ದರು. ಇವರು ನಿಜಮುಕ್ತ ಲಿಂಗಮ್ಮನವರು ಎಂದೇ ಪ್ರಖ್ಯಾತಿ ಪಡೆದರು ಎಂದು ತಿಳಿಸಿದರು.


ಸೂಡಾ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ಮಾತನಾಡಿ, ಹಡಪದ ಅಪ್ಪಣ್ಣರಂತಹ ಮಹಾನೀಯರ ಇತಿಹಾಸವನ್ನು ಯುವಜನತೆ ಸೇರಿದಂತೆ ನಾವೆಲ್ಲ ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಇಂತಹ ಮಹನೀಯರ ಜಯಂತಿ ಆಚರಣೆ ಮಾಡುತ್ತಿದೆ. ಈ ಮಹನೀಯರು ಶತಮಾನಗಳಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಕ್ಷೌರಿಕರ ಮುಖ ನೋಡಬಾರದೆಂಬ ಮೌಢ್ಯತಿಯಿಂದ ಸಮಾಜವನ್ನು ಹೊರತರಲು 12 ನೇ ಶತಮಾನದ ಬಸವಣ್ಣ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನನ್ನು ನೇಮಿಸಿ, ಅವರನ್ನು ಮೊದಲು ಭೇಟಿಯಾಗಿ ನಂತರ ಬಸವಣ್ಣನವರನ್ನು ಭೇಟಿಯಾಗುವಂತೆ ಮಾಡಿದರು. ಬಸವಣ್ಣ ಮತ್ತು ಅಪ್ಪಣ್ಣ ತುಂಬಾ ಆತ್ಮೀಯರಾಗಿದ್ದರು. ಹಡಪದ ಅಪ್ಪಣ್ಣ ಓರ್ವ ಜ್ಞಾನಿ. ಕ್ರಾಂತಿಕಾರಿ. ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆ ಕೆಲಸ ಮಾಡಿದ್ದಾರೆ. ಅವರ ತತ್ವ ಮತ್ತು ವಿಚಾರಗಳನ್ನು ನಾವು ಅನುಸರಿಸಿ ಅವರ ದಾರಿಯಲ್ಲಿ ಸಾಗಬೇಕಿದೆ ಎಂದರು.


ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ ಮಾತನಾಡಿ, ಅಪ್ಪಣ್ಣನವರು ಶರಣರಲ್ಲಿ ಅತ್ಯಂತ ಮಾದರಿಯಾಗಿ ಬದುಕಿ ಬಾಳಿದವರು. ತಮ್ಮ ಜೀವತ ಕಾಲದಲ್ಲಿ ಬಸವಣ್ಣನವರಿಗೆ ಅತ್ಯಂತ ಆತ್ಮೀಯರಾಗಿದ್ದು ಬಸವಣ್ಣನವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ತಮ್ಮ ಪ್ರಾಣ ತ್ಯಾಗ ಮಾಡಿದರು. ಅಂದು ಸಮಾಜದಲ್ಲಿದ್ದ ಮೂಢನಂಬಿಕೆಯನ್ನು ಹೋಗಲಾಡಿಸಲು ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು.
ಕ್ಷೌರಿಕ ವೃತ್ತಿ ಒಂದು ಮಹಾವೃತ್ತಿಯಾಗಿದ್ದು ನಮ್ಮನ್ನೆಲ್ಲ ಸ್ವಚ್ಚಗೊಳಿಸುವ ಕಾಯಕವಾಗಿದೆ. ಅಪ್ಪಣ್ಣನವರ ಪತ್ನಿ ನಿಂಗಮ್ಮ ಸಹ ನಿಜಶರಣೆಯಾಗಿದ್ದರು. ಯಾವುದೇ ಶರಣರನ್ನು ಜಾತಿಗಳಿಗೆ ಸೀಮಿತಗೊಳಿಸಬಾರದು. ನಾವೆಲ್ಲ ಅಪ್ಪಣ್ಣನವರ ವಚನಗಳನ್ನು ಓದಿ, ಅದರ ಆಶಯದಂತೆ ಮುಂದೆ ಸಾಗಬೇಕು ಎಂದ ಅವರು ರಾಜ್ಯ ಸರ್ಕಾರ ಹಿಂದುಳಿದ, ಬಡ ವರ್ಗದ ಏಳ್ಗೆಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದು, ವಿಶ್ವಸಂಸ್ಥೆ ಸಹ ಈ ಯೋಜನೆಗಳನ್ನು ಶ್ಲಾಘಿಸಿದೆ. ಶಕ್ತಿ ಯೋಜನೆಯಡಿ ಈ ವರೆಗೆ 500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಎಲ್ಲರೂ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಬೇಕೆಂದರು.


ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಎಂ.ಮಲ್ಲೇಶಪ್ಪ, ತಾಲ್ಲೂಕು ಅಧ್ಯಕ್ಷರಾದ ಎಂ.ಷಣ್ಮುಖಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಉಮೇಶ್ ಹೆಚ್, ಇತರೆ ಅಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.