ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗುವ ಪ್ರಸಕ್ತ ಸಾಲಿನ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಆಗಸ್ಟ್‌ರಂದು ಬೆಳಿಗ್ಗೆ 9ಗಂಟೆಗೆ ಸರಿಯಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯೋತ್ಸವದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಗರದ ಡಿ.ಎ.ಆರ್.ಮೈದಾನದಲ್ಲಿ ಆಚರಿಸಲಾಗುತ್ತಿದ್ದ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಥಳೀಯ ಜನರ ಅಪೇಕ್ಷೆಯಂತೆ ಸಾರ್ವಜನಿಕರ ಒತ್ತಾಯದ ಮೇರೆಗೆ 12ವರ್ಷಗಳ ನಂತರ ನೆಹರೂ ಸ್ಟೇಡಿಯಂನಲ್ಲಿ ಆಚರಿಸಲು ನಿರ್ಣಯಿಸಲಾಗಿದೆ ಎಂದ ಅವರು ಸ್ಟೇಡಿಯಂನಲ್ಲಿನ ಸಿಂಥೆಟಿಕ್‌ಟ್ರಾಕ್ ಹಾನಿಗೊಳಗಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಈ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದವರು ನುಡಿದರು.
ಸ್ವಾತಂತ್ರ ದಿನಾಚರಣೆಯ ಮುನ್ನಾ ದಿನದಂದು ನಗರದ ಎಲ್ಲಾ ಕಚೇರಿಗಳ ಮುಖ್ಯಸ್ಥರು ತಮ್ಮ ಕಚೇರಿ ಕಟ್ಟಡಗಳನ್ನು ನಗರದ ಪ್ರಮುಖ ವರ್ತುಲಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದ ಅವರು, ಸ್ಥಳೀಯ ಸರ್ಕಾರೇತರ ಸಂಘ-ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳೂ ಸಹ ಈ ಸಂಭ್ರಮಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಸ್ವಾತಂತ್ರ್ಯೋತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸಲು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ನೀಡಲಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಲಾಗಿರುವ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆಯೂ ಸೂಚಿಸಲಾಗಿದೆ. ಈ ಅವಧಿಯಲ್ಲಿ ಸಂಭ್ರಮಾಚರಣೆಗೆ ಯಾವುದೇ ಚ್ಯುತಿಯಾಗದಂತೆ ಎಚ್ಚರಿಕೆ ವಹಿಸುವಂತೆಯೂ ಸೂಚನೆ ನೀಡಲಾಗಿದೆ ಎಂದವರು ನುಡಿದರು.
ಆಯೋಜನೆಯ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು ವೇದಿಕೆ ಅಲಂಕಾರ, ರಾಷ್ಟ್ರಗೀತೆ, ನಾಡಗೀತೆ, ಪೆರೇಡ್‌ಸಿದ್ಧತೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮುಂತಾದ ಎಲ್ಲಾ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಪೆರೇಢ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಮರ್ಪಕ ತರಬೇತಿ ನೀಡಬೇಕು. ಮಕ್ಕಳು ಉತ್ತಮ ಶಾಲಾ ಸಮವಸ್ತ್ರದೊಂದಿಗೆ ಶಿಸ್ತುಬದ್ಧವಾಗಿ ಪೆರೇಡ್‌ನಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದವರು ನುಡಿದರು.
ನೆಹರೂ ಕ್ರೀಡಾಂಗಣದಲ್ಲಿ ಮತ್ತು ಅಂದು ಸಂಜೆ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಸಾಂಸ್ಕ್ರೃತಿಕ ಕಾರ್ಯಕ್ರಮಗಳನ್ನೂ ಸಹ ವ್ಯವಸ್ಥಿತವಾಗಿ ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಸ್ವಾತಂತ್ರ್ಯ ಸೇನಾನಿಗಳನ್ನು ಗೌರವಯುತವಾಗಿ ಆಹ್ವಾನಿಸಿ, ಕಾರ್ಯಕ್ರಮದ ನಂತರ ಅವರನ್ನು ಬೀಳ್ಕೊಡುವ ಬಗ್ಗೆಯೂ ಅಧಿಕಾರಿಗಳು ವಿಶೇಷ ಗಮನಹರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ತಹಶೀಲ್ದಾರ್‌ರಾಜೀವ್‌ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.