ಶಿವಮೊಗ್ಗ ಲೋಕಸಭಾ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರವರು ದೆಹಲಿಯಲ್ಲಿ ಶ್ರೀ ಅಮಿತ್ ಷಾ ಜೀಯವರನ್ನು ಭೇಟಿ ಮಾಡಿ ಅತೀ ಹೆಚ್ಚು ವರ್ಷಗಳ ಕಾಲ ಭಾರತ ದೇಶದ ಗೃಹ ಸಚಿವರಾಗಿ ದಕ್ಷ ಮತ್ತು ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ತಾಲ್ಲೂಕು ತಮ್ಮಡಿಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು 22 ಎಕರೆ 19 ಗುಂಟೆ ಜಾಗವು ಮಂಜೂರಾಗಿದ್ದು, ಸದರಿ ಜಾಗದಲ್ಲಿ ಖಾಯಂ ಆಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದಲು ಅನುಕೂಲವಾಗುವಂತೆ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣ, ವಸತಿ ಗೃಹಗಳು, ಕಾಂಪೌಂಡ್ ನಿರ್ಮಾಣ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಸೂಕ್ತ ಅನುದಾನವನ್ನು ನೀಡುವಂತೆ ಕೋರಿಕೆ ಸಲ್ಲಿಸಿದರು.