ಶಿವಮೊಗ್ಗ: ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ತಲುಪುವ ಗುರಿಯತ್ತ ಭಾರತ ಸಾಗುತ್ತಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನೇತಾಜಿ ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್, ಮಹಾತ್ಮ ಗಾಂಧಿ ಸೇರಿದಂತೆ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯ ಗಳಿಸಲು ಬ್ರಿಟಿಷ್ ಆಡಳಿತಗಾರರ ವಿರುದ್ಧ ನಿರಂತರವಾಗಿ ಹೋರಾಡಿದರು. ನಾವೆಲ್ಲರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಗೌರವಿಸಬೇಕು ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯಿಂದ ಭಾರತದಲ್ಲಿ ಅನೇಕ ದೊಡ್ಡ ಮತ್ತು ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಉತ್ಪಾದನೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಹಸಿರು ಕ್ರಾಂತಿ ಮತ್ತು ಇತರ ಕೃಷಿ ತಂತ್ರಜ್ಞಾನಗಳ ಅಳವಡಿಕೆಯಿಂದ ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತ್ವರಿತ ಬೆಳವಣಿಗೆಯು ಭಾರತವನ್ನು ಜಾಗತಿಕ ವೇದಿಕೆಗೆ ಏರಿಸಿದೆ. ಸರಕು ಮತ್ತು ಸೇವಾ ತೆರಿಗೆ, ಆದಾಯ ತೆರಿಗೆ ಕಾಯ್ದೆ, ಡಿಜಿಟಲ್ ಕ್ರಾಂತಿ, ಏಕೀಕೃತ ಪಾವತಿ ಇಂಟರ್‌ಫೇಸ್, ಮೂಲಸೌಕರ್ಯ ಅಭಿವೃದ್ಧಿ, ಪರಮಾಣು ಶಕ್ತಿ, ಬಾಹ್ಯಾಕಾಶ ಪರಿಶೋಧನೆ, ಜೈವಿಕ ತಂತ್ರಜ್ಞಾನ, ರಕ್ಷಣಾ ಮೂಲಸೌಕರ್ಯ, ಸಾಮಾಜಿಕ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಆರ್ಥಿಕ ಸುಧಾರಣೆಗಳ ನೀತಿಯಿಂದ ಭಾರತದ ಆರ್ಥಿಕತೆಯು ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಿದೆ. ಪ್ರಸಕ್ತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಿಂದ 2027ಕ್ಕೆ 5 ಟ್ರಿಲಿಯನ್ ಆರ್ಥಿಕತೆ ತಲುಪುವ ಗುರಿ ಇಟ್ಟುಕೊಳ್ಳುವುದರ ಮೂಲಕ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಎಂ.ಅಂಗಡಿ, ಪ್ರದೀಪ್ ವಿ ಎಲಿ, ವಿ.ಕೆ.ಜೈನ್, ಎಸ್.ಎಸ್.ಉದಯ್‌ಕುಮಾರ್, ಎಸ್.ಪಿ.ಶಂಕರ್, ಬಿ.ವಿ.ಲಕ್ಷ್ಮೀ ಗೋಪಿನಾಥ್, ಸಹನಾ ಸುಭಾಷ್, ಕೆ.ಬಿ.ಶಿವಕುಮಾರ್, ಬಿ.ಮಂಜೇಗೌಡ, ರವಿಪ್ರಕಾಶ್ ಜನ್ನಿ, ಮಾಜಿ ಅಧ್ಯಕ್ಷರಾದ ಡಿ.ಎಸ್.ಅರುಣ್, ಕೆ.ವಿ.ವಸಂತ್ ಕುಮಾರ್, ಡಿ.ಎಂ.ಶಂಕ್ರಪ್ಪ, ಜೆ.ಆರ್.ವಾಸುದೇವ್, ಜಿ.ಎನ್.ಪ್ರಕಾಶ್, ಡಿ.ಎಸ್.ನಟರಾಜ್, ದೇವರಾಜ್, ಪ್ರಶಾಂತ್ ಶಾಸ್ತ್ರಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಕಮಲಾಕ್ಷರಪ್ಪ, ಸಿಬ್ಬಂದಿ ಚೆನ್ನವೀರಪ್ಪ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಭಾಗವಹಿಸಿದ್ದರು.