ಮುಂಬರುವ ಈದ್ ಮಿಲಾದ್ ಹಾಗೂ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶ್ರಿ ಮಿಥುನ್ ಕುಮಾರ್ ಜಿ.ಕೆ.ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶಿವಮೊಗ್ಗ ನಗರದ ಗಾಂಧಿ ಬಜಾರ್ ಸುನ್ನಿ ಜಾಮಿಯಾ ಮಸೀದಿ ಯಲ್ಲಿ ಶಾಂತಿ ಸಭೆಯನ್ನು ಆಯೋಜಿಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
1) ಇದೇ ಪವಿತ್ರವಾದ ಸ್ಥಳದಲ್ಲಿ, ಮೂರನೇ ವರ್ಷ ಈದ್ ಮಿಲಾದ್ ಸಂಬಂಧ ಸಭೆ ನಡೆಸುತ್ತಿರುವುದು ತುಂಬಾ ಖುಷಿಯ ವಿಚಾರವಾಗಿರುತ್ತದೆ. ಈ ವರ್ಷ ಪ್ರವಾದಿ ಮೊಹಮ್ಮದ್ ರವರ 1500 ಹುಟ್ಟು ಹಬ್ಬವನ್ನು ಆಚರಣೆ ಮಾಡಲು ಸದಾವಕಾಶ ಬಂದಿರುತ್ತದೆ ಹಾಗೆಯೇ ಗಣಪತಿ ಹಬ್ಬ ಜೊತೆ ಜೊತೆಗೆ ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಲು ಅವಕಾಶ ಸಿಕ್ಕಿರುವುದು ಸಹಾ ಒಂದು ವಿಶೇಷವಾದ ಸಂದರ್ಭವಾಗಿರುತ್ತದೆ.
2) ಪ್ರವಾದಿ ಮೊಹಮ್ಮದ್ ರವರ ಮಾತಿನ ರೀತಿ ನಮ್ಮ ಸಂಬಂಧಗಳನ್ನು ನಾವು ಸರಿ ಪಡಿಸಿಕೊಳ್ಳಬೇಕು. ಎಲ್ಲರ ಜೊತೆಗೆ ನಾವು ಸಂಯಮದಿಂದ ಇರಬೇಕು, ಮನೆಯವರು, ಮಕ್ಕಳು, ಕುಟುಂಬಸ್ಥರು, ಪೋಷಕರು, ನೆರೆ ಹೊರೆಯವರು, ಅನ್ಯ ಧರ್ಮೀಯರೊಂದಿಗೆ ನಾವು ಒಳ್ಳೆಯ ಸಂಬಂಧ ಹೊಂದಿರಬೇಕು. ಇದನ್ನು ಯಥಾವತ್ತಾಗಿ ಪಾಲನೆ ಮಾಡುವ ಅವಕಾಶ ಈ ವರ್ಷವೂ ಸಹಾ ನಮಗೆ ಒದಗಿ ಬಂದಿರುತ್ತದೆ.
3) ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಕಡೆ ಈದ್ ಮಿಲಾದ್ ಮೆರವಣಿಗೆ ಹಾಗೂ ಗಣಪತಿ ವಿಸರ್ಜನಾ ಮೆರವಣಿಗೆಗಳು ಒಂದೇ ಬಾರಿ ನಡೆಯುತ್ತವೆ. ಮೆರವಣಿಗೆಗೆ ಹೆಚ್ಚಿನ ಜನ ಸಮೂಹ ಸೇರಲಿರುವ ಹಿನ್ನೆಲೆಯಲ್ಲಿ, ಎರಡೂ ಕಡೆಯವರೊಂದಿಗೆ ಮಾತನಾಡಿ ಗಣೇಶ ಹಬ್ಬದ ಮೆರವಣಿಗೆ / ಈದ್ ಮಿಲಾದ್ ಮೆರವಣಿಗೆ ಈ ಎರಡರಲ್ಲಿ ಒಂದನ್ನು ಬೇರೊಂದು ದಿನಕ್ಕೆ ಮುಂದೂಡಲಾಗಿರುತ್ತದೆ.
4) ತುಂಬಾ ಮುಖ್ಯವಾದ ವಿಚಾರವೇನೆಂದರೆ ನಾವು ಹಬ್ಬವನ್ನು ಹೇಗೆ ವಿಜೃಂಭಣೆಯಿಂದ ಆಚರಣೆ ಮಾಡುತ್ತೇವೆಂಬ ಬಗ್ಗೆ ಗಮನ ನೀಡಬೇಕು. ಬೇರೆಯೊಬ್ಬರು ಮಾಡುವ ಆಚರಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಒಂದು ಸಮಾಜದಲ್ಲಿ ಇರುವಾಗ ಎಲ್ಲರೂ ಸೇರಿ ಜೊತೆ ಜೊತೆಯಾಗಿ ಮುಂದೆ ಸಾಗಬೇಕು. ಆಗ ಮಾತ್ರ ಸಾಮರಸ್ಯ ಸಾಧ್ಯವಿರುತ್ತದೆ.
5) ಈ ವರ್ಷದ ಸನ್ನಿವೇಶವನ್ನು ನೋಡಲಾಗಿ ಸಮಾಜಕ್ಕೆ ಒಳ್ಳೆದಾಗುವುದಾದರೆ ಹಾಗೂ ಶಾಂತಿ ಸುವ್ಯವಸ್ಥೆಯ ಹಿತ ದೃಷ್ಟಿಯಿಂದ ನಾವೆಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಮುಂದೆ ಸಾಗೋಣ. ಶಿವಮೊಗ್ಗ ಜನತೆಯು ತುಂಬಾ ಪ್ರಜ್ಞಾವಂತ ಪ್ರಜೆಗಳು. ಆದ್ದರಿಂದ ನಾವು ನಮ್ಮ ಜವಾಬ್ದಾರಿಗಳನ್ನು ಅರಿತು ನಡೆಯೋಣ.
6) ಬೇರೆ ಯಾವುದೇ ಒಂದು ಸ್ಥಳದಲ್ಲಿ ಯಾವುದೇ ಘಟನೆಗಳು ನಡೆದಾಗ, ಅದನ್ನು ಮತ್ತೆಲ್ಲೋ ಜರುಗಿದೆ ಎಂದು ಬಿಂಬಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಹಾಗೂ ಇತರೆ ಸಂವಹನ ಮಾದ್ಯಮಗಳಲ್ಲಿ ಬರುವ ಎಲ್ಲಾ ವಿಚಾರಗಳನ್ನು ಏಕಾ ಏಕಿ ನಂಬ ಬೇಡಿ, ಅದರ ಸತ್ಯಾ ಸತ್ಯತೆಯನ್ನು ಅರಿಯುವ ಮುನ್ನ ಇತರರಿಗೆ ಶೇರ್ / ಫಾರ್ ವರ್ಡ್ ಮಾಡಬೇಡಿ. ಯಾರೋ ಕಿಡಿಗೇಡಿಗಳು ತಪ್ಪಾದ ವಿಚಾರವನ್ನು ಕಡಿಮೆ ಸಮಯದಲ್ಲಿ ಹೆಚ್ಚಿನ ಜನರಿಗೆ ಶೇರ್ ಮಾಡಿ, ಕಿಡಿಗೇಡಿತನ ಮಾಡುತ್ತಾರೆ. ಆದ್ದರಿಂದ ಸತ್ಯಾಸತ್ಯತೆಯನ್ನು ತಿಳಿದು ವ್ಯವಹರಿಸೋಣ. ನಿಮ್ಮೊಂದಿಗೆ ಪೊಲೀಸ್ ಇಲಾಖೆಯು ಸದಾ ಕಾಲ ಇರಲಿದೆ.
7) ಬೇರೊಬ್ಬರು ಹಾಗೆ ಹೀಗೆ ಎಂದು ತೀರ್ಮಾನ ಮಾಡುವುದು ಬೇಡ. ಪ್ರತಿ ಹಬ್ಬ, ಪ್ರತಿ ಧರ್ಮ ಹಾಗೂ ಪ್ರತಿಯೊಂದು ಆಚರಣೆಯು ಶ್ರೇಷ್ಠವಾದದ್ದು, ಆದ್ದರಿಂದ ಯಾವುದೇ ಭೇದ ಭಾವ ಬೇಡ. ಮೇಲು ಕೀಳೆಂಬ ಭಾವನೆ ಬೇಡ. ನಾವೆಲ್ಲರೂ ಭಾರತೀಯರು ಎಂಬ ಮನೋಭಾವದಿಂದ ಮುಂದೆ ಸಾಗೋಣ.
8) ಈ ಬಾರಿ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜೆಯನ್ನು ನಿಷೇಧಿಸಲಾಗಿರುತ್ತದೆ. ಆದ್ದರಿಂದ ಎಲ್ಲರೂ ಆದೇಶದನ್ವಯ ಸಾಗೋಣ.
9) ಬಂಟಿಂಗ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸುವಾಗ ಎಲ್ಲರಿಗೂ ಕೂಡ ಒಂದೇ ನಿಯಮವಿರುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಬ್ಬದ ಆಚರಣೆ ನಡೆಯುವಾಗ ಬರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದೆ ಸಾಗೋಣ.
10) ಸಮಾಜದಲ್ಲಿ ಶಾಂತಿ ಕಾಪಾಡುವುದು, ಸೌಹಾದರ್ತೆಯಿಂದ ಮುಂದೆ ಸಾಗುವುದು ನಮ್ಮ ಮೂಲ ಉದ್ದೇಶವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ 109 ಜನ ಕಿಡಿಗೇಡಿಗಳ ವಿರುದ್ಧ ಗಡಿಪಾರು ಕ್ರಮ ಕೈಗೊಂಡಿದ್ದು, ಲಕ್ಷಾಂತರ ಜನರು ಹಬ್ಬ ಆಚರಿಸುವಾಗ, ಕೆಲವು ಜನರು ಮಾಡುವ ಕೃತ್ಯದಿಂದ ಎಲ್ಲರ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಈ ಕ್ರಮ ಮುಖ್ಯವಾಗಿರುತ್ತದೆ.
11) ಮುಂಬರುವ ದಿನಗಳಲ್ಲಿ ಹಬ್ಬದ ಆಚರಣೆಗಳಿಗೆ ತೊಂದರೆ ನೀಡಬಹುದು ಎಂಬ ವ್ಯಕ್ತಿಗಳನ್ನು ಗುರುತಿಸಿ, ಅವರುಗಳ ವಿರುದ್ಧ ಮುಂಜಾಗ್ರತಾ ಕ್ರಮ ಪ್ರಕರಣಗಳನ್ನು ಸಹಾ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ ಹಾಗೂ ಇನ್ನೂ ಕೆಲವು ಜನ ಯುವಕರನ್ನು ಹಾಗೂ ಅವರುಗಳ ಪೋಷಕರನ್ನು ಸಹಾ ಪೊಲೀಸ್ ಠಾಣೆಗೆ ಕರೆದು ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆಯನ್ನು ಸಹಾ ನೀಡಲಾಗಿರುತ್ತದೆ. ಕೆಲವು ವೇಳೆ ಪೋಷಕರಿಗೆ ತಮ್ಮ ಮಕ್ಕಳು ಯಾವ ದಾರಿಯಲ್ಲಿ ಸಾಗುತ್ತಿದ್ದಾರೆಂಬ ಬಗ್ಗೆ ಮಾಹಿತಿ ಇರುವುದಿಲ್ಲ, ಆದ್ದರಿಂದ ನೀವೆಲ್ಲರೂ ತಮ್ಮ ಮಕ್ಕಳ ಬಗ್ಗೆ ಗಮನ ನೀಡಿ, ಅವರುಗಳಿಗೆ ಜವಾಬ್ದಾರಿಯ ಬಗ್ಗೆ ತಿಳುವಳಿಕೆ ನೀಡಿ.
12) ಹಬ್ಬದ ಆಚರಣೆಗೆ ಸೂಕ್ತ ಬೆಳಕಿನ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾಗಳು, ಬ್ಯಾರಿಕೇಡಿಂಗ್ ನಂತಹ ಅಗತ್ಯ ವ್ಯವಸ್ಥೆಯನ್ನು ಮಾಡುವ ಸಂಬಂಧ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿರುತ್ತದೆ. ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವು ಸನ್ನದ್ದವಾಗಿದ್ದು, ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ. ಪೊಲೀಸ್ ಇಲಾಖೆಯು ಸುರಕ್ಷತೆಯ ದೃಷ್ಟಿಯಿಂದ 1000 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಂಡಿದೆ. ಹೆಣ್ಣು ಮಕ್ಕಳು, ಸಣ್ಣ ಮಕ್ಕಳು ಹಾಗೂ ಸಾರ್ವಜನಿಕರ ರಕ್ಷಣೆಯ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿರಿ.
ಕಾನೂನಿನ ಪ್ರಕಾರ ನಾವೆಲ್ಲರೂ ಒಂದೇ, ಕಾನೂನಿಗೆ ಗೌರವ ನೀಡೋಣ. ಆದೇಶಗಳನ್ನು ಪಾಲನೆ ಮಾಡೋಣ. ವಿಜೃಂಭಣೆಯಿಂದ ಹಬ್ಬ ಆಚರಿಸೋಣ. ಎಲ್ಲರಿಗೂ ಮುಂಬರುವ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
ಈ ಸಂದರ್ಭದಲ್ಲಿ, ಶ್ರೀ ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, – 1 ಶಿವಮೊಗ್ಗ ಜಿಲ್ಲೆ. ಶ್ರೀ ರಮೇಶ್ ಕುಮಾರ್ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, – 2 ಶಿವಮೊಗ್ಗ ಜಿಲ್ಲೆ. ಶ್ರೀ ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ. ಶ್ರೀ ಸಂಜೀವ್ ಕುಮಾರ್ ಟಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ ಶ್ರೀ ಮುನಾವರ್, ಜಾಮಿಯ ಮಸೀದಿ ಕಮಿಟಿಯ ಅಧ್ಯಕ್ಷರು, ಶ್ರೀ ಸರ್ದಾರ್ ಬೇಗ್, ಈದ್ ಮಿಲಾದ್ ಕಮಿಟಿಯ ಅದ್ಯಕ್ಷರು, ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.