ಸಂಘಟನಾ ಶಕ್ತಿ ತುಂಬಿದ “ಶ್ರೀರಾಮ ತಾಳಮದ್ದಳೆ ಸಂಘ”ದವರ ತಾಳಮದ್ದಳೆ ಸಪ್ತಾಹ.

ಯಕ್ಷಗಾನದ ವಾಚಿಕ ವಿಭಾಗವಾದ ತಾಳಮದ್ದಳೆಯಲ್ಲಿ ಬಳಸುವ ಕನ್ನಡ ಭಾಷೆ ಶುದ್ಧ ಸ್ವರೂಪದಲ್ಲಿದ್ದು, ಅದು ಇತರ ಎಲ್ಲಾ ಕನ್ನಡದ ಕಲಾ ಪ್ರಕಾರಗಳಿಗೆ ಮಾದರಿ ಎನಿಸಿದೆ. ಈ ದಿಸೆಯಲ್ಲಿ ಶಿವಮೊಗ್ಗದ ಶ್ರೀರಾಮ ತಾಳಮದ್ದಳೆ ಸಂಘದವರು ಕೀರ್ತಿ ಶೇಷ ವೇದಬ್ರಹ್ಮ ಅ. ಪ. ರಾಮ ಭಟ್ಟರ ಸಂಸ್ಮರಣಾರ್ಥವಾಗಿ ಅರ್ಚಕ ವೃಂದ, ಶಿವಮೊಗ್ಗ ಇವರ ಸಹಕಾರದೊಂದಿಗೆ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ, ರವೀಂದ್ರನಗರ, ಶಿವಮೊಗ್ಗದಲ್ಲಿ ತಾಳಮದ್ದಲೆ ಸಪ್ತಾಹವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮ ವಿಭಿನ್ನ ಸ್ವರೂಪದಿಂದ ಕಲಾಭಿಮಾನಿಗಳ ಮನಸೂರೆಗೊಂಡಿತು.

ಸಾಮಾನ್ಯವಾಗಿ ಇಂಥ ಸಪ್ತಾಹದಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾ ಮತ್ತು ಭಾಷಾ ಪ್ರೌಢಿಮೆಯನ್ನು ಹೊಂದಿರುವ ಜನಪ್ರಿಯ ಕಲಾವಿದ ರನ್ನು ಜೊತೆಗೂಡಿಸಿಕೊಂಡು ತಾಳಮದ್ದಳೆಗಳನ್ನು ನಡೆಸುವುದು ವಾಡಿಕೆ. ಆದರೆ ನಮ್ಮ ಶ್ರೀರಾಮ ತಾಳಮದ್ದಳೆ ಸಂಘದವರು ಈ ವಾಡಿಕೆಯನ್ನು ದೂರಸರಿಸಿ, ಈಗಾಗಲೇ ಪ್ರಚಲಿತದಲ್ಲಿರುವ ಅರ್ಥಧಾರಿಗಳ ಜೊತೆಗೆ, ಸ್ಥಳೀಯ ಹವ್ಯಾಸಿ ಕಲಾವಿದರನ್ನು ಕೂಡಿಕೊಂಡು ತನ್ನ ಸಪ್ತಾಹ ತಾಳಮದ್ದಳೆಗಳನ್ನು ರಾಮಾಯಣ ಸರಣಿಯನ್ನಾಗಿಸಿ, ಸಪ್ತ ದಿನಗಳಲ್ಲಿಯೂ ಹೆಚ್ಚು ಚಾಲ್ತಿಯಲ್ಲಿರುವ ಪ್ರಸಂಗಗಳನ್ನು ಆಯ್ದುಕೊಂಡು “ಭೋ ರಾಮ ಮಾಮುದ್ಧರ” ಎಂಬ ಶೀರ್ಷಿಕೆಯಡಿಯಲ್ಲಿ ನಡೆಸಿಕೊಟ್ಟು ವಿಖ್ಯಾತವಾಯಿತು ಅಂದರೆ, ಅದು ಅತಿಶಯೋಕ್ತಿ ಏನಲ್ಲ.

ಶಿವಮೊಗ್ಗದ ಪ್ರಖ್ಯಾತ ಧಾರ್ಮಿಕ ಕೇಂದ್ರವಾದ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯವು ಕೀರ್ತಿಶೇಷ ವೇದಬ್ರಹ್ಮ ಅ.ಪ.ರಾಮ ಭಟ್ಟರ ಕಾಲದಿಂದಲೂ ಕಲೆ ಮತ್ತು ಕಲಾವಿದರ ಸ್ವರ್ಗ ಎಂದರೆ ಅದು ತಪ್ಪಲ್ಲ. ಒಬ್ಬ ಅರ್ಚಕನಾಗಿ ತನ್ನ ಬಹುಕಾಲವನ್ನು ಕಲೆ ಮತ್ತು ಕಲಾವಿದರಿಗಾಗಿ ಮೀಸಲಾಗಿಟ್ಟು, ಅದನ್ನು ಪೋಷಿಸಿಕೊಂಡು ಬಂದವರು ಶ್ರೀಯುತರು. ಅವರ ಸವಿನೆನಪಿಗಾಗಿ ಅವರ ಸುಪುತ್ರ ಶ್ರೀ ಶಂಕರನಾರಾಯಣ ಭಟ್ಟರು ಹಾಗೂ ಅವರ ಮಾತೃಶ್ರೀಯವರ ಸಂಪೂರ್ಣ ಸಹಕಾರದೊಂದಿಗೆ ಯಕ್ಷಗುರು ಶ್ರೀ ಐನಬೈಲು ಪರಮೇಶ್ವರ ಹೆಗಡೆಯವರ ಸಮರ್ಥ ಸಂಪೂರ್ಣ ನಿರ್ದೇಶನ ಮತ್ತು ವಿದ್ವಾನ್ ಪ್ರಶಾಂತ್ ಬೆಂಕಟವಳ್ಳಿ ಹಾಗೂ ವೇದಬ್ರಹ್ಮ ಶ್ರೀ ಸುದರ್ಶನ್ ಭಟ್ಟರ ಅಪೂರ್ವ ಮಾರ್ಗದರ್ಶನದಲ್ಲಿ ಸ್ಥಳೀಯ ಕಲಾಪೋಷಕರ ನೆರವಿನೊಂದಿಗೆ ಸಂಪನ್ನಗೊಂಡಿದ್ದು ಸಂಘದ ಹೆಚ್ಚುಗಾರಿಕೆ. ನಿರೀಕ್ಷೆಗೂ ಮೀರಿ ಪ್ರೇಕ್ಷಕರ ಗ್ಯಾಲರಿ ತುಂಬಿರುವುದು ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಸಂಘಟಕರಿಗೆ ಶಕ್ತಿ ತುಂಬಿದ್ದು ಸತ್ಯ.

ಸಪ್ತಾಹದ ಏಳು ದಿನವೂ ರಾಮಾಯಣ ಸರಣಿಯ ಏಳು ವಿಭಿನ್ನ ಪ್ರಸಂಗಗಳನ್ನು ಪ್ರಸ್ತುತಪಡಿಸಲಾಯಿತು. ದಿನಾಂಕ 17- 8 – 2025 ಭಾನುವಾರ
‘ ಶ್ರೀರಾಮ ಪಟ್ಟಾಭಿಷೇಕ’,18-08- 2025 ಸೋಮವಾರ ‘ ಪಾದುಕ ಪ್ರದಾನ’, 19-8 2025 ಮಂಗಳವಾರ ‘ಪಂಚವಟಿ’ 20-08-2025 ಬುಧವಾರ ‘ವಾಲಿ ಮೋಕ್ಷ’, 21 -08- 2025 ಗುರುವಾರ ‘ಅತಿಕಾಯ ಕಾಳಗ’ 22-08-2025 ಶುಕ್ರವಾರ ‘ಕುಂಭಕರ್ಣ- ಇಂದ್ರಜಿತು ವಧೆ’, ಮತ್ತು 23 -08- 2025 ಶನಿವಾರ ‘ರಾವಣ ವಧೆ’ ಪ್ರಸಂಗಗಳನ್ನು ನಡೆಸಿಕೊಡಲಾಯಿತು.

ಸಪ್ತಾಹದ ಸಪ್ತ ದಿನವೂ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಐನಬೈಲು ಪರಮೇಶ್ವರ ಹೆಗಡೆಯವರು, ಮದ್ದಳೆಯಲ್ಲಿ ಜೊತೆಯಾದವರು ಶ್ರೀ ಗಣಪತಿ ಪ್ರಭು, ಹಾಗೂ ಚಂಡೆಯಲ್ಲಿ ಸಾತ್ ಕೊಟ್ಟವರು ಶ್ರೀ ನವೀನ್ ಎನ್ ಜೆ ಉತ್ತಮ ನಿರ್ವಹಣೆ ತೋರಿದರು. ಅರ್ಥಗಾರಿಕೆಯಲ್ಲಿ ವಿದ್ವಾನ್ ಪ್ರಶಾಂತ್ ಬೆಂಕಟವಳ್ಳಿ, ವೇದಬ್ರಹ್ಮ ಸುದರ್ಶನ್ ಭಟ್, ಶ್ರೀ ವಿದ್ವಾನ್ ಜಿ ಎಸ್ ನಟೇಶ್, ಶ್ರೀ ರಾಮಮೂರ್ತಿ ತೆಮೆಮನೆ, ಶ್ರೀ ಅಚ್ಯುತ್ ಹೆಬ್ಬಾರ್ ಮರವಂತೆ, ಶ್ರೀಮತಿ ಕಿರಣ ಪೈ, ಶ್ರೀ ಶ್ರೀನಿವಾಸ ಆಚಾರ್ಯ ಬೆಳ್ವೆ, ಶ್ರೀಮತಿ ಶಶಿಕಲಾ ಹೆಬ್ಬಾರ್, ಶ್ರೀಮತಿ ಲಕ್ಷ್ಮಿ ಶಾಸ್ತ್ರಿ, ಶ್ರೀಮತಿ ವರದಾ ಐತಾಳ ಶ್ರೀಮತಿ ವೀಣಾ ಉದಯಕುಮಾರ್, ಶ್ರೀ ರವಿಶಂಕರ್ ಭಟ್ ಸಾಗರ, ಶ್ರೀಮತಿ ಭಾರತಿ ಸುದರ್ಶನ್, ಶ್ರೀ ಪ್ರತೀಕ ಬೆಂಕಟವಳ್ಳಿ, ಶ್ರೀಮತಿ ಮಲ್ಲಿಕಾ ರಾಘವೇಂದ್ರ ಭಟ್, ಕುಮಾರ ಸನಂದನ ಎಸ್ ಭಟ್ ಭಾಗವಹಿಸಿದ್ದರು.ಹಿಮ್ಮೆಳದವರ ಉತ್ತಮ ನಿರ್ವಹಣೆ ಮತ್ತು ಮುಮ್ಮೆಳದವರು ಅತ್ಯುತ್ತಮ ವಾಗಿ ಪ್ರಸ್ತುತಪಡಿಸಿದ ಆಕರ್ಷಕ ಪಾತ್ರ ‘ಹಳೇ ಬೇರು – ಹೊಸ ಚಿಗುರು’ ಎಂಬಂತೆ, ಹಿರಿ-ಕಿರಿಯ ಕಲಾವಿದರ ಕೂಡುವಿಕೆ ಗಮನ ಸೆಳೆಯುವಂತಿತ್ತು.

ಸಪ್ತಾಹದ ಕೊನೆಯ ದಿನ ದಿನಾಂಕ 23.08.2025 ರಂದು ಯಕ್ಷಗಾನ ಕಲೆಯ ನಮ್ಮ ಶಿವಮೊಗ್ಗದ ಹಿರಿಯ ತಾಳಮದ್ದಳೆ ಅರ್ಥಧಾರಿಗಳಾದ ಶ್ರೀ ಸಿ.ಎಸ್. ಚಂದ್ರಶೇಖರ್ ಹೊಸಗದ್ದೆ ಅವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಅಭ್ಯುದಯ ಸಂಸ್ಥೆಯ ಶ್ರೀ ಲಕ್ಷ್ಮಿನಾರಾಯಣ ಕಾಶಿಯವರು ಹಾಗೂ ಶ್ರೀ ಐನಬೈಲು ಪರಮೇಶ್ವರ ಹೆಗಡೆಯವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ವಿದ್ವಾನ್ ಪ್ರಶಾಂತ್ ಬೆಂಕಟವಳ್ಳಿ ಅವರ ಸಮಾರೋಪ ಮತ್ತು ಕೃತಜ್ಞತಾ ನುಡಿಗಳೊಂದಿಗೆ ಸಭಾ ಕಾರ್ಯಕ್ರಮ ಮುಗಿಸಲಾಯಿತು. ಕೊನೆಯಲ್ಲಿ ಸಹಕರಿಸಿದ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕ ವೃಂದದವರನ್ನು ಸ್ಮರಿಸುವುದರ ಮೂಲಕ, ಕಲಾಪೋಷಕರು ಮತ್ತು ಭಾಗವಹಿಸಿದ ಸರ್ವ ಕಲಾವಿದರನ್ನು ಗೌರವ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಒಟ್ಟಾರೆ ಪ್ರಸನ್ನ ಗಣಪತಿ ಪ್ರಸನ್ನನಾಗಿದ್ದಂತೂ ಸತ್ಯ.

ಬರಹ: ಶ್ರೀನಿವಾಸ್ ಆಚಾರ್ಯ ಶಿವಮೊಗ್ಗ