ದಶಕಗಳ ಹಿಂದೆ ದಾಖಲೆ ಸಲ್ಲಿಸಿ ಆಧಾರ್ನೋಂದಾಯಿಸಿಕೊಂಡಿರುವವರು ಪ್ರಸ್ತುತ ವಾಸಸ್ಥಳದ ವಿವರಗಳನ್ನು ತಮ್ಮ ಸಮೀಪದ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕುಗಳು ಅಥವಾ ಆಧಾರ್ ಸೇವಾ ಕೇಂದ್ರಗಳಲ್ಲಿ ಸಲ್ಲಿಸಿ, ಆಧಾರ್ ನವೀಕರಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಅವರು ತಮ್ಮ ಕಚೇರಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಆಧಾರ್ ನೋಂದಣಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಐದು ವರ್ಷದೊಳಗಿನ ಎಲ್ಲಾ ಮಕ್ಕಳ ಪೋಷಕರು ತಮ್ಮ ಮಕ್ಕಳ ಆಧಾರ್ ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ಆಧಾರ್ ನೋಂದಣಿ ಮಾಡಿಸಿದ್ದು, 5 ವರ್ಷಗಳ ಅವಧಿ ಪೂರ್ಣಗೊಂಡಿರುವ 92,317ಮಕ್ಕಳುಗಳು ಬಯೋಮೆಟ್ರಿಕ್ ಗುರುತನ್ನು ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೇ 15ವರ್ಷ ಮೇಲ್ಪಟ್ಟ 85,209ಮಕ್ಕಳಿದ್ದು, ಆಧಾರ್ ನವೀಕರಿಸಿಕೊಳ್ಳುವಂತೆ ಅವರು ಸೂಚಿಸಿದ್ದಾರೆ.
ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಸುಮಾರು 27,533ಮಕ್ಕಳು ಈವರೆಗೆ ಆಧಾರ್ ನೋಂದಣಿ ಮಾಡಿಸದಿರುವುದನ್ನು ಗುರುತಿಸಲಾಗಿದೆ. ಈವರೆಗೆ ಆಧಾರ್ ಮಾಡಿಸದಿರುವ ಮಕ್ಕಳ ಪೋಷಕರು ಕೂಡಲೇ ಆಧಾರ್ನೋಂದಣಿಗೆ ಮುಂದಾಗುವಂತೆ ಸೂಚಿಸಿರುವ ಅವರು, ಆಧಾರ್ ನೋಂದಣಿಗಾಗಿ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗಳಲ್ಲಿಯೇ ಶಾಲಾ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿ ಆಧಾರ್ ನೋಂದಾಯಿಸಿಕೊಳ್ಳಬಹುದಾಗಿದೆ.
ಅದಕ್ಕಾಗಿ ಶಾಲಾ ಶಿಕ್ಷಕರಿಗೆ ನೋಂದಣಿ ತರಬೇತಿ ನೀಡಲಾಗಿದೆ ಎಂದ ಅವರು, ಶೇ.26.03ರಷ್ಟು ಮಕ್ಕಳು ನೋಂದಾಯಿಸಿರುವ ಹೆಸರು-ವಿಳಾಸ, ಮೊ.ನಂಬರ್ಗಳಲ್ಲಿ ವೆತ್ಯಾಸಗಳಿದ್ದು, ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಅವರು ತಿಳಿಸಿದರು. ಅದಕ್ಕಾಗಿ ಆಧಾರ್ ನೋಂದಣಿ, ನವೀಕರಣ ಹೆಚ್ಚಿಸಲು ಬ್ಯಾಂಕುಗಳ ಮೂಲಕ ಹೋಬಳಿ ಕೇಂದ್ರ ಮತ್ತು ಶಾಲಾ ಹಂತದಲ್ಲಿ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗಿದ್ದು, ನೋಂದಣಿ ಕಿಟ್ ನ್ನು ನೀಡಲಾಗುವುದು. ಮುಂದಿನ ಒಂದು ವರ್ಷದೊಳಗಾಗಿ ಆಧಾರ್ ನೋಂದಣಿ, ನವೀಕರಣ ಕಾರ್ಯ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಶಾಲಾ ಮಕ್ಕಳ ಆಧಾರ್ ನೋಂದಣಿಯಿಂದ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ತಪ್ಪಿದಲ್ಲಿ ಸಿ.ಇ.ಟಿ. ಮತ್ತಿತರ ಪ್ರವೇಶ ಪರೀಕ್ಷೆಗಳಿಗೆ, ವಿದ್ಯಾರ್ಥಿ ವೇತನ ಪಡೆಯಲು ಸಹಕಾರಿಯಾಗಲಿದೆ. ತಪ್ಪಿದಲ್ಲಿ ಅನಾನುಕೂಲವಾಗಲಿದೆ ಎಂದ ಅವರು, ಶಾಲಾ ಶಿಕ್ಷಣ ಇಲಾಖೆ ಮತ್ತು ಪದವೀಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಮ್ಮ ಅಧೀನ ಅಧಿಕಾರಿಗಳಿಗೆ ಆಧಾರ್ ನೋಂದಣಿಯ ಕುರಿತು ಮಾಹಿತಿ ನೀಡುವಂತೆ ಅವರು ಸೂಚಿಸಿದರು.
ಯಾವುದೇ ಆಧಾರ್ ಕೇಂದ್ರವು ಅನಧಿಕೃತ, ವಂಚನೆಯ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದರೆ, ಅಕ್ರಮ ವಲಸಿಗರು ಆಧಾರ್ಗೆ ದಾಖಲಾಗಲು ಪ್ರಯತ್ನಿಸಿದರೆ, ಜಿಲ್ಲಾ ಕಾನೂನು ಜಾರಿ ಪ್ರಾಧಿಕಾರ (ಪೊಲೀಸ್ ಅಧೀಕ್ಷಕರು) ಎಫ್ ಐ ಆರ್ ದಾಖಲಿಸುವ, ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಆಧಾರ್ ಕಾಯ್ದೆಯನ್ವಯ ಜಿಲ್ಲಾ ಸಮಿತಿಯು ಕ್ರಮ ಕೈಗೊಳ್ಳಲಿದೆ ಎಂದವರು ನುಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಆಧಾರ್ ಸಂಬಂಧಿತ ಅಧಿಕಾರಿ-ಸಿಬ್ಬಂದಿಗಳು, ಜಿಲ್ಲಾ ಸಮಿತಿ ಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.